`ಲೋಕ’ ಸಿದ್ಧತೆ ಆರಂಭ : ವಲ್ನೆರಬಲ್, ಕ್ರಿಟಿಕಲ್ ಮತಗಟ್ಟೆಗಳ ಸಮೀಕ್ಷೆ

`ಲೋಕ’ ಸಿದ್ಧತೆ ಆರಂಭ : ವಲ್ನೆರಬಲ್, ಕ್ರಿಟಿಕಲ್ ಮತಗಟ್ಟೆಗಳ ಸಮೀಕ್ಷೆ

ದಾವಣಗೆರೆ, ಡಿ.11- ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಮುಕ್ತ-ಶಾಂತಯುತ ಚುನಾವಣೆ ನಡೆಸಲು ವಲ್ನೆರಬಲ್, ಕ್ರಿಟಿಕಲ್ ಮತಗಟ್ಟೆಗಳ ಸಮೀಕ್ಷೆ ಕೈಗೊಂಡು ಚುನಾವಣೆ ನಡೆಸಲು ಅಧಿಕಾರಿಗಳು ಸಿದ್ದರಾಗ ಬೇಕೆಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದರು. 

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಂಬ ರುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮುಕ್ತ, ಶಾಂತಿಯುತ ಚುನಾವಣೆ ನಡೆಸಲು ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಕೈಗೊಂಡ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ದಾವಣಗೆರೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಮತ್ತು ವಿಜಯನಗರ ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ಸೇರಲಿದೆ. 

ಈ ಹಿಂದೆ ನಡೆದ ಚುನಾವಣಾ ಸಂದರ್ಭದಲ್ಲಿ ನಡೆದ ಗುಂಪು ಘರ್ಷಣೆ ಮತ್ತು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳನ್ನು ಆಧರಿಸಿ ಸಾರ್ವಜನಿಕರು ಮುಕ್ತವಾಗಿ ಮತ ದಾನ ಮಾಡಲು ಬೇಕಾದ ವಾತಾವರಣ ಕಲ್ಪಿಸಲು ದುರ್ಬಲ ಪ್ರದೇಶಗಳನ್ನು ಗುರುತಿಸಿ, ಅಲ್ಲಿನ ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಿ, ಇಲ್ಲಿ ಶಾಂತಯುತ ಮತದಾನಕ್ಕೆ ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಕೂಲಂಕುಶವಾಗಿ ಪರಿಶೀಲಿಸಿ ವರದಿ ನೀಡಲು ಎಲ್ಲಾ ತಹಶೀಲ್ದಾರರಿಗೆ ಸೂಚನೆ ನೀಡಿದರು. 

ಎಲ್ಲಾ ತಹಶೀಲ್ದಾರರು ಪ್ರತಿ ಮತಗಟ್ಟೆಗಳನ್ನು ಪರಿಶೀಲಿಸಿ ಮುಕ್ತ, ನ್ಯಾಯ ಸಮ್ಮತ, ಶಾಂತಿಯುತ ಚುನಾವಣೆಗೆ ಎಲ್ಲಾ ಸಿದ್ಧತೆಗಳ ಕುರಿತಂತೆ ವರದಿ ನೀಡಲು ತಿಳಿಸಿದರು. 

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪ ವಿಭಾಗಾಧಿಕಾರಿ ಶ್ರೀಮತಿ ಎನ್. ದುರ್ಗಾಶ್ರೀ  ಉಪಸ್ಥಿತರಿದ್ದರು.

error: Content is protected !!