ಹೈಸ್ಕೂಲ್ ಮೈದಾನದಲ್ಲಿ ಗರಿಗೆದರಿದ ಪಟಾಕಿ ವ್ಯಾಪಾರ

ಹೈಸ್ಕೂಲ್ ಮೈದಾನದಲ್ಲಿ ಗರಿಗೆದರಿದ ಪಟಾಕಿ ವ್ಯಾಪಾರ

ದಾವಣಗೆರೆ, ನ.12- ಪಟಾಕಿ ಮಳಿಗೆಗಳ ನಿರ್ಮಾಣಕ್ಕೆ ಜಾಗ ನೀಡುವ ಗೊಂದಲಕ್ಕೆ ತೆರೆ ಎಳೆಯಲಾಗಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಾಗಿದೆ.

57 ಮಳಿಗೆಳಲ್ಲಿ ಪಟಾಕಿ ವ್ಯಾಪಾರ ಈಗಾಗಲೇ ಆರಂಭವಾಗಿದ್ದು, ಭಾನುವಾರ ವ್ಯಾಪಾರಕ್ಕೆ ಉತ್ತಮ ಪ್ರತಿಕ್ರಿಯೆವ್ಯಕ್ತವಾಗಿದೆ.

ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ವಿರುವ ಹಿನ್ನೆಲೆಯಲ್ಲಿ ಪಟಾಕಿ ದರ ದುಪ್ಪಟ್ಟಾಗಿದೆ. ಮಧ್ಯಮ ವರ್ಗದವರಿಗೆ ಕೈ ಸುಡುತ್ತಿವೆ ಪಟಾಕಿಗಳು. ಆದರೆ ಮಕ್ಕಳ ಒತ್ತಾಯಕ್ಕೆ ಮಣಿದು ಅನಿವಾರ್ಯತೆಯಿಂದ ಜನತೆ ಪಟಾಕಿ ಖರೀದಿಸಲಾರಂಭಿಸಿದ್ದಾರೆ. ದರ ಕೇಳಿ ಚೌಕಾಸಿ ನಡೆಸಿ ಲೆಕ್ಕಾಚಾರದಲ್ಲಿ ಪಟಾಕಿ ಖರೀದಿಸುವವರು ಒಂದು ಕಡೆಯಾದರೆ, ತಮಗೆ ಬೇಕಾದ ಬಂಡಲ್‌ಗಳನ್ನು ಬಕೆಟ್ ಅಥವಾ ಬುಟ್ಟಿಯಲ್ಲಿ ಹಾಕಿಕೊಂಡು ಸಾವಿರಾರು ರೂ.ಗಳನ್ನು ಕೊಟ್ಟು ಖುಷಿಯಿಂದಲೇ ಕೊಂಡುಕೊಳ್ಳುವವರು ಮತ್ತೊಂದು ಕಡೆ.

ಈ ಬಾರಿ ಮಾರಾಟ ಮಳಿಗೆ ನಿರ್ಮಾಣಕ್ಕೆ ಬಿಗಿ ನಿಯಮಗಳನ್ನು ರೂಪಿಸಿದ್ದು, ಮಾರಾಟಕ್ಕಾಗಿ ಬಂದ 109 ಅರ್ಜಿಗಳ ಪೈಕಿ 57 ಜನರಿಗೆ ಮಾತ್ರ ಅನುಮತಿ ನೀಡಲಾಗಿದೆ.

ಶನಿವಾರ ಮಧ್ಯಾಹ್ನದಿಂದ ವ್ಯಾಪಾರ ಆರಂಭವಾಗಿದೆ. ಇನ್ನಷ್ಟೇ ಜನರು ಇತ್ತ ಆಗಮಿಸುತ್ತಿದ್ದಾರೆ. ಲೈಸನ್ಸ್ ಕೊಡುವುದು ತಡವಾಗಿದ್ದುದು ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ನಾಲ್ಕು ದಿನಗಳಲ್ಲಿ ಸುಮಾರು 1.50 ಕೋಟಿ ರೂ. ಮಾತ್ರ ವಹಿವಾಟು ನಿರೀಕ್ಷಿಸಲಾಗಲಿದೆ ಎಂದು ಪಟಾಕಿ ವರ್ತಕರ ಸಂಘದ ನಗರ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್ ಹೇಳಿದ್ದಾರೆ.

ಪಟಾಕಿ ಸಂಖ್ಯೆಗೆ ತಕ್ಕಂತೆ 180 ರೂ.ಗಳಿಂದ 2000 ರೂ.ಗಳವರೆಗೆ ಪಟಾಕಿ ಬಾಕ್ಸ್‌ಗಳಿವೆ. ಬಿಡಿ ಪಟಾಕಿಗಳನ್ನು ಕೊಡುತ್ತೇವೆ. ಸರ್ಕಾರದ ಆದೇಶದಂತೆ ಹಸಿರು ಪಟಾಕಿಗಳನ್ನೇ ಮಾರಾಟ ಮಾಡಲಾಗುತ್ತಿದೆ ಎಂದವರು ಹೇಳಿದರು.

error: Content is protected !!