ಪ್ರತಿ ವಲಯಕ್ಕೂ ವ್ಯಾಪಿಸಿದೆ ಸಹಕಾರ ಕ್ಷೇತ್ರ

ಪ್ರತಿ ವಲಯಕ್ಕೂ ವ್ಯಾಪಿಸಿದೆ ಸಹಕಾರ ಕ್ಷೇತ್ರ

70ನೇ ಸಹಕಾರ ಸಪ್ತಾಹವನ್ನು ಉದ್ಘಾಟನೆ ನೆರವೇರಿಸಿದ ಜೆ.ಆರ್. ಷಣ್ಮುಖಪ್ಪ

ದಾವಣಗೆರೆ, ನ.15- ಸ್ವಾತಂತ್ರ್ಯದ ನಂತರದಲ್ಲಿ ಆರ್ಥಿಕ ಚೇತನಕ್ಕಾಗಿ ಕೃಷಿ ಕ್ಷೇತ್ರದ ಉತ್ತೇಜನಕ್ಕಾಗಿ ಆರಂಭಿಸಲಾದ ಸಹಕಾರ ಕ್ಷೇತ್ರ ಪಡಿತರ ವ್ಯವಸ್ಥೆ, ನ್ಯಾಯಬೆಲೆ ಅಂಗಡಿ, ಬೆಂಬಲ ಬೆಲೆ, ಸಕ್ಕರೆ ಕಾರ್ಖಾನೆ, ಜವಳಿ, ರೇಷ್ಮೆ ಉದ್ಯಮ, ಅಡಿಕೆ ಸೇರಿದಂತೆ ಪ್ರತಿ ವಲಯದಲ್ಲೂ ಸಹಕಾರ ರಂಗವು ವ್ಯಾಪಿಸಿದ್ದು, ಆರೋಗ್ಯ ಕ್ಷೇತ್ರಕ್ಕೂ ಇದು ಕಾಲಿಟ್ಟಿರುವುದು ಉತ್ತಮ ಬೆಳವಣಿಗೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ ತಿಳಿಸಿದರು.

ಮಂಗಳವಾರ ನಗರದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 70ನೇ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಯೊಂದಿಗೆ ಸಹಕಾರ ಚಳವಳಿ ಬೆಳವಣಿಗೆ ಕಂಡಿತು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಸಹಕಾರ ರಂಗ ತಲುಪಿದೆ ಎಂದರು.

ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪ ನಿರ್ದೇಶಕ ಕೆ.ಮಹೇಶ್ವರಪ್ಪ ಮಾತನಾಡಿ, ಜಿಲ್ಲೆಯಲ್ಲಿ 1456 ಸಹಕಾರ ಸಂಘಗಳು ನೋಂದಣಿಯಾಗಿದ್ದು, 1108 ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. 379 ಹಾಲು ಉತ್ಪಾದಕರ ಸಹಕಾರ ಸಂಘಗಳು, 180 ಕೃಷಿ ಪತ್ತಿನ
ಸಹಕಾರ ಸಂಘ, 78 ಕೃಷಿಯೇತರ ಪತ್ತಿನ ಸಹಕಾರ ಸಂಘಗಳು, 471 ವಿವಿಧ ರೀತಿಯ ಸಹಕಾರ ಸಂಘಗಳಿವೆ. ಚನ್ನಗಿರಿ ತುಮ್ಕೋಸ್ ಸಂಸ್ಥೆ 800 ಕೋಟಿ ವಹಿವಾಟು ನಡೆಸುತ್ತಿದೆ. ಜಿಲ್ಲೆಯ 180ಕ್ಕೂ ಹೆಚ್ಚು ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಶೀಘ್ರವೇ ಗಣಕೀಕರಣಗೊಳಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, ಎಲ್ಲರೂ ಒಬ್ಬನಿಗಾಗಿ, ಒಬ್ಬನು ಎಲ್ಲರಿಗಾಗಿ ಎಂಬ ಸಹಕಾರ ತತ್ವದಡಿ ಸಹಕಾರ ಸಂಘ ಜನ್ಮ ತಾಳಿವೆ. ಸಂಘಗಳು ತತ್ವಮೌಲ್ಯ ಮರೆತರೆ ವಿನಾಶದ ಅಂಚಿಗೆ ಬಂದು ನಿಲ್ಲುತ್ತವೆ. ದೇಶದಲ್ಲಿ ಬಹುತೇಕರು ಕೃಷಿಕರಾಗಿದ್ದು, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅಂತಹವರಿಗೆ ಸಹಕಾರ ಕ್ಷೇತ್ರದ ಮೂಲಕ ನೆರವು ನೀಡುವ ಮೂಲಕ ಸಬಲರನ್ನಾಗಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಜಿ.ಶ್ರೀನಿವಾಸಮೂರ್ತಿ, ಜನತಾ ಬಜಾರ್ ಅಧ್ಯಕ್ಷ ಜಿ.ಡಿ.ಗುರುಸ್ವಾಮಿ, ಶಿವ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಐಗೂರು ಸಿ.ಚಂದ್ರಶೇಖರ್, ಸಿಟಿ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಎನ್.ಎಂ. ನಿರಂಜನಮೂರ್ತಿ, ಒಕ್ಕೂಟದ ಉಪಾಧ್ಯಕ್ಷ ಟಿ.ರಾಜಣ್ಣ, ಸಿಇಓ ಮಂಗಳಗೌಡ ದಾನಪ್ಪಗೌಡ, ಶಿಮುಲ್ ನಿರ್ದೇಶಕರಾದ ಕೆ.ಎನ್.ಸೋಮಶೇಖರಪ್ಪ, ಎಸ್.ಬಿ.ಶಿವಕುಮಾರ, ಒಕ್ಕೂಟದ ನಿರ್ದೇಶಕರಾದ ಡಿ.ಎಂ.ಮುರುಗೇಂದ್ರಯ್ಯ, ಎನ್.ಕುಮಾರ, ಕೆ.ಜಿ.ಸುರೇಶ, ಎಸ್.ಜಿ.ಪರಮೇಶ್ವರಪ್ಪ, ಡಿ.ಶಿವಗಂಗಮ್ಮ, ಅನ್ನಪೂರ್ಣ, ಎಂ.ವಿರಾಜ್, ಎನ್.ಎಂ.ಹಾಲಸ್ವಾಮಿ, ಎ.ಎಂ.ಮಂಜುನಾಥ, ಸಿ.ವೆಂಕಟೇಶ ನಾಯ್ಕ, ವಿ.ಪಿ.ಮಹಮ್ಮದ್ ಷಫೀವುಲ್ಲಾ, ಎಚ್.ತಿಪ್ಪೇಸ್ವಾಮಿ, ಸಹಕಾರ ಸಂಘಗಳ ಉಪ ನಿಬಂಧಕರಾದ ಎಸ್.ಮಂಜುಳಾ ಹಾಗು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಸಹಕಾರ ಅಭಿವೃದ್ಧಿ ಅಧಿಕಾರಿ ಜಿ.ಎಸ್.ಸುರೇಂದ್ರ ಉಪನ್ಯಾಸ ನೀಡಿದರು. ಸಹಕಾರ ಶಿಕ್ಷಕ ಕೆ.ಎಚ್.ಸಂತೋಷಕುಮಾರ್ ಕಾರ್ಯಕ್ರಮ ನಡೆಸಿಕೊಟ್ಟರು.

error: Content is protected !!