ಕನ್ನಡ ಪಠ್ಯದಿಂದ ಜೈನ ಕಾವ್ಯಗಳಿಗೆ ಕತ್ತರಿ

ಕನ್ನಡ ಪಠ್ಯದಿಂದ ಜೈನ ಕಾವ್ಯಗಳಿಗೆ ಕತ್ತರಿ

‘ಧರ್ಮ ಕಾರಣ’ ಎಂದು ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಆಕ್ಷೇಪ

ದಾವಣಗೆರೆ, ಡಿ. 10 – ಕನ್ನಡದಲ್ಲಿ ಮೊದಲು ಕಾವ್ಯ ರಚಿಸಿದವರೇ ಜೈನ ಕವಿಗಳು. ಆದರೆ, ಈಗ ಧಾರ್ಮಿಕ ಕಾರಣದಿಂದ ಜೈನ ಕವಿಗಳ ಕಾವ್ಯಗಳನ್ನು ಪಠ್ಯದಿಂದ ತೆಗೆದು ಹಾಕಲಾಗುತ್ತಿದೆ ಎಂದು ಹೊಂಬುಜದ ಜಗದ್ಗುರು ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಶ್ರೀ 1008 ಕಲ್ಪದ್ರುಮ ಆದಿನಾಥ ಜಿನಮಂದಿರದ ದಶಮಾನೋತ್ಸವ ಹಾಗೂ ಶ್ರೀ ಮಹಾವೀರ ಸಂಘದ ಸುವರ್ಣ ಮಹೋತ್ಸವ ಸಂಭ್ರಮದ 2ನೇ ದಿನದ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಕನ್ನಡದಲ್ಲಿ ಕಾವ್ಯಗಳನ್ನು ಮೊದಲು ಸಮೃದ್ಧಗೊಳಿಸಿದವರು ಜೈನ ಕವಿಗಳು. ಅದಕ್ಕೂ ಮೊದಲು ಕರ್ನಾಟಕದಲ್ಲಿ ಕಾವ್ಯ ಸಂಸ್ಕೃತದಲ್ಲಿತ್ತು. ಕನ್ನಡ ಸಾಹಿತ್ಯ ಆರಂಭವಾಗುವುದೇ ಜೈನ ಕವಿಗಳಿಂದ ಎಂದವರು ಹೇಳಿದರು.

 

ಈ ಹಿಂದೆ ಕನ್ನಡ ಪುಸ್ತಕದಲ್ಲಿ ಸಾಕಷ್ಟು ಹಳೆಗನ್ನಡ ಪದ್ಯಗಳಿರುತ್ತಿದ್ದವು. ಎರಡು ಮೂರು ಪುಟಗಳ ವಿವರ ಇರುತ್ತಿತ್ತು. ಆದಿಪುರಾಣ, ಅಜಿತನಾಥ ಪುರಾಣ, ಯಶೋಧರ ಚರಿತ್ರೆ ಇರುತ್ತಿದ್ದವು. ಈಗ ಪುಸ್ತಕಗಳಿಂದ ಅವು ಮಾಯವಾಗಿವೆ ಎಂದು ಶ್ರೀಗಳು ಹೇಳಿದರು.

ಜೈನ ಸಮುದಾಯದ ಕವಿಗಳ ಪಾಠ ತೆಗೆದರೆ ಏನೂ ಕೇಳುವುದಿಲ್ಲ, ಏನೂ ಮಾಡುವುದಿಲ್ಲ ಎಂದು ನಮ್ಮನ್ನು ಗುರಿಯಾಗಿಟ್ಟುಕೊಂಡಿದ್ದಾರೆ. ಜೈನರು ಸಾಹಿತ್ಯಾತ್ಮಕವಾಗಿ ನೀಡಿದ ಕೊಡುಗೆ ಬೇಡವಾಗಿದೆ ಎಂದು ವಿಷಾದಿಸಿದರು.

ಈಗ ಪಠ್ಯ ಪುಸ್ತಕವು ಧಾರ್ಮಿಕ ಪಠ್ಯದಂತಾಗಿದೆ. ಈ ಧರ್ಮದ್ದು ಒಂದಿಷ್ಟು ಪಾಠ, ಆ ಧರ್ಮದವರ ಪಾಠ ಒಂದಿಷ್ಟು ಬೇಕು ಎಂದು ಸೇರಿಸುತ್ತಿದ್ದಾರೆ ಎಂದೂ ಭಟ್ಟಾರಕ ಸ್ವಾಮೀಜಿ ಹೇಳಿದರು.

ಈ ಬಗ್ಗೆ ಹೋರಾಡಲು ನಮ್ಮ ಬಳಿ ರಾಜಕೀಯ ಶಕ್ತಿಯೂ ಕಡಿಮೆ. ನಮ್ಮ ಕಾವ್ಯ ಹಾಗೂ ಶಾಸ್ತ್ರಗಳಿಗೆ ದೇವಸ್ಥಾನ ಹಾಗೂ ಸಮಾಜದಲ್ಲಿ ಸ್ವಾಧ್ಯಾಯದಿಂದ ಜೀವ ಕೊಡಬೇಕಿದೆ. ಜನರಲ್ಲಿ ಜಾಗೃತಿ ಮೂಡಬೇಕು ಎಂದವರು ತಿಳಿಸಿದರು.

ಪಂಪ ಮಹಾಕವಿ ಮಾನವ ಕುಲಂ ತಾನೊಂದೇ ಒಲಂ ಎಂದು ಹೇಳಿದ್ದರು. ಪಂಪ ಮಹಾಕವಿಯ ಆಶಯವನ್ನು ರಾಷ್ಟ್ರಕವಿ ಕುವೆಂಪು ತಮ್ಮ ಕಾವ್ಯ ಹಾಗೂ ಜೀವನದಲ್ಲಿ ಜಾರಿಗೆ ತಂದರು ಎಂದೂ ಸ್ವಾಮೀಜಿ ತಿಳಿಸಿದರು.

error: Content is protected !!