ನಗರದ 10 ವೃತ್ತಗಳಲ್ಲಿ ಟ್ರಾಫಿಕ್ ಬೂತ್ ಉದ್ಘಾಟನೆ

ನಗರದ 10 ವೃತ್ತಗಳಲ್ಲಿ ಟ್ರಾಫಿಕ್ ಬೂತ್ ಉದ್ಘಾಟನೆ

ಶೀಘ್ರ ಪ್ರಮುಖ ವೃತ್ತಗಳಲ್ಲಿ ಸಂಚಾರಿ ಪೊಲೀಸ್ ಬೂತ್‌ಗಳ ಅಳವಡಿಕೆ : ಎಸ್ಪಿ ಉಮಾ ಪ್ರಶಾಂತ್‌

ದಾವಣಗೆರೆ, ಡಿ. 7 – ನಗರದ ಪ್ರಮುಖ ವೃತ್ತಗಳಲ್ಲಿ ಸಂಚಾರಿ ಪೊಲೀಸರಿಗಾಗಿ ಬೂತ್‌ಗಳನ್ನು ಅಳವಡಿಸಲಾಗುತ್ತಿದ್ದು, ಇದರಿಂದ ಸಿಬ್ಬಂದಿ ಹಾಗೂ ಸಾರ್ವಜನಿಕರಿಬ್ಬರಿಗೂ ಅನುಕೂಲವಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ನಗರದ ಅರುಣಾ ಟಾಕೀಸ್ ವೃತ್ತದಲ್ಲಿ ಟ್ರಾಫಿಕ್ ಬೂತ್‌ಗಳನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಸಂಚಾರಿ ಪೊಲೀಸರಿಗೆ ಬಿಸಿಲು – ಮಳೆಯಿಂದ ರಕ್ಷಣೆ ನೀಡಲು ಸ್ಮಾರ್ಟ್ ಸಿಟಿ ಸಹಭಾಗಿತ್ವದಲ್ಲಿ ಬೂತ್‌ಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಈ ದಿನ 10 ಬೂತ್‌ಗಳನ್ನು ಉದ್ಘಾಟಿಸಲಾಗಿದೆ. ಇನ್ನೂ 12 ಬೂತ್‌ಗಳನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು. ನಗರದ ಎಲ್ಲಾ ಪ್ರಮುಖ ವೃತ್ತಗಳಲ್ಲಿ ಸಂಚಾರಿ ಪೊಲೀಸರ ಆಶ್ರಯಕ್ಕೆ ಬೂತ್‌ಗಳಿರಲಿವೆ ಎಂದು ಎಸ್ಪಿ ಹೇಳಿದರು.

ಈ ಬೂತ್‌ಗಳು 6 ಅಡಿ ಅಗಲ ಹಾಗೂ 7.5 ಅಡಿ ಎತ್ತರದಲ್ಲಿವೆ. ಇವುಗಳಲ್ಲಿ ಸೌರ ಫಲಕ, ಯು.ಪಿ.ಎಸ್. ಫ್ಯಾನ್, ಬೆಳಕು, ಸ್ಪೀಕರ್, ಎಲ್‌ಇಡಿ ಫಲಕ, ಮೈಕ್ ಹಾಗೂ ವೆಂಟಿಲೇಷನ್‌ ಫ್ಯಾನ್‌ಗಳಿವೆ ಎಂದವರು ವಿವರಿಸಿದರು.

ರಾಣಿ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಜಯದೇವ ವೃತ್ತ, ಐ.ಟಿ.ಐ. ಕಾಲೇಜು ಬಳಿಯ ವೃತ್ತ, ಪಿ.ಜೆ. ಕ್ರಾಸ್ ಮುಂತಾದ ಹತ್ತು ಕಡೆಗಳಲ್ಲಿ ಇಂದು ಬೂತ್‌ಗಳು ಚಾಲನೆ ಪಡೆದಿವೆ. ಇದರಿಂದ ಸಂಚಾರಿ ಪೊಲೀಸರು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದು ಎಸ್ಪಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್, ಪ್ರತಿ ಬೂತ್‌ಗೆ 3.5 ಲಕ್ಷ ರೂ. ವೆಚ್ಚವಾಗಿದೆ. ಸ್ಮಾರ್ಟ್ ಸಿಟಿ ಪ್ರಸಕ್ತ ಇವುಗಳನ್ನು ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಐ.ಟಿ. ವಿಭಾಗದ ಮುಖ್ಯಸ್ಥೆ ಮಮತಾ, ಸ್ಮಾರ್ಟ್ ಸಿಟಿ ಮುಖ್ಯ ಇಂಜಿನಿಯರ್ ವಿಶ್ವನಾಥ್, ಡಿ.ಎಸ್.ಪಿ. ಮಲ್ಲೇಶ್, ಸಂಚಾರಿ ಪೊಲೀಸ್ ವೃತ್ತ ನಿರೀಕ್ಷಕ ನಲವಾಗಲು ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!