ಮಳೆ ಬಲು ಜೋರು, ಆದರೂ ನದಿಯಲ್ಲಿಲ್ಲ ನೀರು

ಮಳೆ ಬಲು ಜೋರು, ಆದರೂ ನದಿಯಲ್ಲಿಲ್ಲ ನೀರು

ಬತ್ತುತ್ತಿರುವ ನದಿ, ಕುಸಿಯುತ್ತಿರುವ ಅಂತರ್ಜಲಕ್ಕೆ ಬೇಕಿದೆ ಪರಿಹಾರ : ಬಂಡಿವಡ್ಡರ್‌

ದಾವಣಗೆರೆ, ಡಿ. 14 – ಕರ್ನಾಟಕದಲ್ಲಿ ಇತ್ತೀಚಿನ ದಶಕಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ನೀರಿನ ಅತಿ ಬಳಕೆಯಿಂದಾಗಿ ನದಿಗಳು ಅತಿ ವೇಗವಾಗಿ ಬತ್ತುತ್ತಿವೆ ಎಂದು  ಧಾರವಾಡದ ಜಲ ಹಾಗೂ ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ನಿರ್ದೇಶಕ ಬಿ.ವೈ. ಬಂಡಿವಡ್ಡರ ಕಳವಳ ವ್ಯಕ್ತಪಡಿಸಿದರು.

ನಗರದ ಯು.ಬಿ.ಡಿ.ಟಿ. ಕಾಲೇಜಿನಲ್ಲಿ ಜಲ ಹಾಗೂ ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಸಹಯೋಗದಲ್ಲಿ ಇಂದು ಆಯೋಜಿಸಲಾಗಿದ್ದ ನೀರಾವರಿ ನಿರ್ವಹಣೆ ಹಾಗೂ ಜಲ ಮೂಲಗಳ ಸಂರಕ್ಷಣೆ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಮೊದಲು ನದಿಗಳಲ್ಲಿ ಹತ್ತು ತಿಂಗಳವರೆಗೂ ನೀರು ಹರಿಯುತ್ತಿತ್ತು. ಇತ್ತೀಚಿನ ದಶಕಗಳಲ್ಲಿ ನದಿಗಳಲ್ಲಿ ನೀರು ಹರಿಯುವ ದಿನಗಳ ಪ್ರಮಾಣ ಗಣನೀಯವಾಗಿ ಕಡಿಮೆ ಯಾಗುತ್ತಿವೆ. ಮಳೆ ಉತ್ತಮವಾಗಿರುವ ವರ್ಷಗಳಲ್ಲೂ ನದಿಗಳು ಬೇಗನೇ ಬತ್ತುತ್ತಿವೆ. ಜಲ ಮೂಲಗಳ ಅತಿ ಯಾದ ಬಳಕೆಯೇ ಇದಕ್ಕೆ ಕಾರಣ ಎಂದವರು ಹೇಳಿದರು.

ತುಂಗಭದ್ರಾ ನದಿಯಲ್ಲಿ ಈಗ ಶೇ.20-25ರಷ್ಟು ಮಾತ್ರ ನೀರು ಹರಿಯುತ್ತಿದೆ. ಅರ್ಕಾವತಿ ನದಿ ಬಹುತೇಕ ಬತ್ತಿ ಹೋಗಿದೆ. ವೃಷಭಾವತಿ ನದಿ ಈಗ ಬೆಂಗಳೂರಿನ ಮೋರಿಯಾಗಿದೆ. ಬಹುತೇಕ ಎಲ್ಲ ನದಿಗಳು ಈಗ ಸೊರಗುತ್ತಿವೆ ಎಂದವರು ವಿಷಾದಿಸಿದರು.

ರಾಜ್ಯದಲ್ಲಿ ಸುರಿಯುವ ಶೇ.60ರಷ್ಟು ಮಳೆ ನೀರು ಪಶ್ಚಿಮ ಭಾಗದಿಂದ ಸಮುದ್ರ ಸೇರುತ್ತಿದೆ. ಉಳಿದ ಶೇ.40ರಷ್ಟು ನೀರು ಮಾತ್ರ ಉಳಿದ ಭಾಗಗಳಿಗೆ ಲಭ್ಯವಿದೆ. ಪಶ್ಚಿಮ ಘಟ್ಟಗಳ ಹೊರತಾಗಿ ರಾಜ್ಯದ ಬಹಳಷ್ಟು ಭಾಗ ಮಳೆಯ ಕೊರತೆ ಹಾಗೂ ಅಂತರ್ಜಲ ಕುಸಿತದ ಸಮಸ್ಯೆ ಎದುರಿ ಸುತ್ತಿದೆ ಎಂದವರು ಕಳವಳ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಪಶ್ಚಿಮ ಘಟ್ಟ ಹೊರತು ಪಡಿಸಿದರೆ ಬಹುತೇಕ ಉಳಿದ ಎಲ್ಲೆಡೆ ಅಂತರ್ಜಲದ ಪ್ರಮಾಣ ಕುಸಿಯುತ್ತಿದೆ. ಕರ್ನಾಟಕ ಈಗ ಅಂತರ್ಜಲ ಒತ್ತಡಕ್ಕೆ ಸಿಲುಕಿರುವ ರಾಜ್ಯವಾಗಿದೆ. ಮನೆಗೊಂದರಂತೆ ಬೋರ್ ಕೊರೆಸುವುದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತಿದೆ.

ರಾಜ್ಯದಲ್ಲಿ 98.406 ಕೆಎಂ3 ಪ್ರಮಾಣದ ಮಳೆ ಬರುತ್ತಿದೆ. 3,475 ಟಿ.ಎ.ಸಿ. ನೀರು ಲಭ್ಯವಿದ್ದು, ಇದ ರಲ್ಲಿ 1,690 ಟಿಎಂಸಿ ನೀರು ಬಳಸಿಕೊಳ್ಳಲು ಅವಕಾಶ ಇದೆ. ಇದೇನೂ ಕಡಿಮೆ ಪ್ರಮಾಣವಲ್ಲ. ಆದರೆ ನೀರಿನ ಸರಿಯಾದ ಬಳಕೆಯಾಗುತ್ತಿಲ್ಲ ಎಂದವರು ವಿಷಾದಿಸಿದರು.

ಮಳೆ ನೀರು ಕೊಯ್ಲು, ನೀರಿನ ಮರು ಬಳಕೆ, ಸಂರಕ್ಷಣೆ ಮುಂತಾದ ಕ್ರಮಗಳಿಗೆ ಮುಂದಾಗಬೇಕು. ಜಲ ಸಂರಕ್ಷಣೆಯಿಂದ ಮಾತ್ರ ಸಮೃದ್ಧ ಜೀವನ ಸಾಧ್ಯ ಎಂದು ಬಂಡಿವಡ್ಡರ ಹೇಳಿದರು.

error: Content is protected !!