ಭದ್ರತಾ ನೋಂದಣಿ ಫಲಕ ಅಳವಡಿಕೆ ಗಡುವು ವಿಸ್ತರಣೆ

ಭದ್ರತಾ ನೋಂದಣಿ ಫಲಕ ಅಳವಡಿಕೆ ಗಡುವು ವಿಸ್ತರಣೆ

ದಾವಣಗೆರೆ, ನ. 15 – ಹೆಚ್.ಎಸ್.ಆರ್.ಪಿ. (ಹೆಚ್ಚಿನ ಭದ್ರತೆಯ ನೋಂದಣಿ ಫಲಕ) ಅಳವಡಿಕೆಯ ಗಡುವನ್ನು ಮುಂದಿನ ವರ್ಷ ಫೆಬ್ರವರಿ 17ರವರೆಗೆ ಮುಂದೂಡಲಾಗಿದೆ. ಈ ಅವಧಿಯೊಳಗೆ ಎಲ್ಲಾ ವಾಹನಗಳಿಗೆ ಹೆಚ್.ಎಸ್.ಆರ್.ಪಿ. ಫಲಕ ಅಳವಡಿಸಿಕೊಳ್ಳದೇ ಇದ್ದರೆ ದಂಡ ವಿಧಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ಹೆಚ್.ಎಸ್.ಆರ್.ಪಿ. ನೋಂದಣಿ ಫಲಕ ಗಳ ಅಳವಡಿಕೆ ಕುರಿತು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2019ರ ಏಪ್ರಿಲ್ ನಂತರ ನೋಂದಣಿಯಾದ ವಾಹನಗಳಿಗೆ ಹೆಚ್.ಎಸ್.ಆರ್.ಪಿ. ಅಳವಡಿಕೆ ಯಾಗಿದೆ. ಅದಕ್ಕೂ ಮೊದಲು ನೋಂದಣಿ ಯಾದ ಜಿಲ್ಲೆಯ 6.16 ಲಕ್ಷ ವಾಹನಗಳಿಗೆ ಹೆಚ್.ಎಸ್.ಆರ್.ಪಿ. ಅಳವಡಿಕೆಯಾಗಬೇಕಿದೆ ಎಂದು ತಿಳಿಸಿದರು.

ಹೆಚ್.ಎಸ್.ಆರ್.ಪಿ.ಗಾಗಿ ಗ್ರಾಹಕರು www.siam.in ಹಾಗೂ https://bookmyhsrp.com ವೆಬ್ ತಾಣಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ನಂತರ ಆಯ್ದ ಕೇಂದ್ರಗಳಲ್ಲಿ ಫಲಕ ಅಳವಡಿಸಿಕೊಳ್ಳಬೇಕು ಎಂದವರು ಹೇಳಿದರು.

ಈ ಹಿಂದೆ ನ.17ರವರೆಗೆ ಫಲಕಗಳ ಅಳವಡಿಕೆ ಗಡುವಿತ್ತು. ಅದನ್ನು ಈಗ ಮೂರು ತಿಂಗಳು ವಿಸ್ತರಿಸಲಾಗಿದೆ. ಈ ಅವಧಿಯಲ್ಲೂ ಫಲಕಗಳನ್ನು ಅಳವಡಿಸಿಕೊಳ್ಳದೇ ಇದ್ದರೆ 500 ರೂ.ಗಳ ದಂಡ ವಿಧಿಸಲಾಗುವುದು ಎಂದು ಎಸ್ಪಿ ಎಚ್ಚರಿಸಿದರು.

ಹೆಚ್ಚಿನ ಭದ್ರತೆಯ ಫಲಕಗಳನ್ನು ನಕಲು ಮಾಡುವುದು ಕಷ್ಟಸಾಧ್ಯ. ಅಲ್ಲದೇ, ಫಲಕಗಳಲ್ಲಿ ವಾಹನದ ವಿವರಗಳು ಪೊಲೀಸರಿಗೆ ಲಭ್ಯವಾಗುತ್ತವೆ. ಇದು ಅಪರಾಧಿಕ ಚಟುವಟಿಕೆ ತಡೆಯಲು ನೆರವಾಗುತ್ತದೆ ಎಂದವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮಥೇಶ್, ಹೆಚ್.ಎಸ್.ಆರ್.ಪಿ. ಫಲಕಗಳನ್ನು ಅಳವಡಿಸುವಾಗ ದಾಖಲೆಗಳು ಸರಿ ಇರಬೇಕು. ವಾಹನದ ಮಾಹಿತಿಯಲ್ಲಿ ಲೋಪವಿದ್ದಲ್ಲಿ ಆರ್.ಟಿ.ಒ. ಕಚೇರಿಯಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಶ್ರೀನಿವಾಸ ಮೂರ್ತಿ ಮಾತನಾಡಿ, 53 ಸರ್ಕಾರಿ ಬಸ್‌ಗಳಿಗೆ ಹೆಚ್.ಎಸ್.ಆರ್.ಪಿ. ಅಳವಡಿಕೆಯಾಗಿದೆ. ಉಳಿದ 323 ಬಸ್‌ಗಳಿಗೆ ಅಳವಡಿಕೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ಹೆಚ್.ಎಸ್.ಆರ್.ಪಿ. ಅಳವಡಿಸಿಕೊಳ್ಳಲು ಸಿದ್ಧರಾಗಿದ್ದೇವೆ. ಆದರೆ, ಕೆಲ ಕಂಪನಿಗಳ ವಾಣಿಜ್ಯ ವಾಹನಗಳಿಗೆ ಫಲಕ ಅಳವಡಿಸುವ ಘಟಕಗಳು ದಾವಣಗೆರೆಯಲ್ಲಿ ಇಲ್ಲ ಎಂದು ಖಾಸಗಿ ವಾಹನಗಳ ಸಂಘದವರು ತಿಳಿಸಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ಬಸ್, ಆಟೋ, ಖಾಸಗಿ ವಾಣಿಜ್ಯ ವಾಹನಗಳ ಸಂಘಗಳ ಪ್ರತಿನಿಧಿಗಳು, ವಾಹನಗಳ ಶೋರೂಂ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.

ವೇದಿಕೆಯ ಮೇಲೆ ಎಎಸ್‌ಪಿ ವಿಜಯಕುಮಾರ್ ಎಂ. ಸಂತೋಷ್, ದಾವಣಗೆರೆ ಸಂಚಾರ ವೃತ್ತದ ಸಿಪಿಐ ಮಂಜುನಾಥ್ ನೆಲವಾಗಲು ಮತ್ತಿತರರು ಉಪಸ್ಥಿತರಿದ್ದರು.

error: Content is protected !!