ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾ|| ರಾಜೇಶ್ವರಿ ಹೆಗಡೆ ಕರೆ
ದಾವಣಗೆರೆ, ಡಿ.6- ವಕೀಲರಲ್ಲಿ ಅರ್ಪಣಾ ಮನೋಭಾವ ಇರಬೇಕು. ವೃತ್ತಿಯಲ್ಲಿ ನೀತಿ ಪಾಲಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಸಲಹೆ ನೀಡಿದರು.
ನಗರದ ವಕೀಲರ ಸಮುದಾಯ ಭವನದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲ ವೃತ್ತಿಯಲ್ಲಿ ಅನೇಕ ಸವಾಲುಗಳಿವೆ. ವಕೀಲರು ಸಮಾಜದಲ್ಲಿ ನಿರ್ವಹಿಸಬಹುದಾದ ಕಾರ್ಯಗಳಿಗೆ ಮಿತಿಯಿಲ್ಲ. ವಕೀಲರ ಎಲ್ಲಾ ಸಕ್ರಿಯ ಚಟುವಟಿಕೆಗಳಲ್ಲಿ ನ್ಯಾಯಾಂಗದ ಸಹಕಾರ ಇದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ವಕೀಲ ರಾಮಚಂದ್ರ ಕಲಾಲ್, ರಾಜಕಾರಣಿಗಳಿಗೆ ಕಾನೂನಿನ ಅರಿವು ಹೆಚ್ಚಾಗಿ ಇಲ್ಲದಿರುವ ಇಂದಿನ ದಿನಗಳಲ್ಲಿ ಶಾಸನಗಳನ್ನು ರೂಪಿಸುವಾಗ ಹಿರಿಯ ವಕೀಲರ ಸಲಹೆ ಪಡೆಯುವುದು ಸೂಕ್ತ ಎಂದು ಹೇಳಿದರು.
ಹಿರಿಯ ವಕೀಲ ಎಂ.ಬಿ.ಶಿವಾನಂದಪ್ಪ, ಕಕ್ಷಿದಾರರ ನೋವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಕೊಡಿಸುವಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು. ಮತ್ತೋರ್ವ ಹಿರಿಯ ವಕೀಲ ಹೆಚ್.ಎನ್.ರಾಜಶೇಖರಪ್ಪ, ವಕೀಲರು ಭಾಷೆ ಮೇಲೆ ಪ್ರೌಢಿಮೆ ಸಾಧಿಸುವುದು ಅಗತ್ಯ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ಸ್ನೇಹಿ ನ್ಯಾಯಾಧೀಶರಾದ ಶ್ರೀಪಾದ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎ.ಆರ್.ಪ್ರಸನ್ನ ಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳ್, ಕಾರ್ಯದರ್ಶಿ ಎಸ್.ಬಸವರಾಜ್, ಸಹಕಾರ್ಯದರ್ಶಿ ಎ.ಎಸ್.ಮಂಜುನಾಥ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಾಗೀಶ್ ಕಟಿಗಿಹಳ್ಳಿ ಮಠ, ಅಜ್ಜಯ್ಯ ಬಿ., ಚೌಡಪ್ಪ ಎಂ. ನಾಗರಾಜ್, ನೀಲಕಂಠಯ್ಯ ಕೆ.ಎಂ., ಭಾಗ್ಯಲಕ್ಷ್ಮಿ ಆರ್, ರಾಘವೇಂದ್ರ ಎಂ., ಸಂತೊಷ್ ಕುಮಾರ್ ಜಿ.ಜೆ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಎಚ್.ಎನ್.ರಾಜಶೇಖರಪ್ಪ, ಎಂ.ಬಿ.ಶಿವಾನಂದಪ್ಪ ಹಾಗೂ ರಾಮಚಂದ್ರ ಕಲಾಲ್ ಅವರನ್ನು ಸನ್ಮಾನಿಸಲಾಯಿತು.