ಭಾರತ ಆರ್ಥಿಕ ಶಕ್ತಿಯಾಗುವಲ್ಲಿ ಸಹಕಾರ ಕ್ಷೇತ್ರದ ಪಾತ್ರ ಮಹತ್ತರವಾದುದು

ಭಾರತ ಆರ್ಥಿಕ ಶಕ್ತಿಯಾಗುವಲ್ಲಿ ಸಹಕಾರ ಕ್ಷೇತ್ರದ ಪಾತ್ರ ಮಹತ್ತರವಾದುದು

`ಸಹಕಾರ ರತ್ನ’ ಪುರಸ್ಕೃತ ನಿರಂಜನ್‌ ನಿಶಾನಿಮಠ ಅಭಿನಂದನಾ ಸಮಾರಂಭದಲ್ಲಿ ಹೆಚ್.ಬಿ. ಮಂಜುನಾಥ್‌

ದಾವಣಗೆರೆ, ನ. 28- ಭಾರತ ಮಹಾನ್ ಆರ್ಥಿಕ ಶಕ್ತಿಯಾಗುವಲ್ಲಿ ಸಹಕಾರ ಕ್ಷೇತ್ರದ ಪಾತ್ರ ಮಹತ್ತರವಾದುದು ಎಂದು ಹಿರಿಯ ಸಹಕಾರ ಸಂಪನ್ಮೂಲ ವ್ಯಕ್ತಿ ಹೆಚ್.ಬಿ. ಮಂಜುನಾಥ ಹೇಳಿದರು.

ನಗರದ ಡಾ. ಸದ್ಯೋಜಾತ ಸ್ವಾಮೀಜಿ ಹಿರೇಮಠದ ಸಭಾಂಗಣದಲ್ಲಿ  ಸಿಟಿ ಸಹಕಾರ ಬ್ಯಾಂಕ್ ವತಿಯಿಂದ ಇಂದು ಸಂಜೆ ಹಮ್ಮಿಕೊಂಡಿದ್ದ ಬ್ಯಾಂಕಿನ ಉಪಾಧ್ಯಕ್ಷ `ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ನಿರಂಜನ್ ನಿಶಾನಿಮಠ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಬರುವ 2025 ರ ವೇಳೆಗೆ ಭಾರತ ಐದು ಟ್ರಿಲಿಯನ್ ಡಾಲರ್‌ಗಳ ಮಹಾನ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕಿದ್ದು, ಇದರಲ್ಲಿ ಸಹಕಾರ ರಂಗದ ಪಾತ್ರ ಮಹತ್ತರವಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬ ಸಹಕಾರಿಯೂ ಬದ್ಧತೆಯಿಂದ ದುಡಿಯಬೇಕಾಗಿದೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಕೇವಲ 200 ಸಹಕಾರ ಸಂಸ್ಥಾಪನೆಗಳು ಇದ್ದದ್ದು ಈಗ 855000 ಕ್ಕೂ ಹೆಚ್ಚಾಗಿದೆ. ಆಗ ದೇಶದಲ್ಲಿ ಕೇವಲ 36000 ಸದಸ್ಯತ್ವ ಇದ್ದದ್ದು, ಈಗ ಸುಮಾರು 29 ಕೋಟಿಗೂ ಹೆಚ್ಚಾಗಿದೆ. ಭಾರತದ ಪುರಾಣೋಪನಿಷತ್ತುಗಳಲ್ಲಿ ಸಹಕಾರ ತತ್ವ ವಿಶ್ವದಲ್ಲೇ ಪ್ರಥಮವಾಗಿ ಪ್ರಸ್ತಾಪವಾಗಿದ್ದು, ಪ್ರಸ್ತುತ ಭಾರತದ ಆರ್ಥಿಕ ಶಕ್ತಿ ವರ್ಧನೆಯಲ್ಲಿ ತಮ್ಮ ಪಾತ್ರ ಹಾಗೂ ಜವಾಬ್ದಾರಿ ಏನೆಂಬುದನ್ನು ಅರಿತು ಪ್ರತಿಯೊಬ್ಬ ಸಹಕಾರಿಯೂ ಕಾರ್ಯತತ್ಪರನಾಗಬೇಕಿದ್ದು, ಇವರನ್ನು ಸಂಘಟಿಸಿ, ಮಾರ್ಗದರ್ಶಿಸುವ ಹೊಣೆ ಪ್ರಶಸ್ತಿ ಪುರಸ್ಕೃತರುಗಳ ಮೇಲೆ ಇದೆ ಎಂಬ ಕಿವಿ ಮಾತು ಹೇಳಿದರು.

ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಮಾತನಾಡಿ, ನಿಶಾನಿ ಮಠದ ವಂಶಸ್ಥರು ಸದಾ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ. ಗುರುದೇವ ನಿಶಾನಿಮಠ ಅವರು ಐವತ್ತು-ಅರವತ್ತರ ದಶಕಗಳಲ್ಲಿ ನಗರಸಭೆ ಸದಸ್ಯರಾಗಿ ಹೆಸರು ಮಾಡಿದವರು, ಅದೇ ಸೇವಾ ಮನೋಭಾವದಲ್ಲಿ ನಿರಂಜನ ನಿಶಾನಿ ಮಠ  ಹೆಜ್ಜೆ ಇಟ್ಟು ತಮ್ಮ ವಂಶಸ್ಥರ ಹೆಜ್ಜೆ ಗುರುತುಗಳನ್ನು ಉಳಿಸುತ್ತಾ ಬಂದಿದ್ದಾರೆ. ಅವರ ಈ ಸಾಧನೆ ಫಲದಿಂದ ಇಂದು ಅವರಿಗೆ ಕರ್ನಾಟಕ ಸರ್ಕಾರ `ಸಹಕಾರ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಶ್ಲಾಘಿಸಿ ಅಭಿನಂದಿಸಿದರು.

ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎನ್.ಜೆ. ಗುರುಸಿದ್ಧಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ, ದಾವಣಗೆರೆ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ಬಿ.ಹೆಚ್.ಪರಶುರಾಮಪ್ಪ, ರಾ.ಲ. ಕಾಯ್ದೆ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ. ಸೋಮಶೇಖರಪ್ಪ, ಎಂ.ಕೆ.ಬಕ್ಕಪ್ಪ, ಹೆಚ್.ವಿ. ಮಂಜುನಾಥಸ್ವಾಮಿ ಮತ್ತಿತರರು ಸಹಕಾರ ರತ್ನ ದಿ. ಎನ್‌ಎಂಜೆಬಿ ಆರಾಧ್ಯ ಅವರ ಸಹಕಾರ ಸಾಧನೆಯನ್ನು ಸ್ಮರಿಸುವ ಜೊತೆಗೆ ನಿಶಾನಿಮಠ ಅವರನ್ನು ಅಭಿನಂದಿಸಿ, ಮಾತನಾಡಿದರು.

error: Content is protected !!