ದೇಸಿ ಉತ್ಪನ್ನಗಳ ಬಳಸಿ ಸ್ಥಳೀಯರಿಗೆ ಧ್ವನಿಯಾಗೋಣ : ಸಂಸದ ಜಿ.ಎಂ.ಸಿದ್ದೇಶ್ವರ

ದೇಸಿ ಉತ್ಪನ್ನಗಳ ಬಳಸಿ ಸ್ಥಳೀಯರಿಗೆ ಧ್ವನಿಯಾಗೋಣ : ಸಂಸದ ಜಿ.ಎಂ.ಸಿದ್ದೇಶ್ವರ

ದಾವಣಗೆರೆ, ನ.17-ದೀಪಾವಳಿ ಹಬ್ಬದ ನಿಮಿತ್ಯ ಪ್ರಧಾನಮಂತ್ರಿ ನರೇಂದ್ರ ಮೋದೀಜಿ ಯವರ `ವೋಕಲ್ ಫಾರ್ ಲೋಕಲ್’ ಕರೆಗೆ ಓಗೊಟ್ಟ ಸಂಸದ ಜಿ.ಎಂ.ಸಿದ್ದೇಶ್ವರ ಅವರು ನಗರದ ಡಾ. ಎಂ.ಸಿ. ಮೋದಿ ರಸ್ತೆಯ ಬೀದಿ ಬದಿ ವ್ಯಾಪಾರಿಗಳ ಹಾಗೂ ಅಶೋಕ ರಸ್ತೆಯಲ್ಲಿರುವ ಜನತಾ ಖಾದಿ ಭಂಡಾರಕ್ಕೆ ಭೇಟಿ ನೀಡಿ, ಸ್ಥಳಿಯರು ತಯಾರಿಸಿದ ವಸ್ತುಗಳನ್ನು ಖರೀದಿಸುವ ಮೂಲಕ ಸ್ಥಳೀಯ ಉತ್ಪಾದಕರನ್ನು ಪ್ರೋತ್ಸಾಹಿಸಿದರು.

ನರೇಂದ್ರ ಮೋದೀಜಿಯವರು ಭಾರತೀಯರು ಸ್ಥಳೀಯ ಉತ್ಪನ್ನಗಳನ್ನು ಬಳಸಬೇಕು ಮತ್ತು ಹೆಚ್ಚಾಗಿ ಪ್ರೋತ್ಸಾಹಿಸಬೇಕು, ಇದು ಕೂಡ ಸ್ವಾವಲಂಬಿ ಭಾರತದ ಕನಸು ಮತ್ತು ಗುರಿಯಾಗಿದೆ ಎಂದು ಹೇಳಿದ್ದಾರೆ. ನಾವು ನಮ್ಮ ಸ್ಥಳೀಯ ಉತ್ಪನ್ನಗಳನ್ನು ಪ್ರಶಂಸಿಸುವ ಮೂಲಕ ಮೋದೀಜಿಯವರ ಕನಸನ್ನು ನಾವೆಲ್ಲರೂ ಸೇರಿ ನನಸು ಮಾಡಬೇಕಿದೆ ಎಂದು ಸಂಸದರು ಹೇಳಿದರು.

ಭಾರತ ಆತ್ಮ ನಿರ್ಭರ ದೇಶವಾಗಬೇಕು ಎಂಬುದು ಸಮಸ್ತ ಭಾರತೀಯರ ಕನಸು. ಈ ಕನಸನ್ನು ನನಸು ಮಾಡಲು ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಸ್ವಾವಲಂಬನೆ ದೇಶದ ತುರ್ತು ಅಗತ್ಯವಾಗಿದ್ದು, ಇದಕ್ಕಾಗಿ `ವೋಕಲ್ ಫಾರ್ ಲೋಕಲ್’ ಯೋಜನೆಯ ಮಂತ್ರವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು. ದೀಪಾವಳಿ ಹಬ್ಬಕ್ಕೋಸ್ಕರ ಖರೀದಿಸುವಾಗ ದೇಸಿ ಉತ್ಪನ್ನಗಳ ಬಗ್ಗೆ ನಿಮ್ಮ ಗಮನವಿರಲಿ ಎಂದರು. ನೀವು ಮಾಡುವ ಒಂದೊಂದು ಖರೀದಿ ದೇಸಿ ಉತ್ಪಾದಕರ ಬಾಳಲ್ಲಿ ಬೆಳಕು ತರಲಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ವಾಸನ ಬಸವರಾಜ್ ಸೇರಿದಂತೆ, ಇತರರು ಸಂಸದರ ಜೊತೆಗಿದ್ದರು.

error: Content is protected !!