ದಾವಣಗೆರೆ ಬೆಣ್ಣೆದೋಸೆ ಬ್ರಾಂಡಿಂಗ್‌ಗೆ ಕ್ರಮ

ದಾವಣಗೆರೆ ಬೆಣ್ಣೆದೋಸೆ ಬ್ರಾಂಡಿಂಗ್‌ಗೆ ಕ್ರಮ

ಬೆಣ್ಣೆದೋಸೆ ಹೋಟೆಲ್ ಮಾಲೀಕರ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್

ದಾವಣಗೆರೆ, ಡಿ.1- ದಾವಣಗೆರೆ ಬೆಣ್ಣೆದೋಸೆಗೆ ಬ್ರಾಂಡಿಂಗ್ ಮಾಡುವ ಮೂಲಕ ಪ್ರವಾಸೋದ್ಯಮದ ಜೊತೆಗೆ ಜೋಡಿಸುವ ಉದ್ದೇಶ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ತಿಳಿಸಿದರು. 

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಾವಣಗೆರೆ ಬೆಣ್ಣೆದೋಸೆಗೆ ಬ್ರಾಂಡಿಂಗ್ ಕಲ್ಪಿಸಲು ಕರೆಯಲಾದ ಬೆಣ್ಣೆದೋಸೆ ಹೋಟೆಲ್‍ಗಳ ಮಾಲೀಕರು ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ದಾವಣಗೆರೆ ಬೆಣ್ಣೆದೋಸೆಗೆ ರಾಜ್ಯದಲ್ಲಿ ತನ್ನದೇ ಆದಂತಹ ಹೆಸರಿದೆ. ಇದನ್ನು ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಜಿಲ್ಲೆಯ ಹೆಸರನ್ನು ಹೆಚ್ಚಿಸ ಬೇಕಿದ್ದು,  ಇಲ್ಲಿನ ಜನರಿಗೆ ಹೆಚ್ಚಿನ ಉದ್ಯೋಗ ಒದಗಿಸುವ ಚಿಂತನೆ ಮಾಡಲಾಗಿದೆ ಎಂದರು. 

ದೋಸೆಗೆ ಬಳಸುವ ಆಹಾರಧಾನ್ಯಗಳು ಮತ್ತು ಮಾಡುವ ವಿಧಾನಗಳ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ಮೂಲಕ ಗುಣಮಟ್ಟದ ಖಾತರಿಯನ್ನು ಜನರಿಗೆ ಕಲ್ಪಿಸಬೇಕಾಗಿದೆ. ದಾವಣಗೆರೆ ನಗರ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸಂಪರ್ಕ ಹೊಂದಿದ್ದು ಗೋವಾ, ಮಹಾರಾಷ್ಟ್ರಕ್ಕೆ ಹೋಗುವ ಪ್ರವಾಸಿಗರು, ಅಂತರರಾಜ್ಯ ಪ್ರಯಾಣಿಕರು ಸಹ ದಾವಣಗೆರೆ ಬೆಣ್ಣೆದೋಸೆ ಸವಿಯುವಂತೆ ಮಾಡುವುದು ಜಿಲ್ಲಾಡಳಿತದ ಉದ್ದೇಶವಾಗಿದ್ದು ರುಚಿಕರ, ಶುಚಿಕರ, ಗುಣಮಟ್ಟದ ದೋಸೆ ಪೂರೈಕೆ ಮಾಡುವುದು ಪ್ರಮುಖ ಉದ್ದೇಶವಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಬೆಣ್ಣೆದೋಸೆ ಹೋಟೆಲ್ ಮಾಲೀಕರುಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!