`ಶರಣರು ಕಂಡ ಶಿವ’ ಪ್ರವಚನ ಮಾಲೆಯಲ್ಲಿ ಡಾ.ಬಸವರಾಜ ರಾಜಋಷಿ
ದಾವಣಗೆರೆ, ಡಿ. 8- ಆತ್ಮಗಳು ಹೇಗೆ ಜ್ಯೋತಿ ಸ್ವರೂಪದಲ್ಲಿವೆಯೋ ಹಾಗೆ ಪರಮಾತ್ಮನೂ ಸಹ ಜ್ಯೋತಿ ಸ್ವರೂಪದಲ್ಲಿದ್ದಾನೆ. ಹೀಗಾಗಿ ಅವನಿಗೆ ನಾವು ಜ್ಯೋತಿರ್ಲಿಂಗ ಎಂದು ಕರೆಯುತ್ತೇವೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ವಿಶ್ಲೇಷಿಸಿದರು.
ಇಲ್ಲಿನ ವಿದ್ಯಾನಗರದಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ `ಶರಣರು ಕಂಡ ಶಿವ’ ಪ್ರವಚನ ಮಾಲೆಯ ಐದನೇ ದಿನವಾದ ಶುಕ್ರವಾರದ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.
ನಾವು ಪರಮಾತ್ಮನ ರೂಪವನ್ನು ಶಿಲೆಗಳಿಂದ ಮಾಡಿ, ಅದನ್ನು ಪೀಠದಲ್ಲಿಟ್ಟು ಈಶ್ವರ ಎಂದು ಉಪಾಸನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಆತ್ಮನೂ ಕಾಣುವುದಿಲ್ಲ, ಪರಮಾತ್ಮನೂ ಕಾಣುವುದಿಲ್ಲ. ಈ ಸತ್ಯ ಅರ್ಥ ಮಾಡಿಕೊಳ್ಳದೆ ನಾವೆಲ್ಲಾ ದೇವಸ್ಥಾನಗಳಿಗೆ ಹೋಗುತ್ತಿದ್ದೇವೆ. ತೀರ್ಥ ಕ್ಷೇತ್ರ ಸುತ್ತುತ್ತೇವೆ. ಆದರೆ, ಅನುಭವ ಮಂಟಪದಲ್ಲಿ ಶರಣರು ಈ ಸತ್ಯವನ್ನು ಜ್ಞಾನಯುಕ್ತವಾಗಿ ಪಡೆದಿದ್ದರು. ಅಂತಹ ಎಲ್ಲಾ ಶರಣರಿಗೆ ಶಿವಾನುಭಾವಿಗಳು ಎಂದು ಕರೆಯಲಾಗುತ್ತದೆ ಎಂದು ಅವರು ನುಡಿದರು.
ಪರಮಾತ್ಮನನ್ನು ಜ್ಞಾನದಿಂದ ಅರ್ಥ ಮಾಡಿಕೊಂಡ ಪೂರ್ವಜರು, ಲಿಂಗ ಹಾಗೂ ಪೀಠಗಳನ್ನು ದೇವಾಲಯಗಳಲ್ಲಿ ಸ್ಥಾಪಿಸಿದರು. ಕಾಶಿ, ಸೋಮನಾಥ, ಶ್ರೀಶೈಲ ಸೇರಿದಂತೆ, ಹಲ ವೆಡೆ ಪೀಠ ಇಲ್ಲದ ಲಿಂಗಗಳೂ ಇವೆ. ಮತ್ತೆ ಕೆಲವಡೆ ಪೀಠ ಹಾಗೂ ಲಿಂಗ ಎರಡನ್ನೂ ಕಾಣುತ್ತೇವೆ. ಅವೆಲ್ಲವೂ ಪರಮಾತ್ಮ ಜ್ಯೋತಿ ಎಂದು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಾವೆಲ್ಲಾ ತಾಯಿ ಗರ್ಭದಲ್ಲಿ ಜನ್ಮ ಪಡೆದವರು. ಎಲ್ಲರೂ ದೇಹಧಾರಿಗಳು. ಆದರೆ, ಪರಮಾತ್ಮನು ಜನನ, ಮರಣ ರಹಿತನು, ಅಜನ್ಮನು, ಅಯೋಜನಿಜನು, ಅಕಾಯನು, ಅಶರೀರನು ಎಂದು ವಿವರಿಸಿದ ಅವರು, ರಸ್ತೆ, ವಾಹನ ಸೌಲಭ್ಯಗಳಿಲ್ಲದ ಕಾಲದಲ್ಲಿ ಜ್ಯೋತಿರ್ಲಿಂಗಗಳ ದರ್ಶನ ಕಷ್ಟ ಸಾಧ್ಯವಾದ್ದರಿಂದ ಗ್ರಾಮಗಳಲ್ಲಿ ಶಿವನ ದೇವಾಲಯಗಳನ್ನು ನಿರ್ಮಿಸಲಾಯಿತು. ಆ ದೇವಾಲಯಗಳಲ್ಲಿರುವ ಎಲ್ಲಾ ಲಿಂಗಗಳೂ ಜ್ಯೋತಿರ್ಲಿಂಗವೇ ಎಂದು ಪ್ರತಿಪಾದಿಸಿದರು.
ಶರಣರ ಮೌಲ್ಯಗಳನ್ನು ಜೀವನದಲ್ಲಿ ಧರಿಸಿದವರನ್ನು ಶರಣರು ಎನ್ನಲಾಗುತ್ತದೆ. ಅವರು ಶಿವನ ಗುಣಗಳಿಗೆ ಶರಣರಿರುವಂತಹವರು. ಶರಣರು ಶಿವ ಶರಣರಾಗಬೇಕು. ಆಗ ಅವರನ್ನು ಶಿವಯೋಗಿಗಳು ಎಂತಲೂ ಹೇಳಬಹುದು. ಶಿವನನ್ನು ಅರಿಯದೇ, ಶಿವನ ಬಗ್ಗೆ ಬೇರೆಯವರಿಗೆ ತಿಳಿಸದೇ ಇದ್ದರೆ, ಅವರು ಶಿವಶರಣರಾಗುವುದಿಲ್ಲ ಎಂದು ಹೇಳಿದರು.
ಜ್ಯೋತಿ ಸ್ವರೂಪನಾದ ಶಿವನನ್ನು ಅರಿಯ ಲೆಂದೇ ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟದಲ್ಲಿ ಶಿವಾನುಭವಾದ ಗೋಷ್ಠಿಗಳು, ಆತ್ಮಾನುಭವಾದ ಗೋಷ್ಠಿಗಳು ನಿಖರವಾಗಿ ನಡೆಯುತ್ತಿದ್ದವು ಎಂದು ತಿಳಿಸಿದರು.
ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಶಾಖೆಯ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ನೇರ ಪ್ರಸಾರ : ಸುದೀರ್ಘ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ 1 ಗಂಟೆ ಸಮಯ ನಡೆಯುವ ಈ ಪ್ರವಚನವನ್ನು ನೇರ ಪ್ರಸಾರ ವೀಕ್ಷಿಸಲು ಯು ಟ್ಯೂಬ್ ಚಾನಲ್ಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada) ವೀಕ್ಷಿಸಬಹುದು.