ಉಚ್ಚಂಗಿದುರ್ಗದ ಕಾರ್ಯಕ್ರಮದಲ್ಲಿ ಶ್ರೀ ರೇವಣಸಿದ್ದೇಶ್ವರ ರಾಜಗುರು ಕಟ್ಟಿಮನೆ ಮಹಾಸ್ವಾಮೀಜಿ ಆಶಯ
ಹರಪನಹಳ್ಳಿ, ನ.24- ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಉಚ್ಚಂಗೆಮ್ಮ ದೇವಿ ಪಾದಗಟ್ಟೆ ದೇವಸ್ಥಾನದ ಉದ್ಘಾಟನಾ ಸಮಾರಂಭವು ಇಂದು ನಡೆಯಿತು.
ಪೂಜೆಯನ್ನು ನೆರವೇರಿಸಿ ಸಾನ್ನಿಧ್ಯ ವಹಿಸಿ ಶ್ರೀ ರೇವಣಸಿದ್ದೇಶ್ವರ ರಾಜಗುರು ಕಟ್ಟಿಮನೆ ಮಹಾಸ್ವಾಮೀಜಿ ಮಾತನಾಡಿ, ಉಚ್ಚೆಂಗೆಮ್ಮ ದೇವಿಗೆ ದಿನವೂ ಸಹಸ್ರಾರು ಭಕ್ತರು ಬರುವುದರಿಂದ ಈ ಗ್ರಾಮ ಹೆಸರುವಾಸಿಯಾಗಿದೆ. ಪ್ರತಿಯೊಬ್ಬರೂ ದುಡಿಮೆ ಮಾಡಿ ಪ್ರಗತಿ ಸಾಧಿಸಬೇಕು, ಬಸವಣ್ಣನವರಂತೆ ಕಾಯಕವೇ ಕೈಲಾಸ ಎಂದು ನಂಬಿದವರು. ಈ ಗ್ರಾಮ ಎಲ್ಲದರಲ್ಲೂ ಮುಂದುವರೆದಿದೆ, ಶೈಕ್ಷಣಿಕವಾಗಿ ಮುಂದುವರೆಯಬೇಕಾಗಿದೆ, ಹೊಸದಾಗಿ ಪದವಿ ಕಾಲೇಜುಗಳನ್ನು ತೆರೆಯಬೇಕು ಎಂದು ಹೇಳಿದರು.
ದೇವಸ್ಥಾನವನ್ನು ಉದ್ಘಾಟಿಸಿ ಮಾತನಾ ಡಿದ ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್ ಪಾಟೀಲ್ ಮಾತನಾಡಿ, ಪಾದಗಟ್ಟಿ ಹತ್ತಿರ ರೇಣುಕಾ ದೇವಿಯ ಮೂರ್ತಿ ಹಾಗೂ ಕಟ್ಟಡವನ್ನು ಗ್ರಾಮದ ಎಲ್ಲಾ ಭಕ್ತರು ಸೇರಿ ದೇವಿಯ ಜೀರ್ಣೋದ್ಧಾರ ಮಾಡಿದ್ದಾರೆ. ಗುಡ್ಡ ಹತ್ತಿ ಹೋಗಿ ದೇವಿಯ ದರ್ಶನ ಮಾಡಲು ಆಗದ ಭಕ್ತರಿಗೆ ಪಾದಗಟ್ಟಿ ಹತ್ತಿರ ದರ್ಶನ ಮಾಡಲು ಕೋಟ್ಯಂತರ ಭಕ್ತರಿಗೆ ಅನುಕೂಲ ವಾಗಿದೆ. ಬರಗಾಲ ಬಂದಿದೆ, ಅದನ್ನು ಎದುರಿ ಸುವಂತಹ ಶಕ್ತಿಯನ್ನು ಆ ದೇವಿ ಕರುಣಿಸಲಿ.ಮುಂದಿನ ದಿನಗಳಲ್ಲಿ ಒಳ್ಳೆಯ ಮಳೆ, ಬೆಳೆ ಯಾಗಲೆಂದು ಆ ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ರೇಣುಕಾ ದೇವಿ ಜೀರ್ಣೋದ್ಧಾರ ಸೇವಾ ಸಮಿತಿ ಅಧ್ಯಕ್ಷ ಶಿವನಾಪ್ಳ ಹನುಮಂತಪ್ಪ ಮಾತನಾಡಿ, ಪಾದಗಟ್ಟಿ ಹತ್ತಿರ ನಿರ್ಮಿಸಿರುವ ಒಂದು ಕೋಟಿ ರೂ. ವೆಚ್ಚದಲ್ಲಿ ಭಕ್ತರೆಲ್ಲಾ ಸೇರಿ ನಿರ್ಮಿಸಿದ್ದೇವೆ. ಸರ್ಕಾರದಿಂದ ಯಾವುದೇ ಅನುದಾನವಿಲ್ಲ. ಎಸ್.ವಿ. ರಾಮಚಂದ್ರಪ್ಪ ಐದು ಲಕ್ಷ ಹಣ ನೀಡಿದ್ದಾರೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಶೌಚಾಲಯ ವ್ಯವಸ್ಥೆ ಯಿಲ್ಲ, ಮುಂದಿನ ದಿನಗಳಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಶೌಚಾಲಯ ನಿರ್ಮಿಸಿ ಕೊಡಬೇಕು.ಮುಜರಾಯಿ ಇಲಾಖೆಯಿಂದ ಯಾವುದೇ ಹಣ ಬಿಡುಗಡೆ ಆಗಿಲ್ಲ, ಹಣ ಇದ್ದರೂ ಖರ್ಚು ಮಾಡುತ್ತಿಲ್ಲ ಎಂದು ಹೇಳಿದರು.
ಇಂದು ಬೆಳಗ್ಗೆ ರೇಣುಕಾ ದೇವಿಗೆ ಯಜ್ಞ, ಯಾಗಾದಿ, ಮೂರ್ತಿ ಪ್ರತಿಷ್ಟಾಪನೆ, ಕಳಸಾರೋಹಣ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಶಾಸಕ ದೇವೇಂದ್ರಪ್ಪ ನವರ ಪುತ್ರ ಕೀರ್ತಿರಾಜ್, ಶಿವಕುಮಾರ್ ಸ್ವಾಮಿ, ನಿವೃತ್ತ ಶಿಕ್ಷಕರಾದ ಅಂಜಿನಪ್ಪ, ಈರಣ್ಣ, ಮುಖಂಡರಾದ ಬೇವಿನಹಳ್ಳಿ ಕೆಂಚನಗೌಡ, ಮಂಜುನಾಥ್ ಗೌಡ, ಅಜ್ಮತ್ ಉಲ್ಲಾ ಸಾಬ್, ರವಿಗೌಡ್ರು, ಎನ್.ಸಿ. ಸಿದ್ದನಗೌಡ್ರು, ರಫಿಕ್ ಸಾಬ್, ಮಂಜುನಾಥ್, ಕುಮಾರ್ ಮತ್ತು ಇತರರು ಹಾಜರಿದ್ದರು.