ಚಿಗಟೇರಿ ಆಸ್ಪತ್ರೆಗೆ 3.35 ಕೋ.ರೂ. ಉಪಕರಣಗಳ ಹಸ್ತಾಂತರ

ಚಿಗಟೇರಿ ಆಸ್ಪತ್ರೆಗೆ 3.35 ಕೋ.ರೂ. ಉಪಕರಣಗಳ ಹಸ್ತಾಂತರ

ಪವರ್‌ಗ್ರಿಡ್ ಕಾರ್ಪೊರೇಷನ್ ಸಿ.ಎಸ್.ಆರ್. ನಿಧಿಯಿಂದ ಕೊಡುಗೆ

ದಾವಣಗೆರೆ, ಡಿ. 13 –  ಪವರ್ ಗ್ರಿಡ್ ನಿಗಮದ ದಕ್ಷಿಣ ಪ್ರಾಂತ್ಯದ ಹಿರಿಯೂರು ಉಪ ಕೇಂದ್ರದ ವತಿಯಿಂದ  3.35 ಕೋಟಿ ರೂ. ವೆಚ್ಚದ ವಿವಿಧ ವೈದ್ಯಕೀಯ ಉಪಕರಣಗಳನ್ನು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪವರ್ ಗ್ರಿಡ್ ಪ್ರಧಾನ ಮಹಾಪ್ರಬಂಧಕ ಮಿಥಿಲೇಶ್ ಕುಮಾರ್ ಅವರು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಅವರಿಗೆ ಉಪಕರಣ ಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಸಿ.ಎಸ್.ಆರ್. (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಯೋಜನೆಯಡಿ ಈ ಉಪಕರಣಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಹಾಪ್ರಬಂಧಕ ಮಿಥಿಲೇಶ್ ಕುಮಾರ್, ಸಿ.ಎಸ್.ಆರ್. ಯೋಜನೆ ಜಾರಿಯಾಗುವುದಕ್ಕೆ ಮೊದಲಿ ನಿಂದಲೂ ಕಂಪನಿಯು ಸಾಮಾಜಿಕ ಹೊಣೆಗಾರಿಕೆ ಗಳನ್ನು ನಿರ್ವಹಿಸುತ್ತಾ ಬಂದಿದೆ. ಹಾಲಿನ ಡೈರಿಗಳಿಗೆ ಕಂಪನಿ ನೆರವು ನೀಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ. ವಿ. ವೆಂಕಟೇಶ್, ಚಿಗಟೇರಿ ಆಸ್ಪತ್ರೆಗೆ ಸುತ್ತಲಿನ ಐದು ಜಿಲ್ಲೆಗಳ ಬಡವರು ಹಾಗೂ ಸಮಾಜದ ಅತ್ಯಂತ ದಮನಿತರು ಚಿಕಿತ್ಸೆಗಾಗಿ ಬರುತ್ತಾರೆ. ಈಗ ನೀಡಲಾಗಿರುವ ಉಪಕರಣಗಳು ಬಡವರ ಕಣ್ಣೀರು ಒರೆಸಲು ನೆರವಾಗಲಿವೆ ಎಂದರು. ಅಲ್ಟ್ರಾಸೌಂಡ್, ಲ್ಯಾಪ್ರೋಸ್ಕೊಪಿ, ಎಂಡೋಸ್ಕೋಪಿ, ಎಕ್ಸ್‌ರೇ ಹಾಗೂ ರಕ್ತ ಬ್ಯಾಂಕ್‌ಗೆ ಬಳಸಲಾಗುವ ಉಪಕರಣಗಳನ್ನು ಕಂಪನಿ ಸಿ.ಎಸ್.ಆರ್. ನಿಧಿಯಿಂದ ನೀಡಿದೆ. ಇದು ಅತ್ಯಂತ ಸ್ವಾಗತಾರ್ಹ ಎಂದರು.

ಕಾರ್ಯಕ್ರಮದ ವೇದಿಕೆ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಷಣ್ಮುಖಪ್ಪ,  ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗೇಂದ್ರಪ್ಪ ಹಾಗೂ ಪವರ್ ಗ್ರಿಡ್ ಕಾರ್ಪೊರೇಷನ್ ಪ್ರಧಾನ ವ್ಯವಸ್ಥಾಪಕ ಹರೀಶ್ ನಾಯರ್ ಉಪಸ್ಥಿತರಿದ್ದರು.

ಓಂಕಾರಪ್ಪಗೆ ಶ್ರದ್ಧಾಂಜಲಿ: ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದ ನಿರ್ದೇಶಕ ಕೆ.ಎನ್. ಓಂಕಾರಪ್ಪ ಅವರ ಒತ್ತಾಸೆಯಿಂದಾಗಿ ಸಿ.ಜಿ. ಆಸ್ಪತ್ರೆಗೆ 3.35 ಕೋಟಿ ರೂ.ಗಳ ಉಪಕರಣಗಳನ್ನು ಸಿ.ಎಸ್.ಆರ್. ನಿಧಿಯಿಂದ ಒದಗಿಸಲಾಗಿತ್ತು. ಆದರೆ, ಉಪಕರಣಗಳ ಹಸ್ತಾಂತರದ ಮುನ್ನಾ ದಿನ ಅವರು ಅಕಾಲಿಕವಾಗಿ ಸಾವನ್ನಪ್ಪಿದರು. ಓಂಕಾರಪ್ಪ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

error: Content is protected !!