ಚಿತ್ರದುರ್ಗದಿಂದ ಹೊರಗಿರುವಂತೆ ಜಾಮೀನಿನಲ್ಲಿ ಷರತ್ತು, ದಾವಣಗೆರೆಯಲ್ಲಿ ಉಳಿದುಕೊಳ್ಳಲು ಶರಣರ ನಿರ್ಧಾರ
ಚಿತ್ರದುರ್ಗ, ನ. 16 – ಚಿತ್ರದುರ್ಗ ಮುರುಘಾ ಮಠದ ಶ್ರೀಗಳಾದ ಶಿವಮೂರ್ತಿ ಶರಣರಿಗೆ ಚಿತ್ರದುರ್ಗ ನ್ಯಾಯಾಲಯ ಜಾಮೀನು ನೀಡಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹಾಗೂ ಜಾತಿ ನಿಂದನೆ ಪ್ರಕರಣಗಳಲ್ಲಿ ಸಿಲುಕಿದ್ದ ಅವರು, ಕಳೆದ ವರ್ಷ ಸೆಪ್ಟೆಂಬರ್‌ನಿಂದ ಬಂಧನದಲ್ಲಿದ್ದರು.
ಕಳೆದ ನವೆಂಬರ್ 8ರಂದು ಶರಣರಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಈ ಬಗ್ಗೆ ಪರಿಶೀಲಿಸಿದ ನಂತರ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಆರೋಪಿ ಚಿತ್ರದುರ್ಗದಿಂದ ಹೊರಗಿರಬೇಕು ಎಂದು ಜಾಮೀನು ನೀಡುವಾಗ ನ್ಯಾಯಾ ಲಯ ಷರತ್ತು ವಿಧಿಸಿದೆ. ಅದ ರಂತೆ, ಶರಣರು ದಾವಣಗೆರೆಯ ವಿರಕ್ತ ಮಠಕ್ಕೆ ಬಂದಿದ್ದಾರೆ.
ಚಿತ್ರದುರ್ಗ ಬಂಧೀಖಾನೆ ಯಿಂದ ಹೊರ ಬಂದ ನಂತರ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿರುತ್ತೇನೆ. ನಿಮ್ಮ ಸಹಕಾರ ಬೇಕು. ನ್ಯಾಯಾಲಯದ ಪ್ರಕ್ರಿಯೆಗಳು ನಡೆಯುವಾಗ, ನಾನು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಜಯಘೋಷಗಳ ಸ್ವಾಗತ
ಚಿತ್ರದುರ್ಗದ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ದಾವಣಗೆರೆಯ ಶಿವಯೋಗಾಶ್ರಮಕ್ಕೆ ಬಂದ ಮುರುಘಾ ಶರಣರಿಗೆ ಮಠದ ಭಕ್ತರು ಜಯಘೋಷಗಳೊಂದಿಗೆ ಸ್ವಾಗತಿಸಿದರು.
ಕಾರಿನಿಂದ ಇಳಿದು ಬಂದ ಶರಣರಿಗೆ ಮಾಲಾರ್ಪಣೆ ಮಾಡಿ, ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಜಯಘೋಷಗಳ ನಂತರ ಸಿಹಿ ಹಂಚಿ ಸಂಭ್ರಮಿಸಿದರು.
ನಂತರ ಶರಣರು ಶಿವಯೋಗಾಶ್ರಮದ ಆವರಣದಲ್ಲಿರುವ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಆಲಯ ಹಾಗೂ ಅಥಣಿ ಶಿವಯೋಗಿಗಳ ವರ ಕರ್ತೃ ಗದ್ದುಗೆಗೆ ತೆರಳಿ ನಮನ ಸಲ್ಲಿಸಿದರು. ನಂತರ ದಾವಣಗೆರೆಯ ಹಳೆ ಪೇಟೆಯ ವಿರಕ್ತಮಠಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಮಠದ ಭಕ್ತರಾದ ಎಂ. ಜಯಕುಮಾರ್, ಎಸ್.ಓಂಕಾರಪ್ಪ, ಕುಂಟೋಜಿ ಚನ್ನಬಸಪ್ಪ, ಶಶಿಧರ ಬಸಾಪುರ, ಬಾಡದ ಆನಂದರಾಜ್, ಜಿ.ಸಿ ಬಸವರಾಜ್, ಮಂಜುನಾಥಸ್ವಾಮಿ, ಚಿಗಟೇರಿ ಜಯಪ್ರಕಾಶ್, ಸಿ.ಆರ್. ನಸೀರ್ ಅಹ್ಮದ್, ಭರಮಸಾಗರ ಪ್ರದೀಪ್, ವಕೀಲರಾದ ಸಂದೀಪ್ ಪಾಟೀಲ್, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಆರೋಪಿ ವಿರುದ್ಧ ಎರಡು ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಇವುಗಳ ವಿಚಾರಣೆ ಪೂರ್ಣಗೊಳ್ಳುವವರೆಗೂ ಚಿತ್ರದುರ್ಗಕ್ಕೆ ಬರದಂತೆ ಹೈಕೋರ್ಟ್ ಷರತ್ತು ವಿಧಿಸಿತ್ತು. ಎರಡು ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಹಾಗೂ ಎರಡು ಶ್ಯೂರಿಟಿಗಳನ್ನು ಸಲ್ಲಿಸಬೇಕು ಹಾಗೂ ಪುರಾವೆಗಳನ್ನು ತಿರುಚುವುದು, ಇಲ್ಲದೇ ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದನ್ನು ಮಾಡಬಾರದು ಎಂದು ತಿಳಿಸಲಾಗಿದೆ.
ಇದಕ್ಕೂ ಮುಂಚೆ ಅಕ್ಟೋಬರ್ 13ರಂದು ನ್ಯಾಯಾಲಯ ಮೊದಲ ಪ್ರಕರಣದಲ್ಲಿ ಶರಣರಿಗೆ ಜಾಮೀನು ನೀಡಿತ್ತು.
ಮೈಸೂರಿನ ಸರ್ಕಾರೇತರ ಸಂಸ್ಥೆಯಾದ ಒಡನಾಡಿ ನೀಡಿದ ದೂರು ಆಧರಿಸಿ ಶರಣರು ಮತ್ತಿತರರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು. ಮಠದ ಶಾಲೆ ಹಾಗೂ ಹಾಸ್ಟೆಲ್‌ನಲ್ಲಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ದಾಖಲಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ದೂರನ್ನೂ ದಾಖಲಿಸಲಾಗಿತ್ತು.
ನಂತರದಲ್ಲಿ ಆರೋಪಿಗಳನ್ನು ಬಂಧಿಸಿ ಕಸ್ಟಡಿಯಲ್ಲಿಡಲಾಗಿತ್ತು. ಎರಡು ತಿಂಗಳ ನಂತರ ಇನ್ನಿಬ್ಬರು ವಿದ್ಯಾರ್ಥಿನಿಯರು ನೀಡಿದ ದೂರು ಆಧರಿಸಿ ಮತ್ತೊಂದು ಪ್ರಕರಣ ದಾಖಲಿಸಲಾಗಿತ್ತು.