ದಾವಣಗೆರೆ, ನ.20- ಮಾರಕ ಕಾಯಿದೆಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ರೈತರು, ಕೃಷಿಕರು ಮತ್ತು ಕಾರ್ಮಿಕ ರನ್ನು ಬೀದಿಗೆ ತಳ್ಳಿ ಅವರ ಸಂಕಷ್ಟವನ್ನು ನೋಡಿ ಗಹಗಹಿಸಿ ನಗುತ್ತಿವೆ ಎಂದು ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಕಾರ್ಯದರ್ಶಿ ಪಿ.ವಿ.ಲೋಕೇಶ್ ಆಕ್ರೋಶ ವ್ಯಕ್ತ ಪಡಿಸಿದರು.
ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಧಿಕ್ಕರಿಸಿ ನವೆಂಬರ್ 26 ರಿಂದ 28 ಬೆಂಗಳೂರಿನಲ್ಲಿ ಆಯೋ ಜಿಸಲಾಗಿರುವ ಮಹಾಧರಣಿ ಕಾರ್ಯ ಕ್ರಮದ ಪೂರ್ವಭಾವಿಯಾಗಿ ನಗರದ ಎಪಿಎಂಸಿ ಸಭಾಂಗಣದಲ್ಲಿ ಆಯೋಜಿ ಸಲಾಗಿದ್ದ ಜಿಲ್ಲಾ ಸಮಾವೇಶ ಉದ್ಘಾ ಟಿಸಿ ಅವರು ಮಾತನಾಡಿದರು.
2 ವರ್ಷಗಳ ಹಿಂದೆ ಕಾರ್ಮಿಕರು, ರೈತರಿಗೆ ಮಾರಕವಾದ ಕೃಷಿ ಮತ್ತು ಕಾರ್ಮಿಕ ಕಾಯಿದೆಗಳನ್ನು ಜಾರಿಗೆ ತಂದರು. ಕೇಂದ್ರ ಸರ್ಕಾರದ ವಿರುದ್ದ ಹಗಲು ರಾತ್ರಿಯೆನ್ನದೇ ರೈತರು ದೆಹಲಿಯಲ್ಲಿ ಧರಣಿ, ಉಪವಾಸ ಸತ್ಯಾಗ್ರಹ ಸೇರಿದಂತೆ ಹಲವಾರು ಹೋರಾಟಗಳನ್ನು ಮಾಡಿದರು. ಇದಕ್ಕೆ ವಿರುದ್ದವಾಗಿ ಕೇಂದ್ರ ಸರ್ಕಾರ ಹಲವು ಕುತಂತ್ರಗಳನ್ನು ನಡೆಸಿ ರೈತರ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿತು. ಆದರೂ ರೈತರು ಹಿಮ್ಮೆಟ್ಟಲಿಲ್ಲ. ಅಂತಿ ಮವಾಗಿ ರೈತರ ಮುಂದೆ ಮಂಡಿಯೂರಿ ನಿಂತ ನರೇಂದ್ರ ಮೋದಿಯವರು ವಾಪಾಸ್ ಪಡೆದಿದ್ದಾರೆ. ಆದರೆ, ರಾಜ್ಯ ಸರ್ಕಾರ ಮಾತ್ರ ಎಪಿಎಂಸಿ, ಕೃಷಿ ಹಾಗೂ ವಿದ್ಯುತ್ ಕಾಯಿದೆಯನ್ನು ವಾಪಾಸ್ ಪಡೆದಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಕಾರಣ ಕೇಂದ್ರ ಸರ್ಕಾರ ಇನ್ನಾ ದರೂ ದೂರಾಲೋಚನೆ, ಬಂಡವಾಳ ಶಾಹಿ ಪರವಾದ ನೀತಿಗಳನ್ನು ಬಿಟ್ಟು ಜನಸಾಮಾನ್ಯರಿಗೆ ಅನುಕೂಲ ಆಗು ವಂತೆ ಕಾಯಿದೆಗಳನ್ನು ರೂಪಿಸ ಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ಮಹಾಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರೈತ ಮುಖಂಡ ಕುರುವ ಗಣೇಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲೇ ಎಪಿಎಂಸಿ, ಕೃಷಿ, ವಿದ್ಯುತ್ ಕಾಯಿದೆಯನ್ನು ವಾಪಾಸ್ ಪಡೆದು ರೈತರ ಬದುಕನ್ನು ಹಸನು ಮಾಡುತ್ತೇವೆ ಎಂದು ವಾಗ್ದಾನ ನೀಡಿತ್ತು. ಆದರೆ ಚುನಾವಣೆ ವೇಳೆ ನೀಡಿದ ಯಾವುದೇ ಭರವಸೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಕಣ್ಣಿದ್ದು ಕುರುಡಾಗಿ, ಕಿವಿ ಇದ್ದು ಕಿವುಡಾಗಿ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಎಐಕೆಎಸ್‍ನ ಜಿಲ್ಲಾ ಸಂಚಾಲಕ ಆವರಗೆರೆ ಹೆಚ್.ಜಿ.ಉಮೇಶ್ ಮಾತ ನಾಡಿ, ನಮ್ಮನ್ನು ಆಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ ನೀತಿಯಿಂದ ಹಿಂದೆ ಸರಿಯಬೇಕು. ರೈತರು, ಕೃಷಿಕರು, ಕಾರ್ಮಿಕರ ಮೇಲೆ ಮಾರಕವಾದ ಕಾಯಿದೆಗಳನ್ನು ಹೇರುವುದಲ್ಲದೇ, ಅವರ ಹೋರಾಟದ ಮೇಲೆ ಗಧಾಪ್ರಹಾರ ಮಾಡುವುದನ್ನು ಬಿಟ್ಟು ಅವರ ಶ್ರೇಯೋಭಿವೃದ್ದಿ, ಕ್ಷೇಮಾಭಿವೃದ್ದಿಗೆ ಪೂರಕವಾಗಿ ಆಡಳಿತ ನಡೆಸಬೇಕೆಂದು ಆಗ್ರಹಿಸಿದರು.
ಆರಂಭದಲ್ಲಿ ಪ್ರಾಸ್ತಾವಿಕವಾಗಿ ಎಐಕೆಕೆಎಂಎಸ್‍ನ ಜಿಲ್ಲಾಧ್ಯಕ್ಷ ಮಧು ತೊಗಲೇರಿ ಮಾತನಾಡಿದರು. ಜನಶಕ್ತಿ ಸಂಘಟನೆಯ ಸತೀಶ್ ಅರವಿಂದ್, ಕೈದಾಳೆ ಮಂಜುನಾಥ್, ಕೆ.ಹೆಚ್.ಆನಂದರಾಜ್, ಹೊನ್ನೂರು ಮುನಿಯಪ್ಪ, ಹೆಗ್ಗೆರೆ ರಂಗಪ್ಪ, ಇ.ಶ್ರೀನಿವಾಸ್ ಇತರರು ಇದ್ದರು.