ಹೈಕೋರ್ಟ್ ಆದೇಶದ ನಂತರ ಬಿಡುಗಡೆ
ಬೆಂಗಳೂರು, ನ. 20 – ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಎರಡನೇ ಪ್ರಕರಣದಲ್ಲಿ ಸೋಮವಾರ ಮತ್ತೆ ಬಂಧಿತ ರಾಗಿದ್ದ ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಶರಣರು ಹೈಕೋರ್ಟ್ ಆದೇಶದ ಮೇರೆಗೆ ಬಿಡುಗಡೆಯಾದರು. ನಾಟಕೀಯ ಬೆಳವಣಿಗೆಯಲ್ಲಿ ಮಧ್ಯಾಹ್ನ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಶರಣರು, ಮೂರು ಗಂಟೆಗಳ ನಂತರ ಕಾರಾಗೃಹದಿಂದ ಹೊರಬಂದರು.
ಶರಣರ ವಿರುದ್ಧ ಎರಡು ಪೋಕ್ಸೋ ಪ್ರಕರಣಗಳು ದಾಖಲಾಗಿದ್ದವು. ಹೈಕೋರ್ಟ್ ಜಾಮೀನು ನೀಡಿದ ನಂತರ ನ.16ರಂದು ಅವರನ್ನು ಬಿಡುಗಡೆ ಮಾಡಲಾಗಿತ್ತು.
ಆದರೆ, ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬಂಧನದ ವಾರಂಟ್ ಹೊರಡಿಸಿತ್ತು.
ಈ ಹಿನ್ನೆಲೆಯಲ್ಲಿ ಅವರನ್ನು ದಾವಣಗೆರೆಯ ವಿರಕ್ತ ಮಠದಿಂದ ಬಂಧಿಸಿ, ಚಿತ್ರದುರ್ಗ ನ್ಯಾಯಾಲಯದ ಎದುರು ಹಾಜರು ಪಡಿಸಲಾಯಿತು. ಡಿ.2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶೆ ಬಿ.ಕೆ.ಕೋಮಲಾ ಆದೇಶಿಸಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಶರಣರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಪೊಲೀಸರು, ಕಾರಾಗೃಹಕ್ಕೆ ಒಪ್ಪಿಸಿದರು.
ವಾರಂಟ್ ಪ್ರಶ್ನಿಸಿ ಶರಣರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದರು. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಸಂಜೆ ತುರ್ತು ವಿಚಾರಣೆ ನಡೆಸಿತು.
ಸೆಷನ್ಸ್ ಕೋರ್ಟ್ ಹೊರಡಿಸಿದ ವಾರೆಂಟ್ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್, ತಕ್ಷಣ ಬಿಡುಗಡೆಗೆ ಆದೇಶಿಸಿತು. ಈ ಆದೇಶದ ಪ್ರತಿ ತಲುಪಿದ ಬಳಿಕ ಶರಣರನ್ನು ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.