ಕೈಗಾರಿಕಾ ಸಹಭಾಗಿತ್ವದಿಂದಲೇ ಕುಶಲ ಇಂಜಿನಿಯರ್

ಕೈಗಾರಿಕಾ ಸಹಭಾಗಿತ್ವದಿಂದಲೇ ಕುಶಲ ಇಂಜಿನಿಯರ್

ಕೈಗಾರಿಕೋದ್ಯಮಿಗಳ ಸಭೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಕುಲಪತಿ ಡಾ. ಎಸ್. ವಿದ್ಯಾಶಂಕರ್

ದಾವಣಗೆರೆ, ನ. 17 – ಕೈಗಾರಿಕೆಗಳ ಸಹಭಾಗಿತ್ವದಿಂದ ಕುಶಲ ಇಂಜಿನಿಯರ್‌ಗಳನ್ನು ರೂಪಿಸಲು ಸಾಧ್ಯ. ಹೀಗಾಗಿ ಇನ್ಫೋಸಿಸ್‌ನಂತಹ ದೈತ್ಯ ಕಂಪನಿಗಳಿಂದ ಹಿಡಿದು, ದಾವಣಗೆರೆ ಹಂತದ ಮಧ್ಯಮ ಹಾಗೂ ಸಣ್ಣ ಉದ್ಯಮಗಳವರೆಗೆ ಕೈಗಾರಿಕಾ ಸಹಭಾಗಿತ್ವಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ವಿ.ವಿ. ಕುಲಪತಿ ಡಾ. ಎಸ್. ವಿದ್ಯಾಶಂಕರ್ ತಿಳಿಸಿದರು.

ವಿ.ಟಿ.ಯು., ವಿಶ್ವೇಶ್ವರಯ್ಯ ಸಂಶೋಧನಾ ಹಾಗೂ ಆವಿಷ್ಕಾರ ಪ್ರತಿಷ್ಠಾನ ಹಾಗೂ ಯು.ಬಿ.ಡಿ.ಟಿ. ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮಧ್ಯ ಕರ್ನಾಟಕ ಕೈಗಾರಿಕೋದ್ಯಮಿಗಳ ಸಭೆಯನ್ನು ಆನ್‌ಲೈನ್‌ ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್‌ ಅಂಡ್‌ ಟಿ, ಟಿ.ಸಿ.ಎಸ್. ಹಾಗೂ ಇನ್ಪೋಸಿಸ್‌ ಸೇರಿದಂತೆ 50 ಬೃಹತ್ ಕಂಪನಿಗಳ ಜೊತೆ ಈಗಾಗಲೇ ವಿ.ಟಿ.ಯು. ಒಪ್ಪಂದ ಮಾಡಿಕೊಂಡಿದೆ. 3,500 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಸಹಭಾಗಿತ್ವದ ಮೂಲಕ ಹಾನರ್ಸ್ ಹಾಗೂ ಮೈನರ್ಸ್ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎಂದವರು ಹೇಳಿದರು.

ಅದೇ ರೀತಿ ದಾವಣಗೆರೆ ಹಂತದಲ್ಲೂ ಕೈಗಾರಿಕೆಗಳ ಜೊತೆ ಸಹಭಾಗಿತ್ವ ಮಾಡಿಕೊಳ್ಳಲಾಗುವುದು. ದೇಶದ ಶೇ.60ರಷ್ಟು ಕೈಗಾರಿಕಾ ಉತ್ಪನ್ನಗಳು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಂದ ಬರುತ್ತಿದೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲೂ ಉದ್ಯಮಗಳ ಜೊತೆ ಸಂವಾದ ನಡೆಸಲಾಗುತ್ತಿದೆ ಎಂದು ವಿದ್ಯಾಶಂಕರ್ ಹೇಳಿದರು.

ಪ್ರತಿಯೊಂದು ಕೈಗಾರಿಕೆಯೂ ತನ್ನದೇ ಆದ ಅಗತ್ಯ ಹೊಂದಿರುತ್ತದೆ. ಪ್ರತಿ ಕೈಗಾರಿಕೆಗಾಗಿ ಪ್ರತ್ಯೇಕ ಬೋಧನೆ ಮಾಡಲಾಗದು. ಹೀಗಾಗಿ ಕೈಗಾರಿಕಾ ಸಹಭಾಗಿತ್ವದ ಮೂಲಕ, ಉದ್ಯಮಗಳ ಅಗತ್ಯ ರೀತಿಯ ಇಂಜಿನಿಯರ್‌ಗಳನ್ನು ರೂಪಿಸಲು ಸಾಧ್ಯ ಎಂದವರು ಹೇಳಿದರು.

ಬೆಳಗಾವಿಯ ವಿ.ವಿ. ಕ್ಯಾಂಪಸ್‌ನಲ್ಲಿ 2 ಲಕ್ಷ ಚದರಡಿ ಪ್ರದೇಶದಲ್ಲಿ ಯಾಂತ್ರಿಕ ಘಟಕವನ್ನು ತೆರೆಯಲಾಗಿದೆ. ಇಲ್ಲಿ ಕೈಗಾರಿಕೆಗಳಿಗೆ ಅಗತ್ಯ ಪರಿಹಾರ ನೀಡಲಾಗುತ್ತಿದೆ. ಕೆಲ ಉತ್ಪನ್ನಗಳು ಹೊರಗಡೆಗಿಂತ ಕಡಿಮೆ ವೆಚ್ಚದಲ್ಲಿ ರೂಪು ಗೊಳ್ಳುತ್ತಿವೆ. ಕೈಗಾರಿಕೆಗಳು ಕೈ ಜೋಡಿಸಿದರೆ, ದಾವಣಗೆರೆಯಲ್ಲೂ ಇಂತಹ ಕೇಂದ್ರದ ಸ್ಥಾಪನೆ ಸಾಧ್ಯ ಎಂದು ವಿದ್ಯಾಶಂಕರ್ ಹೇಳಿದರು. ಯುಬಿಡಿಟಿ ಪ್ರಾಂಶುಪಾಲ ಡಾ. ಡಿ.ಪಿ. ನಾಗರಾಜಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ರಿಜಿಸ್ಟ್ರಾರ್ ಡಾ. ಬಿ.ಇ. ರಂಗಸ್ವಾಮಿ, ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಡಾ. ಹೆಚ್. ಲಕ್ಷ್ಮಿಕಾಂತ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಾಜೇಂದ್ರ ನಾಮದೇವ್ ಕದಮ್,  ವಿಶ್ವವಿದ್ಯಾಲಯದ ಸಂಶೋಧನಾ ವಲಯದ ಮುಖ್ಯಸ್ಥ ಸಂತೋಷ ಇಟ್ಟಣಗಿ ಮತ್ತಿತರರು ಉಪಸ್ಥಿತರಿದ್ದರು.

ರೇಖಾ ಪದಕಿ ಪ್ರಾರ್ಥಿಸಿದರು. ಡಾ.ಟಿ.ಡಿ. ವಿಷ್ಣುಮೂರ್ತಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ಡಾ. ಶೇಖರಪ್ಪ ಬಿ. ಮಲ್ಲೂರ್ ಹಾಗೂ ಡಾ. ರೇಶ್ಮಾ ಶೆಟ್ಟಿ ನಿರೂಪಿಸಿದರು. ಡಾ. ಮಲ್ಲಿಕಾರ್ಜುನ ಎಸ್. ಹೊಳಿ ವಂದಿಸಿದರು.

error: Content is protected !!