ತಾಯಿಯಿಂದ ಮಗುವಿಗೆ ಏಡ್ಸ್ ಹರಡದಂತೆ ನಿಯಂತ್ರಣ ಅಗತ್ಯ

ತಾಯಿಯಿಂದ ಮಗುವಿಗೆ ಏಡ್ಸ್ ಹರಡದಂತೆ ನಿಯಂತ್ರಣ ಅಗತ್ಯ

ಏಡ್ಸ್ ಮುಕ್ತ ಸಮಾಜಕ್ಕೆ ಎಲ್ಲರೂ ಕೈ ಜೋಡಿಸುವಂತೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಕರೆ

ದಾವಣಗೆರೆ, ಡಿ.1- ಜಿಲ್ಲೆಯಲ್ಲಿ ಹೆಚ್ಚಾಗಿ ತಾಯಂದಿರಿಂದ ಮಕ್ಕಳು ಹೆಚ್‍ಐವಿ ಸೋಂಕಿಗೆ ತುತ್ತಾಗುತ್ತಿದ್ದು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಅಧಿಕಾರಿಗಳ ತಂಡ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಏಡ್ಸ್ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಹಾಗೂ ಏಡ್ಸ್ ನಿಯಂತ್ರಣ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು.

ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಗರದ ಎ.ವಿ.ಕೆ ಮಹಾವಿದ್ಯಾಲ ಯದಲ್ಲಿ ಸಮುದಾಯಗಳು ಮುನ್ನಡೆಸಲಿ ಎಂಬ ಘೋಷ ವಾಕ್ಯದೊಂದಿಗೆ ಜರುಗಿದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದಾದ್ಯಂತ ಇಂದು ವಿಶ್ವ ಏಡ್ಸ್ ದಿನಾಚರಣೆ  ಆಚರಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಏಡ್ಸ್ ಸೊಂಕಿತರ ಪ್ರಮಾಣ  0.29 ರಷ್ಟಿದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 206 ಏಡ್ಸ್ ಪ್ರಕರಣಗಳು ಕಂಡುಬಂದಿದ್ದು, ಸೊಂಕಿತರ ಪ್ರಮಾಣ 0.50 ರಷ್ಟಿದೆ. ಏಡ್ಸ್ ಸೋಂಕಿತರಿಗೆ ಯಾವುದೇ ಲಸಿಕೆ ಇಲ್ಲ ಹಾಗೂ ಸಂಪೂರ್ಣವಾಗಿ ನಿರ್ಮೂಲನೆಯಾಗುವುದಿಲ್ಲ. ಈ ನಿಟ್ಟಿನಲ್ಲಿ  ಜನರು ಹೆಚ್ಚಿನ ಜಾಗರೂಕತೆಯಿಂದರಬೇಕು ಎಂದು ಹೇಳಿದರು. 

ಕೊರೊನಾ, ಮಧುಮೇಹ, ರಕ್ತದೊತ್ತಡಕ್ಕಿಂತಲೂ ಏಡ್ಸ್ ಭಿನ್ನವಾಗಿದೆ. ಅಸುರಕ್ಷಿತ ಲೈಂಗಿಕ ಪ್ರಕ್ರಿಯಿಂದ  18 ರಿಂದ 25 ವರ್ಷದ ಹದಿಹರೆಯದವರಲ್ಲಿ ಹೆಚ್ಚಾಗಿ ಕಂಡುಬರುವಂತಹ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದು ಮೊದಲು ಚಿಂಪಾಂಜಿಗಳಲ್ಲಿ ಕಂಡು ಬಂದಿದ್ದು, ಕಾಲ ಕ್ರಮೇಣ ಮನುಷ್ಯರಲ್ಲಿ ಹರಡತೊಡಗಿತು ಎಂದರು.

ಕಳೆದ ಹತ್ತು ವರ್ಷಗಳ ಹಿಂದೆ ಏಡ್ಸ್ ಅತೀ ಭಯಾನಕ ಕಾಯಿಲೆಯಾಗಿದ್ದು, ಸೋಂಕಿತರನ್ನು ಮುಟ್ಟುವುದಕ್ಕೂ ಜನ ಭಯಪಡುವಂತಹ ಸ್ಥಿತಿ ಉಲ್ಬಣವಾಗಿತ್ತು. ಹೆಚ್ಚಿನ ಸಾಮಾಜಿಕ ಜಾಗೃತಿಯಿಂದ  ಇತ್ತೀಚಿನ ದಿನಗಳಲ್ಲಿ ಎಚ್.ಐ.ವಿ ಅಲ್ಪ ಮಟ್ಟಿಗೆ ಕಡಿಮೆಯಾಗಿದೆ. ಕೆಲವು ವರ್ಷಗಳ ಹಿಂದೆ  ಪಾಶ್ಚಿಮಾತ್ಯ ದೇಶಗಳಲ್ಲಿ ಏಡ್ಸ್ ಪ್ರಮಾಣ ಹೆಚ್ಚಾಗಿದ್ದಿದ್ದನ್ನು ಕಾಣಬಹುದು ಹಾಗೂ ಪ್ರಸ್ತುತ ದಿನಮಾನಗಳಲ್ಲಿ  ಶೂನ್ಯ ಪ್ರಮಾಣವಿದೆ ಎಂದರು.

ಏಡ್ಸ್ ಗರ್ಭಿಣಿಯರಿಂದ ಮಗುವಿಗೆ ಹರಡುದಂತೆ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ನೀಡಿ ನಿಯಂತ್ರಿಸಬೇಕಾಗಿದೆ. ವಿವಿಧ ಸಂಘ-ಸಂಸ್ಥೆಗಳು ಹಾಗೂ ಅಧಿಕಾರಿಗಳ ತಂಡ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಏಡ್ಸ್ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ ಎಸ್, ಪದವಿ ಪೂರ್ವ ಡಿ.ಡಿ.ಪಿ.ಯು ಕರಿಸಿದ್ದಪ್ಪ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರಾದ ಡಾ. ನಾಗೇಂದ್ರಪ್ಪ  ಎನ್.ಬಿ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಅಧೀಕ್ಷಕ ಡಾ. ಮಧು ಎಸ್. ಪಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಪಿ. ಡಿ ಮುರಳೀಧರ, ಎ. ವಿ ಕಮಲಮ್ಮ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಕಮಲಾ ಸೊಪ್ಪಿನ್ ಉಪಸ್ಥಿತರಿದ್ದರು.

error: Content is protected !!