ಸಮಯವನ್ನು ಕಾಯುವುದು, ಕಾಯಿಸುವುದು ಯಾವುದೂ ಸಮಂಜಸವಲ್ಲ

ಸಮಯವನ್ನು ಕಾಯುವುದು, ಕಾಯಿಸುವುದು ಯಾವುದೂ ಸಮಂಜಸವಲ್ಲ

ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಕಳಕಳಿ

ದಾವಣಗೆರೆ, ನ.28- ಆಂಜನೇಯ ಸಹ ಕಾರಿ ಸಂಘವು  25 ವರ್ಷಗಳ ಕಾಲ ಸುದೀರ್ಘವಾಗಿ ಮುನ್ನಡೆಯುತ್ತಾ, ಬೇರೆ ಬೇರೆ ಕಡೆಗೆ  ಶಾಖೆಗಳನ್ನು ತೆರೆಯುವುದರ ಮೂಲಕ, ಆಂಜನೇಯನ ರೀತಿಯಲ್ಲಿಯೇ ಗಟ್ಟಿಯಾಗಿ ನಿಂತಿದೆ ಎಂದು  ಯಲಗುಂದದ ಚಿಲ್ಕೂರಿನ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾ ಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿಗೆ ಸಮೀಪದ ಕುಕ್ಕುವಾಡದಲ್ಲಿ ನಡೆದ ಶ್ರೀ ಆಂಜನೇಯ ಸೌಹಾರ್ದ ಸಹಕಾರಿ ಸಂಘದ ರಜತ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ರಾಷ್ಟೀಯ ಬ್ಯಾಂಕುಗಳಿಗಿಂತ ಶೀಘ್ರವಾಗಿ ಸಾಲವನ್ನು ಸಹಕಾರ ಸಂಘಗಳು ಮಂಜೂರು ಮಾಡುತ್ತವೆ. ಸಾಲ ವಾಪಸ್ಸು ನೀಡಲು ತೊಂದರೆಯಾದಾಗ ಸಹಕಾರಿ ಸಂಘಗಳು ಮಾನವೀಯತೆ ಮೆರೆದು ಸ್ವಲ್ಪ ಕಾಲಾವಕಾಶವನ್ನು ಗ್ರಾಹಕರಿಗೆ ನೀಡುತ್ತವೆ. ಗ್ರಾಹಕರು, ಜನತೆ ಸರ್ಕಾರದ ಗ್ಯಾರಂಟಿಗಳಿಗೆ, ಆಮಿಷಗಳಿಗೆ ಬಲಿಯಾಗಬಾರದು. ಸಹಕಾರ ಸಂಘಗಳಿಗೆ ಗ್ರಾಹಕರು,  ಸಾರ್ವಜನಿಕರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಬರಬೇಕು ಎಂದರು.

ಭೂಮಿಗೆ ಸರ್ಕಾರಿ ಗೊಬ್ಬರ ಹಾಕದೇ ಸಾವಯವ ಗೊಬ್ಬರ ಹಾಕಬೇಕು, ಈ ನಿಟ್ಟಿನಲ್ಲಿ ಆಂಜನೇಯ ಸಹಕಾರಿಯು ಎರೆಹುಳುವಿನ ಗೊಬ್ಬರದ ಘಟಕವನ್ನು 5 ಎಕರೆ ಜಾಗದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಇದರ ಸದುಪಯೋಗವನ್ನು ಪಡೆಯುವಂತೆ ರೈತರಿಗೆ ಕರೆ ನೀಡಿದರು. ಸಮಯವನ್ನು ಕಾಯುವುದು, ಕಾಯಿಸುವುದು ಯಾವುದೂ ಸಮಂಜಸವಲ್ಲ. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಗಳನ್ನು ಪ್ರಾರಂಭಿಸಬೇಕು. ಸ್ವಾಮೀಜಿಗಳಾದರೂ ಸರಿ, ರಾಜಕಾರಣಿಗಳಾದರೂ ಸರಿ ಯಾರಿಗೂ ಕಾಯದೇ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮವನ್ನು ಆರಂಭಿಸಬೇಕು ಎಂದು ಶ್ರೀಗಳು ಕಳಕಳಿ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸದ ಜಿ.ಎಂ.ಸಿದ್ದೇಶ್ವರ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿ, ಒಬ್ಬರಿಗೊಬ್ಬರು ಸಹಕಾರ ನೀಡಿದಾಗ ಮಾತ್ರ ಸಹಕಾರ ಸಂಘ ಚೆನ್ನಾಗಿ ಬೆಳೆಯುತ್ತದೆ. ಸಾಲವನ್ನು ಪಡೆದವರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವುದರಿಂದ ಸಹಕಾರಿ ಸಂಘಗಳ ಏಳಿಗೆ ಸಾಧ್ಯ ಎಂದರು.

ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಜಿಎಂ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ನಿರ್ದೇಶಕ ಎಂ.ಆರ್.ಪ್ರಭುದೇವ್, ಸಹಕಾರಿ ಮುಖಂಡ ಜೆ.ಆರ್.ಷಣ್ಮುಖಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ್‌ ಕೊಳೇನಹಳ್ಳಿ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಇತರರು ಇದ್ದರು. 

ಡಿ.ಜಿ.ನಾಗಭೂಷಣ್ ಮತ್ತು ತಂಡದವರು ಪ್ರಾರ್ಥಿಸಿದರೆ, ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಜಿ.ಎಂ.ರುದ್ರ ಗೌಡ್ರು ಪ್ರಾಸ್ತಾವಿಕವಾಗಿ ಮಾತನಾಡಿದರು.

error: Content is protected !!