ಸರ್ಕಾರಿ ಸೌಲಭ್ಯಗಳಿಗಾಗಿ ಮುಂದುವರೆದ ತೊಡಕು
ದಾವಣಗೆರೆ, ನ. 24 – ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರಿಗೆ ನಾಲ್ಕು ಗ್ಯಾರಂಟಿಗಳು ದೊರೆತಿವೆ. ಆದರೆ, ಹೊಸ ಪಡಿತರ ಚೀಟಿಯ ಭಾಗ್ಯ ಮಾತ್ರ ಇನ್ನೂ ಸಿಕ್ಕಿಲ್ಲ.
ಚುನಾವಣೆಗೆ ಮುಂಚೆ 3 ಲಕ್ಷ ಜನರು ಹೊಸ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದು ಇತ್ಯರ್ಥಗೊಳ್ಳುವವರೆಗೂ ಹೊಸ ಕಾರ್ಡ್‌ಗೆ ಅರ್ಜಿ ಕರೆಯುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿರುವುದು ಜನರ ನಿರಾಸೆಗೂ ಕಾರಣವಾಗಿದೆ.
ಕಳೆದ ತಿಂಗಳಷ್ಟೇ ಅಳೆದೂ ತೂಗಿ ಪಡಿತರ ಚೀಟಿಗಳ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತಾದರೂ, ಸರ್ವರ್ ಸಮಸ್ಯೆಯಿಂದಾಗಿ ಜನರು ಪರದಾಡುವುದು ತಪ್ಪಲಿಲ್ಲ. ಈಗ ಮತ್ತೆ ತಿದ್ದುಪಡಿಗೆ ಅವಕಾಶ ನೀಡಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ.
ಬಿ.ಪಿ.ಎಲ್. ಪಡಿತರ ಚೀಟಿ ಎಂಬುದು ಕೇವಲ ಆಹಾರಕ್ಕೆ ಸೀಮಿತವಾಗಿ ಉಳಿದಿಲ್ಲ. ಆರೋಗ್ಯ ಸೇರಿದಂತೆ ಹಲವಾರು ಸೌಲಭ್ಯಗಳಿಗೆ ಈ ಕಾರ್ಡ್ ರಹದಾರಿಯಾಗಿದೆ. ಹೀಗಾಗಿ ಜನರು ಹೊಸ ಬಿ.ಪಿ.ಎಲ್. ಕಾರ್ಡಿನ ಅವಕಾಶಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.
ಬಿಪಿಎಲ್ ಕಾರ್ಡ್ ಪ್ರಮಾಣಕ್ಕೂ, ಬಡನತದ ಪ್ರಮಾಣಕ್ಕೂ ರಾಜ್ಯದಲ್ಲಿ ತಾಳೆ ತಪ್ಪಿದೆ. ಸರ್ಕಾರಿ ಮಾನದಂಡಕ್ಕೆ ಒಳಪಡದವರೂ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಹೀಗಾಗಿ ಹೊಸ ಬಿಪಿಎಲ್ ಕಾರ್ಡ್ ಬಿಡುಗಡೆಗೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಈಗಿರುವ ಅನರ್ಹ ಬಿ.ಪಿ.ಎಲ್. ಪಡಿತರದಾರರನ್ನು ಕೈ ಬಿಟ್ಟು ಹೊಸ ಅರ್ಹರಿಗೆ ಅವಕಾಶ ನೀಡಲಾಗುವುದು ಎಂದೂ ಹೇಳಲಾಗಿತ್ತು. ಆದರೆ, ಸದ್ಯಕ್ಕೆ ಇದಾವ ಕೆಲಸ ಆಗುವ ಲಕ್ಷಣಗಳೂ ಕಂಡು ಬರುತ್ತಿಲ್ಲ.
ವೈದ್ಯಕೀಯ ತುರ್ತು ಅಗತ್ಯವಿರುವವರು, ಚಿಕಿತ್ಸಾ ಉದ್ದೇಶಕ್ಕಾಗಿ ಮಾತ್ರ ಪಡಿತರ ಚೀಟಿ ಪಡೆಯಲು ಸರ್ಕಾರ ಅವಕಾಶ ನೀಡಿದೆ. ಆದರೆ, ಇದೊಂದು ರೀತಿ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಲು ಹೇಳಿದಂತಾಗಿದೆ.
ಬಿಪಿಎಲ್ ಕಾರ್ಡ್ ಇಲ್ಲದವರೂ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಉಚಿತವಾಗಿ ಪಡೆಯಬಹುದು. ಆದರೆ, ಬಿ.ಪಿ.ಎಲ್. ಕಾರ್ಡ್ ಹೊಂದಿರುವವರಿಗೆ ಹೋಲಿಸಿದರೆ ಕೆಲ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತುರ್ತು ವೈದ್ಯಕೀಯ ಅಗತ್ಯ ಹೊರತು ಪಡಿಸಿದರೆ, ಉಳಿದ ಚಿಕಿತ್ಸೆಗಾಗಿ ಜನರು ಹಣ ಪಾವತಿಸಲೇಬೇಕಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಆಂಧ್ರ ಪ್ರದೇಶದ ಮಾದರಿಯಲ್ಲಿ ವೈದ್ಯಕೀಯ ಚಿಕಿತ್ಸೆ ಉದ್ದೇಶಕ್ಕಾಗಿ ಮತ್ತು ಪಡಿತರ ಪಡೆಯಲು ಬಯಸದವರಿಗಾಗಿ ಪ್ರತ್ಯೇಕ ಕಾರ್ಡ್ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದೂ ರಾಜ್ಯ ಸರ್ಕಾರ ತಿಳಿಸಿತ್ತು. ಆದರೆ, ಇದುವರೆಗೂ ಆ ಬಗ್ಗೆ ಯಾವುದೇ ಆದೇಶ ಹೊರ ಬಂದಿಲ್ಲ.