ಜನನ-ಮರಣ ಚಕ್ರ ಯಾರಿಗೂ ತಪ್ಪಿದ್ದಲ್ಲ

ಜನನ-ಮರಣ ಚಕ್ರ ಯಾರಿಗೂ ತಪ್ಪಿದ್ದಲ್ಲ

ಡಾ. ಬಸವರಾಜ ರಾಜಋಷಿ

ದಾವಣಗೆರೆ, ಡಿ. 14- ಪ್ರತಿಯೊಬ್ಬರಿಗೂ ಜನನ-ಮರಣ ಚಕ್ರವಿದೆ. ಅದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಹೇಳಿದರು.

ಇಲ್ಲಿನ ವಿದ್ಯಾನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾ ಲಯದ ಆವರಣದಲ್ಲಿ  ನಡೆಯುತ್ತಿರುವ `ಶರಣರು ಕಂಡ ಶಿವ’ ಪ್ರವಚನ ಮಾಲೆಯ 11ನೇ ದಿನವಾದ ಗುರುವಾರದ ಸಮಾರಂಭ ದಲ್ಲಿ ಅವರು ಪ್ರವಚನ ನೀಡಿದರು.

ನಾವೆಲ್ಲಾ ಆತ್ಮಗಳು, 4 ಯುಗಗಳಿಂ ದಲೂ ನಾವು ಜನನ-ಮರಣ ಚಕ್ರದಲ್ಲಿ ಸಾಗಿ ಬಂದಿದ್ದೇವೆ. ಪಾಪ ಮಾಡಿದವರು ದುಃಖಿ ಗಳಾಗುತ್ತಾರೆ. ಪುಣ್ಯ ಮಾಡಿದವರು ಸುಖ ಜೀವಿಗಳಾಗಿ ಬಾಳುತ್ತಾರೆ ಎಂದು ತಿಳಿಸಿದರು.

ಈ ಶರೀರದಲ್ಲಿರುವುದು ಆತ್ಮ, ಪರ ಮಾತ್ಮ ಅಲ್ಲ ಎಂದು ಭಗವದ್ಗೀತೆಯಲ್ಲಿ ಸ್ಪಷ್ಟ ವಾಗಿ ಹೇಳಲಾಗಿದೆ. ಹುಟ್ಟು-ಸಾವು ಅನಿವಾರ್ಯ. ಇದರಿಂದ ಬಿಡಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದು ಶ್ರೀ ಕೃಷ್ಣ- ಅರ್ಜುನನಿಗೆ ಹೇಳಿದ್ದಾನೆ ಎಂದು ಹೇಳಿದರು.

ಪುನರ್ಜನ್ಮಗಳ ಬಗ್ಗೆ ಶಿವಶರಣರೂ ತಮ್ಮ ವಚನಗಳಲ್ಲಿ ಸ್ಪಷ್ಟಪಡಿಸಿದ್ದರೆ. ನಾಲ್ಕು ಯುಗದಲ್ಲೂ ಬಸವಣ್ಣನವರು ಯಾವ ಯಾವ ಹೆಸರಿನಿಂದ ಜನ್ಮ ಪಡೆದಿದ್ದಾರೆ ಎಂದು ಅಲ್ಲಮಪ್ರಭುಗಳು ತಮ್ಮ ತಪೋಬಲದಿಂದ ಹೇಳಿ ದ್ದಾರೆ. ಅಷ್ಟೇ ಅಲ್ಲ, ತಾವೂ ಸಹ ಅನೇಕ ಜನ್ಮಗಳನ್ನು ಪಡೆದ ಇತಿಹಾಸವನ್ನು ಸ್ವಯಂ ಹೇಳಿ ಕೊಂಡಿದ್ದಾರೆ. ಆದ್ದರಿಂದ ಪ್ರತಿ ಯೊಬ್ಬರಿಗೂ ಜನನ ಮರಣ ಚಕ್ರವಿದೆ. ಪರಮಾತ್ಮನೊಬ್ಬನಿಗೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸತ್ಯಯುಗ ಭಗವಂತನಿಂದ ಸೃಷ್ಟಿಸಲ್ಪಟ್ಟ ಯುಗ.  ಸತ್ಯ ಯುಗ ಹಾಗೂ ತ್ರೇತಾಯುಗ ದಲ್ಲಿ ನಾವೆಲ್ಲಾ ದೇವತೆಗಳಾಗಿದ್ದೆವು. ದ್ವಾಪರ ಯುಗದಲ್ಲಿ ರಜೋ ಅವಸ್ಥೆಯಲ್ಲಿ ಸ್ವಲ್ಪ ದುಃಖ ಆವರಿಸಿ, ಭಗವಂತನ ಧ್ಯಾನ ಮಾಡಿದ್ದೇವೆ. ಈಗಿನ ಕಲಿಯುಗದಲ್ಲಿ ಭಗವಂತನ ಮೇಲಿನ ನಂಬಿಕೆಯೇ ದೂರವಾಗಿದೆ. 

ಅಧ್ಯಾತ್ಮಿಕ ಶಬ್ಧದ ಅರ್ಥವೇ ಗೊತ್ತಿಲ್ಲ. ಇಂತಹ ಪರಿಸ್ಥಿತಿಗೆ ಶರಣರ ಜೀವನ ಆಧಾರ ಮಾಡಿಕೊಳ್ಳ ಬೇಕಾದರೆ ಶರಣರ ತತ್ವ, ಅಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿ ಕೊಂಡಾಗಲೇ ತೃಪ್ತಿ ಸಿಗಲು ಸಾಧ್ಯ ಎಂದರು.

ಪ್ರಸ್ತುತ ವಿಜ್ಞಾನದ ಜಗತ್ತಿನಲ್ಲಿ ಡಾರ್ವಿನ್ ಸಿದ್ದಾಂತ ಓದಿ ಓದಿ ನಾಸ್ತಿಕರಾಗಿದ್ದೇವೆ. ಮನಶ್ಯಾಸ್ತ್ರ ಬೋಧಿಸಿ ಮೆದುಳೇ ಎಲ್ಲಾ, ಅದರಾಚೆಗೆ ಏನೂ ಇಲ್ಲ ಎಂದು ತಿಳಿದಿದ್ದೇವೆ. ಆಧುನಿಕ ಸೈಕಾಲಜಿ ನಮ್ಮನ್ನು ನಾಸ್ತಿಕರನ್ನಾಗಿ ಮಾಡುವುದಷ್ಟೇ ಅಲ್ಲ. ಅಜ್ಞಾನಿಗಳನ್ನಾಗಿಯೂ ಮಾಡಿದೆ ಎಂದು ಹೇಳಿದರು.

ಈಶ್ವರೀಯ ವಿಶ್ವವಿದ್ಯಾ ಲಯದ ದಾವಣಗೆರೆ ಶಾಖೆಯ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾ ಕುಮಾರಿ ಲೀಲಾಜಿ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. 

ನೇರ ಪ್ರಸಾರ : 

ಸುದೀರ್ಘ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ 1 ಗಂಟೆ ಸಮಯ ನಡೆಯುವ ಈ ಪ್ರವಚನವನ್ನು ನೇರ ಪ್ರಸಾರ ವೀಕ್ಷಿಸಲು ಯು ಟ್ಯೂಬ್ ಚಾನಲ್ಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada)  ವೀಕ್ಷಿಸಬಹುದು.

error: Content is protected !!