ಎಲ್ಲಾ ಧರ್ಮಗಳಲ್ಲೂ ಇದೆ ಏಕದೇವೋಪಾಸನೆ

ಎಲ್ಲಾ ಧರ್ಮಗಳಲ್ಲೂ ಇದೆ ಏಕದೇವೋಪಾಸನೆ

ದಾವಣಗೆರೆ, ಡಿ.12- ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಯಹೂದಿ ಈ ಎಲ್ಲಾ ಧರ್ಮಗಳೂ ಪರಮಾತ್ಮ ಒಬ್ಬನೇ ಎಂಬುದನ್ನು ಸಾರುತ್ತಿವೆ ಹಾಗೂ ಸ್ಪಷ್ಟಪಡಿಸಿವೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ ತಿಳಿಸಿದರು.

ಇಲ್ಲಿನ ವಿದ್ಯಾನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾ ಲಯದ ಆವರಣದಲ್ಲಿ  ನಡೆಯುತ್ತಿರುವ `ಶರಣರು ಕಂಡ ಶಿವ’ ಪ್ರವಚನ ಮಾಲೆಯ 9ನೇ ದಿನವಾದ ಮಂಗಳವಾರದ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.

ಹಿಂದೂ ಧರ್ಮದಲ್ಲಿ ಪುರಾತನ ಕಾಲದಿಂ ದಲೇ ಏಕದೇವೋಪಾಸನೆ ವ್ಯವಸ್ಥೆ ಇತ್ತು. ಆದರೆ, ಪುರಾಣಗಳ ಕಾಲದಿಂದ  ಬಹುದೇವೋಪಾಸನೆ ಬೇರೂರಿತು ಎಂದು ಹೇಳಿದರು.

ಇಸ್ಲಾಂ ಧರ್ಮದಲ್ಲೂ ಆರಂಭದಲ್ಲಿ ಬಹುದೇವೋ ಪಾಸನೆ ಇತ್ತು. ಮೊಹಮ್ಮದ್ ಪೈಗಂಬರ್ ಅವರು ನಂತರ ಏಕದೇವೋಪಾಸನೆ ಪ್ರತಿಪಾದಿಸಿ, ಸಮಾಜಕ್ಕೆ ಪ್ರಬಲವಾಗಿ ಬೋಧಿಸಿ ಸಾಧಿಸಿದರು.  ನಂತರ ಇಸ್ಲಾಂ ಏಕೇಶ್ವರನ ಉಪಾಸನೆ ಮಾಡುವ ಧರ್ಮವಾಗಿದೆ ಎಂದರು.

ಸಿಖ್ ಧರ್ಮದ  ಧರ್ಮ ಗುರು ಗುರುನಾನಕ್‌ರ ಗುರು ಗ್ರಂಥ ಸಾಹೇಬ್ ಗ್ರಂಥದಲ್ಲಿ ಏಕೇಶ್ವರ ಉಪಾಸನೆ ಬಗ್ಗೆ ಹೇಳಿದ್ದಾರೆ. ಜೈನ ಧರ್ಮವೂ ಏಕೇಶ್ವರನ ಉಪಾಸನೆ ಮಾಡುತ್ತದೆ. ಹಾಸನ ಜಿಲ್ಲೆಯ ಹಳೇಬೀಡು ನಲ್ಲಿರುವ ಶಿಲಾಶಾಸನದಲ್ಲಿ ಏಕೇಶ್ವರನ ಬಗ್ಗೆ ಶ್ಲೋಕಗಳನ್ನು ಕಾಣಬಹುದಾಗಿದೆ ಎಂದು ವಿವರಿಸಿದರು.

ಸರ್ವಧರ್ಮಗಳಲ್ಲಿ ಪರಮಾತ್ಮ ಒಬ್ಬನೇ ಎಂದು ತಿಳಿಸಿದ್ದಾರೆ. ಆದರೆ, ಅವನ ಉಪಾಸನೆ ಮಾಡುವ ಸತ್ಯವನ್ನು ಭಾರತೀಯ ಸನಾತನ ಧರ್ಮ ನಮಗೆ ತಿಳಿಸಿಕೊಟ್ಟಿದೆ. ಎಲ್ಲರಿಗೂ ಜ್ಞಾನ ಬಲದಿಂದ ತಿಳಿಯಲು ಸಾಧ್ಯವಾಗದ ಕಾರಣ, ಪರಮಾತ್ಮನ ಜ್ಯೋತಿರ್ಲಿಂಗದ ರೂಪವನ್ನು ಶಿಲೆಗಳಲ್ಲಿ ಕಟೆದು ಈಶ್ವರನ ಗುಡಿಗಳಲ್ಲಿ ಸ್ಥಾಪಿಸಲಾಗಿದೆ.

ಶ್ರೀ ಸಾಮಾನ್ಯರಿಗೆ ಭಗವಂತನ ಮೇಲೆ ಪ್ರೀತಿ, ವಿಶ್ವಾಸ ಉಂಟಾಗಲಿ ಎಂಬ ಸದುದ್ಧೇಶ ದಿಂದ 12 ಜ್ಯೋತಿರ್ಲಿಂಗಗಳನ್ನು  ಸ್ಥಾಪಿಸಲಾ ಯಿತು. ಅವುಗಳನ್ನು 12 ಹೆಸರುಗಳಿಂದ ಉಪಾಸನೆ ಮಾಡಲಾಗುತ್ತಿತ್ತು. ಹೀಗೆ ಎಲ್ಲೆಲ್ಲಿ ಯಾವ ಊರಿನಲ್ಲಿ ಶಿವಲಿಂಗಗಳಿವೆಯೋ ಅವೆಲ್ಲವೂ ಶಿವನ ಸ್ವರೂಪ ಅರ್ಥೈಸಿಕೊಡಬಲ್ಲ ಕುರುಹುಗಳಾಗಿವೆ. ಭಕ್ತಿಯಿಂದ ಯಾವ ದೇವಸ್ಥಾನಕ್ಕೆ ಹೋಗಿ ನಮಿಸಿದರೂ ಫಲ ಒಂದೇ ಎಂದು ಅವರು ಪ್ರತಿಪಾದಿಸಿದರು.

ಪರಮಾತ್ಮ ಸರ್ವಜ್ಞ, ಜ್ಞಾನಸಾಗರ, ಎಲ್ಲಾ ಭಕ್ತರ ಮನಸ್ಸನ್ನು ಏಕ ಕಾಲದಲ್ಲೇ ಅರ್ಥ ಮಾಡಿಕೊಳ್ಳುವ ಮಹಾನ್ ಶಕ್ತಿವುಳ್ಳವನು. ಆದ್ದರಿಂದ ದೇವಸ್ಥಾನದಲ್ಲಿ ಅಷ್ಟೇ ಅಲ್ಲ, ಅಂಗದ ಮೇಲೂ ಇಷ್ಟಲಿಂಗದ ರೂಪದಲ್ಲಿ ಧರಿಸಲು ಶರಣರು ಹೇಳಿದ್ದಾರೆ. `ಓಂ ನಮಃ ಶಿವಾಯ’ ಮೂಲ ಮಂತ್ರದಿಂದ ಪರಮಾತ್ಮನನ್ನು ಹೇಗೆ ನಮಿಸಬೇಕು ಎಂದು ಬಸವಾದಿ ಶಿವಶರಣರು ನಮಗೆ ನೆನಪಿಸಿದ್ದಾರೆ ಎಂಬುದನ್ನು ವಚನಗಳ ಮೂಲಕ ವಿಶ್ಲೇಷಿಸಿದರು.

ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಶಾಖೆಯ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾ ಕುಮಾರಿ ಲೀಲಾಜಿ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ನೇರ ಪ್ರಸಾರ : ಸುದೀರ್ಘ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ 1 ಗಂಟೆ ಸಮಯ ನಡೆಯುವ ಈ ಪ್ರವಚನದ ನೇರ ಪ್ರಸಾರ ವೀಕ್ಷಿಸಲು ಯು ಟ್ಯೂಬ್ ಚಾನಲ್ಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada)  ವೀಕ್ಷಿಸಬಹುದು.

error: Content is protected !!