ದಾವಣಗೆರೆ,ಡಿ.1- ನಗರದ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಬ್ಯಾಂಕ್ ಎಟಿಎಂ ಗಳ ಭದ್ರತೆ ಸಂಬಂಧ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಬ್ಯಾಂಕ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಎಲ್ಲಾ ಎಟಿಎಂಗಳಲ್ಲಿ ಕಡ್ಡಾಯವಾಗಿ ಉತ್ತಮ ಗುಣಮಟ್ಟದ ಸಿಸಿಟಿವಿ ಹಾಕುವುದು, ಗಾರ್ಡ್ ವ್ಯವಸ್ಥೆ ಮಾಡುವುದು. ಸಿಸಿಟಿವಿ ಒಳಗಡೆ ಹಾಕುವುದರ ಜೊತೆಗೆ ಎಟಿಎಂಗಳ ಹೊರ ಭಾಗದಲ್ಲಿ ಎಟಿಎಂಗಳಿಗೆ ಹಾಗೂ ಎಟಿಎಂ ಮುಂದೆ ಸಂಚರಿಸುವವರು ಕಾಣುವಂತೆ ಸಿಸಿಟಿವಿಗಳನ್ನು ಅಳವಡಿಸಬೇಕು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು.
ಬ್ಯಾಂಕುಗಳಿಗೆ ಬರುವ ಸಾರ್ವಜನಿಕರಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಯಾರಾದರೂ ಕಂಡು ಬಂದರೆ ಕೂಡಲೇ ಅವರ ಮೇಲೆ ನಿಗಾ ವಹಿಸಿ, ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಬ್ಯಾಂಕ್ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗಳೊಂದಿಗೆ ಸಂಪರ್ಕದಲ್ಲಿರಬೇಕು. ಬ್ಯಾಂಕ್ಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ಅವಶ್ಯಕ ಸಹಕಾರ ನೀಡಬೇಕು. ಬ್ಯಾಂಕ್ ಗಳಿಗೆ ಬರುವ ಹಿರಿಯ ನಾಗರಿಕರಿಗೆ ಹಾಗೂ ಹಣ ತೆಗೆದುಕೊಂಡು ಹೋಗುವ ಗ್ರಾಹಕರಿಗೆ ಗಮನ ಬೇರೆಡೆ ಸೆಳೆದು ಹಣ ಲಪಟಾಯಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವರುಗಳಿಗೆ ಹಣದ ಭದ್ರತೆ ಬಗ್ಗೆ ಸೂಕ್ತ ತಿಳುವಳಿಕೆ ನೀಡಬೇಕು ಹಾಗೂ ಬ್ಯಾಂಕ್ಗಳ ಒಳಗಡೆ, ಹೊರಗಡೆ ಗಾರ್ಡ್ ವ್ಯವಸ್ಥೆ ಮಾಡಬೇಕು.
ಇತ್ತೀಚಿಗೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬ್ಯಾಂಕ್ಗಳು ಸಾರ್ವಜನಿಕರಿಗೆ ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸೈಬರ್ ವಂಚನೆ ಪ್ರಕರಣಗಳ ತನಿಖೆ ಸಮಯದಲ್ಲಿ ಪೊಲೀಸರಿಗೆ ವಿಳಂಬ ಮಾಡದೇ ಸಹಕರಿಸಬೇಕು. ಸೈಬರ್ ವಂಚನೆ ಪ್ರಕರಣಗಳಲ್ಲಿ ನೊಂದ ವ್ಯಕ್ತಿಗಳಿಗೆ ಅಲೆದಾಡಿಸದೇ ಅವರುಗಳಿಗೆ ಕೂಡಲೇ ಅವಶ್ಯಕ ಸಹಾಯ ಮಾಡುವಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ತಿಳಿಸಲಾಯಿತು.
ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ. ಸಂತೋಷ, ಗ್ರಾಮಾಂತರ ಡಿವೈಎಸ್ಪಿ ಬಸವರಾಜ ಬಿ. ಎಸ್, ಪೊಲೀಸ್ ನಿರೀಕ್ಷಕ ಎಲ್. ರುದ್ರಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಕೆನರಾ ಬ್ಯಾಂಕ್, ಎಸ್ಬಿಐ ಬ್ಯಾಂಕ್ ವ್ಯವಸ್ಥಾಪಕರು ಸೇರಿದಂತೆ ಜಿಲ್ಲೆಯ ವಿವಿಧ ಬ್ಯಾಂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.