ಒಮ್ಮುಖ ರಸ್ತೆಯಲ್ಲಿ ಬಂದವರಿಗೆ ಬಿಸಿ ಬಿಸಿ ವಡಾ

ಒಮ್ಮುಖ ರಸ್ತೆಯಲ್ಲಿ ಬಂದವರಿಗೆ ಬಿಸಿ ಬಿಸಿ ವಡಾ

ವಿನೂತನವಾಗಿ ಅರಿವು ಮೂಡಿಸಿದ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ 

ದಾವಣಗೆರೆ, ನ.29- ನಗರದಲ್ಲಿ ಒಮ್ಮುಖ ರಸ್ತೆಯಲ್ಲಿ ರಾಜಾರೋಷ ವಾಗಿ ಬರುತ್ತಿದ್ದ ವಾಹನ ಚಾಲಕರಿಗೆ ಇಂದು ಬಿಸಿ ಬಿಸಿ ಉದ್ದಿನ ವಡಾ ಸಿಕ್ಕಿವೆ.

ಹೌದು, ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸುತ್ತಿದ್ದ ಚಾಲಕರನ್ನು ಕಂಡು ಬೇಸತ್ತ ಸಾಮಾಜಿಕ ಸೇವಾ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್, ಬುಧವಾರ ಸಂಜೆ ಇಂತಹದ್ದೊಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದರು.

ಒಮ್ಮುಖ ರಸ್ತೆಯಾಗಿದ್ದ ಎವಿಕೆ ಕಾಲೇಜು ರಸ್ತೆಯಲ್ಲಿ ಬರುತ್ತಿದ್ದ ವಾಹನಗಳನ್ನು ತಡೆದು ಸವಾರರಿಗೆ ವಡಾ ಕೊಡಲಾರಂಭಿಸಿದರು. ಜೊತೆಗೆ ಅವರು  ಹೇಳುತ್ತಿದ್ದುದು ಇಷ್ಟು ! `ಸಂಚಾರ ನಿಯಮ ಉಲ್ಲಂಘಿಸಿ ನೀವು ಅಪಘಾತದಲ್ಲಿ ಮೃತಪಟ್ಟರೆ ಮನೆಯವರೆಲ್ಲಾ ತಿಥಿ ಮಾಡಿ ವಡೆ ತಿಂತಾರೆ. ಹಾಗಾಗಿ, ಮೊದಲು ನೀವೇ ವಡಾ ತಿನ್ನಿ. ಆಗಲಾದರೂ ನಿಮಗೆ ನೆನಪಿಗೆ ಬರಬಹುದು. ವಡಾ ತಿಂದಾದರೂ ಸಂಚಾರಿ ನಿಯಮ  ಪಾಲಿಸಿ’

ಹೀಗೆ ಹೇಳುತ್ತಾ ಅವರಿಂದ ವಡ ಸ್ವೀಕರಿಸುತ್ತಿದ್ದವರಲ್ಲಿ ಬಹುಪಾಲು ದ್ವಿಚಕ್ರವಾಹನ ಚಾಲಕರು, ಈ ಪೈಕಿ ಓರ್ವ ಪೂಲೀಸ್ ಸಹ ಇದ್ದುದು ವಿಶೇಷ. ಕೆಲವರು ವಡಾ ಕೈಯಲ್ಲಿಡಿದು ತಪ್ಪು ಒಪ್ಪಿಕೊಂಡು ಹಿಂತಿರುಗಿದರೆ, ಮತ್ತೆ ಕೆಲವರು ದರ್ಪದಿಂದ ಹಾಗೆಯೇ ಸಾಗುತ್ತಿದ್ದರು.

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಶ್ರೀಕಾಂತ್, ಒಮ್ಮುಖ ರಸ್ತೆಯಾಗಿದ್ದರೂ ನಿಯಮ ಪಾಲನೆ ಮಾಡುತ್ತಿಲ್ಲ. ಸಾಕಷ್ಟು ಬಾರಿ ಅರಿವು ಮೂಡಿಸಿ, ಕೊನೆಗೆ ಈ ನಿರ್ಧಾರಕ್ಕೆ ಬರಲಾಯಿತು. ಇಂದು ದ್ವಿಚಕ್ರ ವಾಹನ ಸವಾರರೂ, ಆಟೋ ಚಾಲಕರು ಸೇರಿದಂತೆ ಶಾಲಾ ವಾಹನವನ್ನೂ ತಡೆದು ಅರಿವು ಮೂಡಿಸಿದ್ದೇವೆ. ನಮ್ಮ ಈ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನಾದರೂ ಸಾರ್ವಜನಿಕರು ನಿಯಮ ಪಾಲಿಸಲಿ ಎಂದು ಆಶಿಸಿದರು.

ಬೆಳಿಗ್ಗೆ 9 ಗಂಟೆಗ ಒಳಗೆ ಹಾಗೂ ರಾತ್ರಿ 9 ಗಂಟೆಯ ನಂತರ ಒಮ್ಮುಖ ರಸ್ತೆಯಲ್ಲಿ ಸಂಚರಿಸಬಹುದು ಎಂದು ಅನೇಕರು ಭಾವಿಸಿದ್ದಾರೆ. ಅದರೆ ಅದು ತಪ್ಪು. ದಿನದ ಇಪ್ಪತ್ನಾಲ್ಕು ಗಂಟೆಯೂ ಅದು ಒಮ್ಮುಖ ರಸ್ತೆಯಾಗಿರುತ್ತದೆ. ಯಾವುದೇ ವೇಳೆಯಾಗಲಿ ನಿಯಮ ಪಾಲಿಸಿದಲ್ಲಿ ಅಪಘಾತಗಳನ್ನು ತಡೆಯ ಬಹುದು ಎಂದವರು ಹೇಳಿದರು.

ಜನಸಂದಣಿ ಹೆಚ್ಚಾಗಿರುವ ರಸ್ತೆಗಳಲ್ಲಿ ಸಿಸಿ ಟಿವಿ ಪರಿಶೀಲಿಸಿ ದಂಡ ವಿಧಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿಯೂ ಶ್ರೀಕಾಂತ್ ಹೇಳಿದರು.  ವಡಾ ವಿತರಣೆ ವೇಳೆ ಎರೋಫಿಟ್‌ ಮಂಜು, ಆನೆಸಿದ್ದ ಇತರರಿದ್ದರು.

error: Content is protected !!