‘ರೂಢಿ’ ಬಿಟ್ಟು ಪ್ರಗತಿ ತೋರಿದ ಮೋದಿ-ಮನಮೋಹನ್

‘ರೂಢಿ’ ಬಿಟ್ಟು ಪ್ರಗತಿ ತೋರಿದ ಮೋದಿ-ಮನಮೋಹನ್

ಮೌನಿ ಸಿಂಗ್, ಮಾತಿನ ಮೋದಿಯ ನೀತಿಗಳಿಗೆ ಪತ್ರಕರ್ತ ರವೀಂದ್ರ ರೇಷ್ಮೆ ಪ್ರಶಂಸೆ

ದಾವಣಗೆರೆ, ಡಿ. 1 – ಮೌನ ಸ್ವಭಾವದ ಮನಮೋಹನ್ ಸಿಂಗ್ ಹಾಗೂ ಮಾತುಗಾರಿಕೆಯ ನರೇಂದ್ರ ಮೋದಿ ಅವರಿಬ್ಬರೂ ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದು ಪ್ರಧಾನ ಮಂತ್ರಿಗಳಾಗಿ, ಅನೂಹ್ಯ ರೀತಿಯ ಬದಲಾವಣೆಗಳನ್ನು ತಂದಿದ್ದಾರೆ. ಪಕ್ಷಗಳ ರೂಢಿಗತ ಸಿದ್ಧಾಂತಗಳನ್ನು ಮೀರಿ ದೇಶವನ್ನು ಬೆಳೆಸಿದ್ದಾರೆ ಎಂದು ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ ಅಭಿಪ್ರಾಯ ಪಟ್ಟಿದ್ದಾರೆ.

ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಜಯರತ್ನ ಕಲ್ಯಾಣ ಕೇಂದ್ರ ಟ್ರಸ್ಟ್‌ಗಳ ಸಂಯುಕ್ತಾಶ್ರಯದಲ್ಲಿ ನಗರದ ಬಾಪೂಜಿ ಎಂ.ಬಿ.ಎ. ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಯಣ್ಣ ಚಿಗಟೇರಿ ದತ್ತಿ ಉಪನ್ಯಾಸದಲ್ಲಿ ಅವರು ಮಾತನಾಡಿದರು.

1991ರಲ್ಲಿ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾದ ಸಂದರ್ಭದಲ್ಲಿ ಖಾಸಗೀಕರಣ, ಉದಾರೀಕರಣ ಹಾಗೂ ಜಾಗತೀಕರಣವನ್ನು ಭಾರತಕ್ಕೆ ಪರಿಚಯಿಸಿ ದರು. ನಂತರ 2004ರಲ್ಲಿ ಪ್ರಧಾನಿಯಾಗಿ ದೇಶದ ಆರ್ಥಿಕತೆಯನ್ನು ಮುನ್ನಡೆಸಿದರು. ಸಿಂಗ್ ಅವರ ಆರ್ಥಿಕ ನೀತಿಯಿಂದಾಗಿ ದೇಶ ಶ್ರೀಮಂತವಾಯಿತು. ಸಿಂಗ್ ದೇಶದಲ್ಲಿ ಮೌನ ಕ್ರಾಂತಿ ತಂದರು ಎಂದು ಹೇಳಿದರು.

ಆದರೆ, ಸಿಂಗ್ ಮಾತ್ರ ಶ್ರೀಮಂತಿಕೆಯ ದುರಾಸೆ ತೋರಲಿಲ್ಲ. ಅಧಿಕಾರಕ್ಕೆ ಬಂದಾಗ ಎಷ್ಟು ಆಸ್ತಿ ಹೊಂದಿದ್ದರೋ, ಅಧಿಕಾರ ತೊರೆದಾಗಲೂ ಅಷ್ಟೇ ಆಸ್ತಿ ಹೊಂದಿದ್ದರು ಎಂದು ರೇಷ್ಮೆ ಹೇಳಿದರು.

ನರೇಂದ್ರ ಮೋದಿ ಅವರು 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದೂ ಸಹ ಅನಿರೀಕ್ಷಿತ. ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವರು ಗುಜರಾತ್‌ನಲ್ಲೂ ಹೆಚ್ಚು ಪರಿಚಿತರಾಗಿರಲಿಲ್ಲ. ನಂತರ 2014ರಲ್ಲಿ ಪ್ರಧಾನಿಯೂ ಆದರು. ಮೋದಿ ಒಂದು ರೀತಿಯಲ್ಲಿ ಪ್ರಜಾಪ್ರಭುತ್ವದ ವಿಸ್ಮಯ ಎಂದು ರವೀಂದ್ರ ರೇಷ್ಮೆ ಹೇಳಿದರು.

ರಾಮ ಮಂದಿರ ವಿಷಯದ ಮೂಲಕವೇ ಬಿಜೆಪಿ ಬೃಹತ್ತಾಗಿ ಬೆಳೆದಿತ್ತು. ಆದರೆ, ಮೋದಿ ದೇವಾಲಯಕ್ಕಿಂತ ಶೌಚಾಲಯವೇ ಮುಖ್ಯ ಎಂಬ ಸ್ವಾಮಿ ವಿವೇಕಾನಂದರ ನುಡಿ ನೆನಪಿಸಿ ದರು. 11 ಕೋಟಿ ಶೌಚಾಲಯ ನಿರ್ಮಾಣಕ್ಕೆ ಸ್ವಚ್ಛ ಭಾರತ ಯೋಜನೆ ರೂಪಿಸಿದರು.

ಜನ್ ಧನ್ ಯೋಜನೆಯ ಮೂಲಕ 51 ಕೋಟಿ ಜನರು ಬ್ಯಾಂಕ್ ಖಾತೆ ತೆರೆಯುವಂತೆ ಮಾಡಿದರು. ಈಗಿನ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಗಿದ್ದೇ ಜನ್ ಧನ್ ಯೋಜನೆ ಕಾರಣದಿಂದ ಎಂದು ರೇಷ್ಮೆ ತಿಳಿಸಿದರು.

ಜನ್ ಧನ್, ಆಧಾರ್ ಹಾಗೂ ಮೊಬೈಲ್‌ ತಂತ್ರಜ್ಞಾನದ ಮೂಲಕ ಯು.ಪಿ.ಐ. ಕಾರ್ಯ ನಿರ್ವಹಿಸುತ್ತಿದೆ. ಇದರಿಂದಾಗಿ ವಿಶ್ವದಲ್ಲೇ ಅತಿ ಹೆಚ್ಚಿನ ಡಿಜಿಟಲ್ ವಹಿವಾಟು ಭಾರತದಲ್ಲಿ ನಡೆಯುತ್ತಿದೆ ಎಂದವರು ಹೇಳಿದರು.

ನೋಟು ರದ್ದತಿಯ ಸರ್ಜಿಕಲ್ ಸ್ಟ್ರೈಕ್ ಬೆನ್ನಲ್ಲೇ, ರಿಯಲ್ ಎಸ್ಟೇಟ್ ನಿಯಂತ್ರಣದ ರೇರಾ ಕಾಯ್ದೆ, ಅಕ್ರಮ ಹಣ ತಡೆ ಕಾಯ್ದೆ, ಬೇನಾಮಿ ಆಸ್ತಿ ನಿಗ್ರಹ ಕಾಯ್ದೆ ಹಾಗೂ ದಿವಾಳಿ ಸಂಹಿತೆಗಳನ್ನು ಜಾರಿಗೆ ತರಲಾಯಿತು. ಈ ಕಾಯ್ದೆಗಳೆಲ್ಲವೂ ನೋಟು ರದ್ದತಿಗೆ ಪೂರಕವಾಗಿದ್ದವು. ಇದರಿಂದ ಅಕ್ರಮ ಹಣದ ಮೇಲೆ ದೊಡ್ಡ ಪ್ರಮಾಣದ ಕಡಿವಾಣ ಬಿದ್ದಿದೆ ಎಂದವರು ಹೇಳಿದರು.

ಸಿಂಗ್ ಹಾಗೂ ಮೋದಿ ಅವರಿಬ್ಬರೂ ಅನಿರೀಕ್ಷಿತವಾಗಿ ರಾಜಕೀಯ ಹುದ್ದೆಗೆ ಬಂದವರು. ಪಕ್ಷಗಳು ಅದುವರೆಗೂ ಹಾಕಿಕೊಟ್ಟ ಸಿದ್ಧಾಂತದ ಚೌಕಟ್ಟುಗಳನ್ನು ಮೀರಿದ ಆಡಳಿತ ನೀಡಿದರು. ಸಿಂಗ್ ಅವರು ಅದುವರೆಗಿನ ಕಾಂಗ್ರೆಸ್ ಸರ್ಕಾರದ ಸಮಾಜವಾದಿ ಸಿದ್ಧಾಂತವನ್ನು ದಾಟಿ ಮುನ್ನಡೆದರು. ಮೋದಿ ಜಾತಿ ಭೇದಗಳನ್ನು ಮೀರಿ ಜನಪ್ರಿಯತೆ ಸಾಧ್ಯ ಎಂಬುದನ್ನು ತೋರಿಸಿದರು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಯರತ್ನ ಕಲ್ಯಾಣ ಕೇಂದ್ರದ ಟ್ರಸ್ಟ್ ಸಂಚಾಲಕ ಚಿನ್ಮಯ ಪಿ. ಚಿಗಟೇರಿ, ಭಾರತದಲ್ಲಿ ಮಾನವಿಕ ಅಧ್ಯಯನಕ್ಕೆ ಹೆಚ್ಚು ಪ್ರೋತ್ಸಾಹ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾನವಿಕ ವಿಷಯಗಳ ಅಧ್ಯಯನಕ್ಕೆ ಉತ್ತೇಜನ ನೀಡಲು ಟ್ರಸ್ಟ್ ಮೂಲಕ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮದ ವೇದಿಕೆ ಮೇಲೆ ಪರಿಷತ್ ಸದಸ್ಯ ಕೆ. ನವೀನ್, ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ, ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಬಿ.ಡಿ. ಕುಂಬಾರ್, ರಿಜಿಸ್ಟ್ರಾರ್ ಬಿ.ಬಿ. ಸರೋಜ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷ ಕೊಂಡಜ್ಜಿ ಬಿ. ಷಣ್ಮುಖಪ್ಪ, ಎಂ.ಬಿ.ಎ. ಕಾಲೇಜಿನ ನಿರ್ದೇಶಕ ಸ್ವಾಮಿ ತ್ರಿಭುವಾನಂದ, ಜಯರತ್ನ ಕಲ್ಯಾಣ ಕೇಂದ್ರ ಮ್ಯಾನೇಜಿಂಗ್ ಟ್ರಸ್ಟೀ ಪ್ರಭುದೇವ ಚಿಗಟೇರಿ, ಶಾಂತ ಯಾವಗಲ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!