ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಸಿಗದಿದ್ದರೆ ಮುಂದಿನ ಪೀಳಿಗೆಗೆ ಕಷ್ಟ

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಸಿಗದಿದ್ದರೆ ಮುಂದಿನ ಪೀಳಿಗೆಗೆ ಕಷ್ಟ

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಮಹಿಳಾ ಘಟಕ ಉದ್ಘಾಟಿಸಿದ ರಾಜ್ಯ ಮಹಿಳಾ ಸಂಚಾಲಕಿ  ಮುಕ್ತಾ ಕಾಗಲಿ

ದಾವಣಗೆರೆ, ಡಿ.13 – ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗದಿದ್ದರೆ ಮುಂದಿನ ಪೀಳಿಗೆಗೆ ಕಷ್ಟವಾಗುತ್ತದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಮಹಿಳಾ ಸಂಚಾಲಕಿ ಮುಕ್ತಾ ಕಾಗಲಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಸರಸ್ವತಿ ಬಡಾವಣೆಯ ಬಸವ ಬಳಗದ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಮಹಿಳಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಕ್ಕೆ ಧರ್ಮವೇ ಸರಿಯಾದ ಪದ.  ಸಮಾಜಕ್ಕೆ ಒಳಿತು ಮಾಡುವುದೇ ಧರ್ಮ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಜಾತಿಗೆ ಮೀರಿದ ಧರ್ಮವನ್ನು ನಮಗೆ ಕೊಟ್ಟಿದ್ದಾರೆ. ಅದಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಅದಕ್ಕೆ ಕಾರಣ ಯಾರು? ಎಂದು ಪ್ರಶ್ನಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಮಹಿಳೆಯರಲ್ಲಿನ ಶಕ್ತಿ ಅರಿತ ಬಸವಣ್ಣನವರು, ಅವರು ವಿಚಾರವಂತರಾಗಲೀ ಎಂದು ಅಂದೇ ವೇದಿಕೆ ಕಲ್ಪಿಸಿಕೊಟ್ಟಿದ್ದರು. ಧರ್ಮದ ಬಗೆಗಿನ ಗೊಂದಲಗಳನ್ನು ನಿವಾರಿಸಲು ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ವೈಚಾರಿಕತೆ ಬೆಳೆಸಿಕೊಳ್ಳಬೇಕು. ಆಗ ಸತ್ಯಾಸತ್ಯತೆ ತಿಳಿಯಲು  ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಪಾಂಡೋಮಟ್ಟಿ-ಕಮ್ಮತ್ತಹಳ್ಳಿ ವಿರಕ್ತಮಠದ ಡಾ.ಗುರುಬಸವ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ, ಶರಣರ ವಚನ ಸಾಹಿತ್ವದ ವಿಚಾರವನ್ನು ಮನೆ ಮನೆಗ ತಲುಪಿಸುವ ಉದ್ದೇಶದಿಂದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಮಹಿಳಾ ಘಟಕ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಇದು ಯಾವುದೇ ಘಟಕಕ್ಕೆ ಪರ್ಯಾಯವಲ್ಲ. ಮಹಿಳೆಯರಲ್ಲಿ ಧರ್ಮ ಜಾಗೃತಿ ಮೂಡಿಸುವುದು, ಧರ್ಮದ ಬಗ್ಗೆ ಗೊಂದಲದಲ್ಲಿ ಸಿಕ್ಕ ಜನರಿಗೆ ಸ್ಪಷ್ಟತೆ ನೀಡುವುದು ಈ ಘಟಕದ ಉದ್ದೇಶ ಎಂದು ಹೇಳಿದರು.

ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಎಚ್.ಎಂ. ಸೋಮಶೇಖರಪ್ಪ ಮಾತನಾಡಿ, “ಲಿಂಗಾಯತ ಧರ್ಮಕ್ಕೆ ಸಮಾನವಾದ ಧರ್ಮ ಮತ್ತೊಂದಿಲ್ಲ. ಬಸವಾದಿ ಶರಣರ ಸಾಮಾಜಿಕ ಚಳವಳಿಯಿಂದ ಹುಟ್ಟಿದ ಲಿಂಗಾಯತ ಧರ್ಮವು ಎಲ್ಲ ತಳ ಸಮುದಾಯದವರನ್ನು ಬರ ಸೆಳೆದು ಅಪ್ಪಿಕೊಂಡಿತು. ಹೀಗಾಗಿ, ಲಿಂಗಾಯತರು ಹಿಂದೂಗಳಾಗಲು ಸಾಧ್ಯವಿಲ್ಲ. ಬಸವಣ್ಣನವರ ಆಶಯದಂತೆ ಅಂತರ್ಜಾತಿ ವಿವಾಹವಾಗುವುದು ಒಂದೆಡೆಗಿರಲಿ, ಕನಿಷ್ಠ ಪಕ್ಷ ಲಿಂಗಾಯತ ಒಳ ಪಂಗಡಗಳಲ್ಲಾದರೂ ಮದುವೆ ಸಂಬಂಧ ಬೆಳೆಸುವ ಔದಾರ್ಯ ತೋರಬೇಕು” ಎಂದು ಕಿವಿಮಾತು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಸಮಿತಿ ಕಾರ್ಯದರ್ಶಿ ಮಹಾಂತೇಶ್ ಅಗಡಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 12ನೇ ಶತಮಾನದಲ್ಲಿ ಬಸವಾದಿ ಶಿವಶರಣರಿಂದ ಸ್ಥಾಪಿತವಾದ ಸ್ವತಂತ್ರ ಧರ್ಮ ಲಿಂಗಾಯತ ಧರ್ಮ ಎಂದು ಹೇಳಿದರು.

ಬಸವಣ್ಣನವರಿಗೆ ಉಪನಯನ ಮಾಡುವ ಸಂದರ್ಭದಲ್ಲಿ ಜನವಾರ ಹಾಕುವಾಗ ತನ್ನ ಅಕ್ಕನಿಗೆ ಇಲ್ಲದ್ದು ತನಗೂ ಬೇಡ ಎಂದು ಮನೆಯಿಂದ ಹೊರ ಬಂದುದು ಮಹಿಳೆಯರ ಮೇಲೆ ಅವರಿಗಿದ್ದ ಕಳಕಳಿ ತೋರಿಸುತ್ತದೆ. ಲಿಂಗಾಯತ ಧರ್ಮ ಮ ಹಿಳಾ ಸಮಾನತೆಗಾಗಿ ಹುಟ್ಟಿದ ಧರ್ಮ ಎಂದರು.

ಮುಂದಿನ ಪೀಳಿಗೆಗೆ ಲಿಂಗಾಯತ ಧರ್ಮದ ಆಚಾರ, ವಿಚಾರ, ವಚನ ಸಾಹಿತ್ಯದ ಕುರಿತು ತಿಳಿಸಿಕೊಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಪದಾಧಿಕಾರಿಗಳು: ಗೌರವಾಧ್ಯಕ್ಷರಾಗಿ ಮಂದಾಕಿನಿ ಸ್ವಾಮಿ, ಅಧ್ಯಕ್ಷರಾಗಿ ಕುಸುಮಾ ಲೋಕೇಶ್, ಉಪಾಧ್ಯಕ್ಷರಾಗಿ ವಿನೋದ ಅಜಗಣ್ಣನವರ್, ಶಿವಬಸವ್ವ ಕಲಕೋಟಿ, ಮಧುಮತಿ ಗಿರೀಶ್, ಪ್ರಧಾನ ಕಾರ್ಯದರ್ಶಿಯಾಗಿ ರೇಖಾ ಓಂಕಾರಪ್ಪ, ಖಜಾಂಚಿಯಾಗಿ ಮಮತಾ ನಾಗರಾಜ್, ಸಹ ಕಾರ್ಯದರ್ಶಿಯಾಗಿ ಪೂರ್ಣಿಮ ಪ್ರಸನ್ನಕುಮಾರ್ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಶೈಲಜಾ ತಿಮ್ಮೇಶ್ ಇಂದು ಪದಗ್ರಹಣ ಸ್ವೀಕರಿಸಿದರು.

ಬಸವ ಬಳಗದ ಅಧ್ಯಕ್ಷ ಎ.ಹೆಚ್. ಹುಚ್ಚಪ್ಪ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಹೆಚ್.ಎಂ. ಸೋಮಶೇಖರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಕದಳಿ ಮಹಿಳಾ ವೇದಿಕೆಯ ಪೂರ್ಣಿಮಾ ಪ್ರಸನ್ನ ಕುಮಾರ್ ಹಾಗೂ ತಂಡದವರು ವಚನ ಗಾಯನದ ಮೂಲಕ ಪ್ರಾರ್ಥನೆ ನಡೆಸಿಕೊಟ್ಟರು.  ಮಹಾಸಭಾದ ಕಾರ್ಯದರ್ಶಿ ಮರುಳಸಿದ್ದಯ್ಯ ಸ್ವಾಗತಿಸಿದರು. ಬಸವ ಕಲಾ ಲೋಕದವರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

error: Content is protected !!