ಜಿಲ್ಲಾಡಳಿತದಿಂದ ಕನಕ ದಾಸರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ
ದಾವಣಗೆರೆ, ನ. 30 – ಸಮಾಜದಲ್ಲಿ ಅಸಮಾನತೆ ತೊಡೆದು ಹಾಕಿ ಸಮ ಸಮಾಜ ನಿರ್ಮಾಣದ ಆಶಯವೇ ಕನಕದಾಸರದ್ದಾಗಿತ್ತು. ಕೀರ್ತನೆಗಳ ಮೂಲಕವೇ ಸಮಾಜ ಬದಲಾವಣೆಗೆ ಶ್ರಮಿಸಿದ್ದರು ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಿಲ್ಲಾ ಹೋರಾಟ ಸಮಿತಿ ಹಾಗೂ ಸಮಾಜದ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಪಿ.ಬಿ ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹನ್ನೆರಡನೇ ಶತಮಾನದ ಬಸವಣ್ಣ, ಹದಿನಾರನೇ ಶತಮಾನದ ಕನಕದಾಸರು ಸೇರಿದಂತೆ ಅನೇಕ ದಾರ್ಶನಿಕರು ನಾಡಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಮಾನತೆಗಾಗಿ ಯಾವುದೇ ಹೋರಾಟ ಮಾಡದೇ, ಕೇವಲ ವಚನ, ಸಾಹಿತ್ಯ, ಕೀರ್ತನೆಗಳ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಹಾಗೂ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವ ಮಾರ್ಗವನ್ನು ತಿಳಿಸಿಕೊಟ್ಟಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಮೊಬೈಲ್‌ಗಳಿಗೆ ದಾಸರಾಗಿದ್ದು, ಅದರ ಸದ್ಬಳಕೆ ಮಾಡಿಕೊಳ್ಳುವ ಅಗತ್ಯವಿದೆ. ಮೊಬೈಲ್ ಮೂಲಕ ವಚನ ಸಾಹಿತ್ಯ, ದಾಸರ ಕೀರ್ತನೆಗಳನ್ನು ಅಧ್ಯಯನ ಮಾಡುವ ಮೂಲಕ ಸಮಾಜವನ್ನು ಒಗ್ಗೂಡಿಸಲು ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.
ಹಗರಿಬೊಮ್ಮನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಕೆ. ವೆಂಕಟೇಶ್ ಮಾತನಾಡಿ, ಶೂದ್ರ ಮತ್ತು ದಲಿತ ಪರಂಪರೆಗೆ ಸುದೀರ್ಘ ಚರಿತ್ರೆ ಇದೆ. ಸಂತ ಕನಕದಾಸರು ಸಮಾಜದ ಎಲ್ಲಾ ವರ್ಗದವರಿಗೆ ಒಂದು ನಿಧಿ ಇದ್ದಂತೆ. 16ನೇ ಶತಮಾನದಲ್ಲಿ ನಡೆದ ದಾಸ ಚಳವಳಿಗೆ ವಿಶೇಷವಾದ ಮಹತ್ವ ದೊರತಿದ್ದು, ಕನಕದಾಸರ ಪ್ರವೇಶದಿಂದ ಎಂದರು.
ಕನ್ನಡ ಸಾಹಿತ್ಯ ಚಳವಳಿಯ ಮೂಲಕ ಸಮಾಜದ ಭಿನ್ನಾಭಿಪ್ರಾಯವನ್ನು ತೊಡೆದು ಹಾಕುವಲ್ಲಿ ಹೋರಾಡಿದ ಸಂತ ಕವಿ ಕನಕದಾಸರು. ಅವರು ದುಡಿಯುವ ಹಾಗೂ ಶೋಷಿತ ವರ್ಗವನ್ನು ಪ್ರತಿನಿಧಿಸಿದ ಏಕೈಕ ವ್ಯಕ್ತಿಯಾಗಿದ್ದಾರೆ ಎಂದು ಸ್ಮರಿಸಿದರು.
ವೈದಿಕರ ಆವರಣವನ್ನು ಪ್ರವೇಶಿಸಿದ ಏಕೈಕ ಶೂದ್ರ ಸಂತ ಕನಕದಾಸರು. ಅವರನ್ನು ಸಂತರನ್ನಾಗಿ, ಭಕ್ತರನ್ನಾಗಿ, ದಾಸರನ್ನಾಗಿ ನೋಡುತ್ತೇವೆ. ಆದರೆ ಅವರು ಒಬ್ಬ ಸಮಾಜ ಸೇವಕರಾಗಿದ್ದಾರೆ, ಸಮಾನತೆ ಪ್ರತಿಪಾದಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಇನ್‌ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯ್ ಕುಮಾರ್ ಮಾತನಾಡಿ, ಕನಕದಾಸರು ಅಂದು ತೋರಿದ ಧೈರ್ಯ, ಸ್ಥೈರ್ಯವನ್ನು ಇಂದು ನಾವೆಲ್ಲಾ ತೋರುವ ಮೂಲಕ ಕನಕದಾಸರಾಗಬೇಕಿದೆ. 16 ನೇ ಶತಮಾನದಲ್ಲಿ ಕನಕದಾಸರು ಅನುಭವಿಸಿದ ಕಷ್ಟಗಳನ್ನೇ ಇಂದಿನ ಶತಮಾನದಲ್ಲೂ ಅನುಭವಿಸುತ್ತಿದ್ದೇವೆ ಎಂದರು.
ಸಮಾಜದಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದ್ದು, ನಾವು ಅಂತಹ ವಿಷ ವರ್ತುಲದಿಂದ ಹೊರ ಬಂದು ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ. ಯಾವುದೇ ಪ್ರಭುತ್ವ, ಆಡಳಿತಕ್ಕೆ ದಾಸರಾಗದೇ, ಸ್ವಶಕ್ತಿ, ಸ್ವಂತ ಆಲೋಚನೆಯಿಂದ ಮುಂದೆ ಬಂದು ಸಮಾಜ ಬದಲಾವಣೆಗೆ ಕಾರಣರಾಗಬೇಕಾಗಿದೆ ಎಂದು ಹೇಳಿದರು.
ಸಮಾಜದ ಗುರುಗಳಾದ ಶಿವಕುಮಾರ್ ಒಡೆಯರ್, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಬಿ.ಹೆಚ್. ಪರಶುರಾಮಪ್ಪ ಮತ್ತಿತರರು ಮಾತನಾಡಿದರು.
ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ್, ಸಂತೋಷ್, ದಾಸಶ್ರೇಷ್ಠ ಶ್ರೀ ಕನಕದಾಸರು ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ. ರಮೇಶ್, ದುರ್ಗಾಂಬಿಕಾ
ದೇವಸ್ಥಾನ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಮಾಜಿ ಮಹಾಪೌರ ಹೆಚ್.ಬಿ. ಗೋಣೆಪ್ಪ, ದೂಡಾ ಮಾಜಿ ಅಧ್ಯಕ್ಷ
ರಾಜನಹಳ್ಳಿ ಶಿವಕುಮಾರ್, ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಜಿ.ಪಂ.
ಸಿಇಓ ಸುರೇಶ್ ಇಟ್ನಾಳ್, ಕನ್ನಡ
ಮತ್ತು ಸಂಸ್ಕೃತಿ ಇಲಾಖೆ ಸಹ ನಿರ್ದೇಶಕ ರವಿಚಂದ್ರ, ಜಿ.ಪಂ. ಮಾಜಿ ಸದಸ್ಯ ಜಿ.ಸಿ. ನಿಂಗಪ್ಪ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವೈ. ವಿರುಪಾಕ್ಷಪ್ಪ, ಮುಖಂಡರಾದ ಎಸ್.ಎಲ್. ಆನಂದಪ್ಪ, ಆಶಾ ಉಮಾಶಂಕರ್, ಗೀತಾ ದಿಳ್ಳೆಪ್ಪ, ಜೆ.ಡಿ. ಪ್ರಕಾಶ್, ಕನಕ ಬ್ಯಾಂಕ್ ಮಾಜಿ ಅಧ್ಯಕ್ಷ ಹೆಚ್.ಜಿ. ಸಂಗಪ್ಪ, ಎನ್.ಜೆ. ನಿಂಗಪ್ಪ, ಅಡಾಣಿ ಸಿದ್ಧಪ್ಪ, ಫುಟ್‌ಬಾಲ್ ಗಿರೀಶ್, ಟಿ.ಎಸ್. ಶಿವಣ್ಣ ಮಾಸ್ತರ್, ಗೌಡ್ರು ಕಳಸಪ್ಪರ ಚನ್ನಪ್ಪ, ಐರಣಿ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.