ಅಣು ರೇಣು ತೃಣ-ಕಾಷ್ಠಗಳಲ್ಲೂ ಇಲ್ಲ, ಸರ್ವವ್ಯಾಪಿಯೂ ಅಲ್ಲ
ದಾವಣಗೆರೆ, ಡಿ. 13- ಪರಮಾತ್ಮ ಸರ್ವವ್ಯಾಪಿಯಲ್ಲ, ಅವನು ಪರಂಧಾಮದಲ್ಲಿರುತ್ತಾನೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ ಪ್ರತಿಪಾದಿಸಿದರು.
ಇಲ್ಲಿನ ವಿದ್ಯಾನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾ ಲಯದ ಆವರಣದಲ್ಲಿ ನಡೆಯುತ್ತಿರುವ `ಶರಣರು ಕಂಡ ಶಿವ’ ಪ್ರವಚನ ಮಾಲೆಯ 10ನೇ ದಿನವಾದ ಬುಧವಾರದ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.
ಆತ್ಮಗಳಾದ ನಾವೆಲ್ಲಾ ಭೂ ಲೋಕದಲ್ಲಿದ್ದೇವೆ. ಭೂ ಲೋಕದ ಮೇಲೆ ಸೂಕ್ಷ್ಮ ಲೋಕವೊಂದಿದೆ ಅದು ಪುಣ್ಯ ಜೀವಿಗಳ ವಾಸಸ್ಥಳ. ಅದರಾಚೆಗೆ ಇರುವುದೇ ಪರಂಧಾಮ. ಅದಕ್ಕೆ ಮುಕ್ತಿ ಧಾಮ, ಶಿವಲೋಕ, ಆತ್ಮ ಲೋಕ ಎಂಬ ಹೆಸರುಗಳು ಇವೆ. ಅಲ್ಲಿ ಪರಮಾತ್ಮನಿರುತ್ತಾನೆ ಎಂದು ವಿಶ್ಲೇಷಿಸಿದರು.
ಬೈಬಲ್‌ನಲ್ಲೂ ಪರಮಾತ್ಮ ಸ್ವರ್ಗದಲ್ಲಿದ್ದಾನೆ ಎಂದು ಹೇಳಲಾಗುತ್ತಿದೆ. ಖುರಾನ್ ನಲ್ಲೂ ಸಹ ಪರಮಾತ್ಮನಾದ ಅಲ್ಲಾಹ್ ಏಳು ಲೋಕದ ಆಚೆ ಇರುತ್ತಾನೆ ಎಂದು ಹೇಳಲಾಗುತ್ತದೆ ಎಂದರು.
ಪರಮಾತ್ಮ ಸರ್ವವ್ಯಾಪಿ, ಅಣು ರೇಣು ತೃಣ-ಕಾಷ್ಠಗಳಲ್ಲೂ ಪರಮಾತ್ಮ ಇದ್ದಾನೆ ಎಂಬುದು ಎಲ್ಲರೂ ಹೇಳುವ ಸಾಮಾನ್ಯ ಮಾತಾಗಿದೆ. ಎಲ್ಲಾ ಕಡೆಯೂ ಪರಮಾತ್ಮ ಇದ್ದಾನೆ ಎನ್ನುವುದಾದರೆ ದೇವಸ್ಥಾನಗಳನ್ನು ಕಟ್ಟುವುದಾದರೂ ಏಕೆ ? ಇದರಿಂದ ಪರಮಾತ್ಮ ಎಲ್ಲಾ ಕಡೆಯೂ ಇಲ್ಲ ಎಂಬ ಮಾತು ಅನುಭಾವಕ್ಕೆ ಬರುತ್ತದೆ ಎಂದರು.
ದೇವಸ್ಥಾನಕ್ಕೆ ಹೋದವರು ದೇವರೇ ರಕ್ಷಿಸಿ ಎಂದು ಕತ್ತು ಮೇಲೆತ್ತಿ ನೋಡಿ ನಮಸ್ಕರಿಸುತ್ತಾರೆ. ಮುದುಕರು, ಅನಾರೋಗ್ಯ ಪೀಡಿತರು ಮೇಲೆ ನೋಡಿ ದೇವರೇ ನನ್ನನ್ನು ಕರೆದುಕೊಂಡು ಬಿಡು ಎಂದು ದೇವರಲ್ಲಿ ಮೊರೆ ಇಡುತ್ತಾರೆ. ಇದರಿಂದ ತಿಳಿಯುವುದೇನೆಂದರೆ ಪರಮಾತ್ಮ ಮೇಲಿದ್ದಾನೆ ಎಂಬ ಭಾವ.
ಬಸವಾದಿ ಶಿವಶರಣರ ಆರಂಭದ ವಚನಗಳಲ್ಲಿ ಪರಮಾತ್ಮ ಎಲ್ಲಡೆ ಇದ್ದಾನೆ ಎಂದು ಹೇಳಲಾಗಿದೆಯಾದರೂ, ನಂತರದ ವಚನಗಳಲ್ಲಿ ಪರಮಾತ್ಮ ಅಣು ರೇಣು ತೃಣಕಾಷ್ಠಗಳಲ್ಲಿ ಇಲ್ಲ ಎಂಬುದನ್ನು ನಿರೂಪಿಸುತ್ತವೆ ಎಂದರು.
ಶರಣರ ವಚನಗಳಲ್ಲಿ ಮೂರು ಹಂತಗಳಿವೆ. ಪುರಾಣ, ವೇದ ಉಪನಿಷತ್‌ಗಳ ಮೇಲೆ ಪ್ರಭಾವಿತರಾಗಿ ಬರೆದಿರುವುದು ಒಂದು ಹಂತವಾದರೆ, ನಂತರ ಸಾಧನಾ ಮಾರ್ಗದಲ್ಲಿ ಬರೆದ ವಚನಗಳು ಎರಡನೇ ಹಂತ. ಮೂರನೇ ಹಂತದಲ್ಲಿ ಶರಣರು ಅನುಭವ ಮಂಟಪದಲ್ಲಿ ಯತಾರ್ಥ ಸತ್ಯ ಹುಡುಕಲು ಪ್ರಯತ್ನಿಸಿ, ಶಿವಧ್ಯಾನದಿಂದ ಸತ್ಯಾಸತ್ಯತೆ ಅರಿತು ಬರೆದ ವಚನಗಳಾಗಿವೆ ಎಂದು ಅಭಿಪ್ರಾಯಿಸಿದರು.
ಶರಣರ ವಚನಗಳನ್ನು ನಿರ್ಣಯಿಸಿ ಅರ್ಥ ಮಾಡಿಕೊಳ್ಳಲೂ ಸಹ ಪುಣ್ಯ ಬೇಕು. ಅದನ್ನು ಅರ್ಥೈಸಿಕೊಡುವ ಗುರು ಬೇಕು. ನಮಗೆ ಅಂತಹ ಮಹಾನ್ ಗುರು ಸಿಕ್ಕಿದ್ದು, ಆ ಗುರುವಿನ ಅನುಗ್ರಹದಿಂದ ಅರ್ಥ ಮಾಡಿಕೊಳ್ಳುವ ಅವಕಾಶ ಸಿಕ್ಕಿದೆ. ಆ ಗುರುವೇ ಪರಮಾತ್ಮ. ಅವನು ನಿಮಗೂ ಖಂಡಿತ ಸಿಗುತ್ತಾನೆ. ಆದರೆ ದಿನಕ್ಕೆ ಒಂದು ಗಂಟೆಯಂತೆ ನೀವೆಲ್ಲಾ 108 ಗಂಟೆಗಳ ಸಮಯ ಮೀಸಲಿಡಬೇಕಾಗುತ್ತದೆ ಎಂದು ಹೇಳಿದರು.
140 ದೇಶಗಳಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯಲ್ಲಿ ಶಿವನ ವಿದ್ಯಾರ್ಥಿಗಳಿಗೆ ಶಿವನೇ ಶಿಕ್ಷಣ ಕೊಡುತ್ತಿದ್ದಾನೆ. ನೀವೂ ಬಯಸಿದರೆ ನಿಮ್ಮ ಜೊತೆಯೂ ಪರಮಾತ್ಮ ಮಾತನಾಡುತ್ತಾನೆ. ಆ ಅನುಭಾವ ನಿಮಗಾಗುತ್ತದೆ ಎಂದು ಕರೆ ನೀಡಿದರು.
ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಶಾಖೆಯ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ನೇರ ಪ್ರಸಾರ : ಸುದೀರ್ಘ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ 1 ಗಂಟೆ ಸಮಯ ನಡೆಯುವ ಈ ಪ್ರವಚನವನ್ನು ನೇರ ಪ್ರಸಾರ ವೀಕ್ಷಿಸಲು ಯು ಟ್ಯೂಬ್ ಚಾನಲ್ಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada) ವೀಕ್ಷಿಸಬಹುದು.