ನಗರ ಪಾಲಿಕೆಯ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ರಂಜಾನ್ ದರ್ಗಾ
ದಾವಣಗೆರೆ, ನ. 28- ಕನ್ನಡ ನಾಡು ಸರ್ವಜನಾಂಗದ ಶಾಂತಿಯ ತೋಟ. ಇಡೀ ಭಾರತದ ಭಾಷೆಗಳಲ್ಲಿ ವಿಶಿಷ್ಟವಾದುದು ಕನ್ನಡ ಸಾಹಿತ್ಯ ಚರಿತ್ರೆ. ಮಾನವೀಯ, ಸಹಬಾಳ್ವೆಯ ಸಂಸ್ಕೃತಿ ಕನ್ನಡ ಭಾಷೆಯದ್ದು ಎಂದು ಹಿರಿಯ ಸಾಹಿತಿ ಡಾ. ರಂಜಾನ್ ದರ್ಗಾ ಹೇಳಿದರು.
ನಗರದ ಮಹಾನಗರ ಪಾಲಿಕೆ ಆವರಣದಲ್ಲಿನ ರಾಧಮ್ಮ ಚನ್ನಗಿರಿ ರಂಗಪ್ಪ ರಂಗಮಂದಿರದಲ್ಲಿ ಮಹಾನಗರ ಪಾಲಿಕೆ, ಕನ್ನಡ ಪರ ಸಂಘ-ಸಂಸ್ಥೆಗಳು ಹಾಗೂ ಪತ್ರಕರ್ತರ ಸಹಯೋಗದಲ್ಲಿ ನಿನ್ನೆ ಹಮ್ಮಿಕೊಂಡಿದ್ದ 68 ನೇ ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಸುಮಾರು ಎರಡೂವರೆ ಸಾವಿರ ವರ್ಷಗಳ ಕಾಲದ ಇತಿಹಾಸವಿರುವ ಕನ್ನಡ ಭಾಷೆ ಸಮೃದ್ಧ ಹಾಗೂ ಶ್ರೀಮಂತ ಭಾಷೆ. ಕನ್ನಡ ಮಾತೆಯನ್ನು ಭಾರತ ಜನನಿಯ ತನುಜಾತೆ ಎಂದು ಹೇಳಲಾಗುತ್ತಿದೆ ಎಂದರು.
ಕನ್ನಡದ ನೆಲದಲ್ಲಿ ಮಹಾಕಾವ್ಯಗಳು ಹುಟ್ಟಿಕೊಂಡಿವೆ. ಮನುಷ್ಯತ್ವದ ತಳಪಾಯದಲ್ಲಿ ಭಾಷಾ ಬೆಳವಣಿಯಾಗಿದೆ. ಯಾರು ಬೇರೆಯವರ ಧರ್ಮವನ್ನು ಗೌರವಿಸುತ್ತಾರೋ, ಯಾರೂ ಬೇರೆಯವರ ವಿಚಾರವನ್ನು ಆಲಿಸಿ, ಮನ್ನಣೆ ಕೊಡುತ್ತಾರೋ ಅವರನ್ನು ಶುದ್ಧ ಬಂಗಾರ ಎಂದು `ಕವಿರಾಜ ಮಾರ್ಗದಲ್ಲಿ’ ಉಲ್ಲೇಖವಾಗಿದೆ ಎಂದು ಹೇಳಿದರು.
ಬಸವಣ್ಣ ಕೇವಲ ಸಮಾಜ ಸುಧಾರಕ ಅಲ್ಲ. ಅವರು ನವ ಸಮಾಜದ ನಿರ್ಮಾಪಕರು. ದುಡಿಯುವ ವರ್ಗದ ಮೊದಲ ಸಂಘಟಕ ಬಸವಣ್ಣ ಎಂದು ಹೇಳಲಾಗುತ್ತಿದೆ. ಪಾರ್ಲಿಮೆಂಟಿನ ಪರಿಕಲ್ಪನೆ ನೀಡಿದವರು ಸಹ ಬಸವಣ್ಣ. ಸಮ ಸಮಾಜ, ಪ್ರಜಾಪ್ರಭುತ್ವದ ಕನಸು ಕಟ್ಟಿಕೊಂಡಿದ್ದವರು ಬಸವಣ್ಣ ಎಂದು ಬಣ್ಣಿಸಿದರು.
ಕನ್ನಡ ದೊಡ್ಡ ಪರಂಪರೆ. ದೇಶದ 15 ಭಾಷೆಗಳ ಪೈಕಿ ಕನ್ನಡ ಕೂಡ ಒಂದು ಧರ್ಮಭಾಷೆಯಾಗಿದೆ. 27 ವಿದೇಶಿ ಭಾಷೆಗಳಲ್ಲಿ ವಚನಗಳ ಅನುವಾದವನ್ನು ಕಾಣುತ್ತೇವೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾತನಾಡಿ, ಇಂಗ್ಲಿಷ್, ಫ್ರೆಂಚ್ ಭಾಷೆ ಹುಟ್ಟುವ ಮುನ್ನವೇ ಕನ್ನಡ ವ್ಯಾವಹಾರಿಕ ಮತ್ತು ಗ್ರಾಂಥಿಕ ಭಾಷೆಯಾಗಿರುವ ಇತಿಹಾಸವನ್ನು ಹೊಂದಿದೆ ಎಂದರು.
ಕರ್ನಾಟಕ, ಕನ್ನಡ ರಾಜ್ಯೋತ್ಸವ ಕೇವಲ ಬಾಹ್ಯ ಆಚರಣೆಯಾಗದೇ ಆಂತರಿಕ ಆಚರಣೆಯಾಗಬೇಕು. ಕನ್ನಡ ಎಲ್ಲರ ಮನದ ಭಾಷೆಯಾಗಬೇಕು. ಕನ್ನಡ ಉಸಿರಾಗಲಿ ಎಂದು ಶುಭ ಹಾರೈಸಿದರು.
ಮುಸ್ಲಿಂ ಧರ್ಮಗುರು ಜೈನಿ ಉಸ್ತಾದ್ ಮಾತನಾಡಿ, ಎರಡೂವರೆ ಸಾವಿರ ವರುಷಗಳ ಪ್ರಾಚೀನ ಇತಿಹಾಸವಿರುವ ಕನ್ನಡದ ಅಸ್ಮಿತೆ, ಅಸ್ತಿತ್ವದ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ಚಿಂತಿಸುವ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಮಾತನಾಡದೇ ಇರುವುದೇ ಅಭಿಮಾನವಾಗಿ ಬಿಟ್ಟಿದೆ ಎಂದು ವಿಷಾದಿಸಿದರು.
ಮೇಯರ್ ವಿನಾಯಕ ಪೈಲ್ವಾನ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಅಂತರರಾಷ್ಟ್ರೀಯ ಕ್ರೀಡಾಪಟುಗಳಾದ ಜೆ.ಎನ್. ಶ್ರೀನಿವಾಸ್, ವೀರೇಶ್ ಪೈಲ್ವಾನ್, ಪತ್ರಕರ್ತರಾದ ಗಣೇಶ್ ಕಮಲಾಪುರ, ಮಧು ನಾಗರಾಜ್, ರಾಮ್‌ಪ್ರಸಾದ್, ಬಿ.ಎಂ. ಶಿವಕುಮಾರ್, ಪುನೀತ್ ಆಪ್ತಿ, ಎಂ. ಗುರುಮೂರ್ತಿ, ಹನುಮಂತರಾವ್, ಜಬೀನಾಖಾನಂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್, ಉಪ ಮೇಯರ್ ಯಶೋಧ ಹೆಗ್ಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯಕುಮಾರ್, ಮೀನಾಕ್ಷಿ ಜಗದೀಶ್, ಅಹ್ಮದ್ ಕಬೀರ್ ಖಾನ್, ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಸದಸ್ಯರಾದ ಕೆ. ಚಮನ್ ಸಾಬ್, ಅಬ್ದುಲ್ ಲತೀಫ್, ಶಿವಾನಂದ್, ಎ. ನಾಗರಾಜ್, ಆಯುಕ್ತರಾದ ಶ್ರೀಮತಿ ರೇಣುಕಾ, ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಂ. ವೀರೇಶ್, ಶುಭ ಮಂಗಳ, ಕೆ.ಜಿ. ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.