ನರಕ ಚತುರ್ದಶಿ ಸಂಭ್ರಮ, ಪಾಡ್ಯಕ್ಕೆ ಕಾತರ

ನರಕ ಚತುರ್ದಶಿ ಸಂಭ್ರಮ, ಪಾಡ್ಯಕ್ಕೆ ಕಾತರ

ದಾವಣಗೆರೆ, ನ.12- ಮನೆಗಳ ಮುಂದೆ ಬಣ್ಣ ಬಣ್ಣದ ಆಕಾಶ ಬುಟ್ಟಿಗಳು, ಅಂಗಡಿ ಮುಂಗಟ್ಟು, ಕಚೇರಿಗಳಲ್ಲಿ ಲಕ್ಷ್ಮೀ ಪೂಜೆಯ ಸಂಭ್ರಮ. ಆಕರ್ಷಕ ರಂಗೋಲಿ, ವಿದ್ಯುತ್ ದೀಪಗಳ ಅಲಂಕಾರ. ಸ್ನೇಹಿತರು-ಸಂಬಂಧಿಗಳಿಗೆ ಆತಿಥ್ಯ. ಪಟಾಕಿ ಸಿಡಿಸಿ ಸಂಭ್ರಮ. ಇದು ಭಾನುವಾರದ ವಿಶೇಷ.

ಭಾನುವಾರವೇ ಅಮಾವಾಸ್ಯೆ ಆಗಮಿಸಿದ ಹಿನ್ನೆಲೆಯಲ್ಲಿ ಸಂಜೆ ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ ಸಂಭ್ರಮದಿಂದ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ಪಟಾಕಿ ಸದ್ದು ಸಂಭ್ರಮಕ್ಕೆ ಸಾಕ್ಷಿಯಾಯಿತು. ಕೆಲವರು ಇಂದು ಸೋಮವಾರವೂ ನರಕಚತುರ್ದಶಿ ಆಚರಿಸಲಿದ್ದಾರೆ.

ಅಂದಹಾಗೆ ದೀಪಾವಳಿ ಅಮಾವಾಸ್ಯೆ ಯಂದು ಮಾಡುವ ಧನಲಕ್ಷ್ಮಿ ಪೂಜೆಗೆ ನಮ್ಮ ಶಾಸ್ತ್ರಗಳಲ್ಲಿ ವಿಶೇಷ ಮಹತ್ವ ಇದೆ. ಲಕ್ಷ್ಮಿದೇವಿ ಸಂಪತ್ತಿನ ಅಧಿದೇವತೆ ಮಾತ್ರವಲ್ಲ. ಜೀವನದಲ್ಲಿ ಸುಖ ಸಮೃದ್ಧಿಗೆ ಕಾರಣವಾಗುವ ಎಲ್ಲವನ್ನೂ ಅವಳು ಕೊಡುತ್ತಾಳೆ. ಅಮಾವಾಸ್ಯೆಯ ದಿನ ಲಕ್ಷ್ಮಿ ಪೂಜೆಯಿಂದ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ಖರೀದಿ ಭರಾಟೆ ಜೋರು: ಇನ್ನು ಮಂಗಳ ವಾರ ಬಲಿಪಾಡ್ಯಮಿ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಜನತೆ ಮಾರುಕಟ್ಟೆಗೆ ದಾಂಗುಡಿ ಇಟ್ಟಿದ್ದರು. ಇತ್ತ ಗ್ರಾಮೀಣ ಜನತೆ ಹಬ್ಬಕ್ಕೆ ಬೇಕಾದ ಕಾಚಿ ಕಡ್ಡಿ, ಬಾಳೆ ದಿಂಡು, ಮಾವಿನ ಎಲೆ, ಸಗಣಿ ಉತ್ರಾಣಿ ಕಡ್ಡಿ ಮೊದಲಾ ದವುಗಳನ್ನು ಶನಿವಾರವೇ ತಂದು ಮಾರಾಟ ಕ್ಕಿಟ್ಟಿದ್ದರು. ಆದರೆ ಬಾಳೆಕಂಬ, ಹಣ್ಣು, ಹೂಗ ಳಿಗೆ ಮಾತ್ರ ಭಾನುವಾರ ಬೇಡಿಕೆ ಹೆಚ್ಚಾಗಿತ್ತು.

ಪಿ.ಬಿ. ರಸ್ತೆ ರಾಜನಹಳ್ಳಿ ಹನುಮಂತಪ್ಪ ಛತ್ರದ ಮುಂಭಾಗ ಹಾಗೂ ಜಯದೇವ ವೃತ್ತದ ರಸ್ತೆಯಲ್ಲಿ ಹಬ್ಬದ ವಸ್ತುಗಳಿಗೆ ಜನ ಮುಗಿ ಬಿದ್ದಿದ್ದರು. ಇದರಿಂದ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಉಳಿದಂತೆ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲೂ ವಹಿವಾಟು ನಡೆಯಿತು. ಆಹಾರ ಧಾನ್ಯಗಳ ಬೆಲೆ ಏರಿಕೆ ಜನತೆಯಲ್ಲಿ ಆತಂಕ ತಂದಿತ್ತು. ಆದರೆ ಹಣ್ಣು, ಹೂವಿನ ಬೆಲೆ ಅಷ್ಟಾಗಿ ಏರಿಕೆಯಾಗಿರಲಿಲ್ಲ. 

ನರಕ ಚತುರ್ದಶಿ ಹಿನ್ನೆಲೆ : ಪುರಾಣಗಳ ಪ್ರಕಾರ, ಪ್ರಾಚೀನ ಕಾಲದಲ್ಲಿ, ಪ್ರಾಗ್ಜ್ಯೋತಿಷಪುರದ ರಾಕ್ಷಸರಾಜ ನರಕಾಸುರನು ತನ್ನ ಶಕ್ತಿಗಳಿಂದ ದೇವತೆಗಳು ಮತ್ತು ಋಷಿಗಳೊಂದಿಗೆ ಯುದ್ಧ ಮಾಡಿ, 16 ಸಾವಿರ ಗೋಪಿಕೆಯರನ್ನು ಒತ್ತೆಯಾಗಿ ತನ್ನೊಂದಿಗೆ ಕರೆದುಕೊಂಡು ಹೋಗಿರುತ್ತಾನೆ. ಇದರಿಂದಾಗಿ ನರಕಾಸುರನು ಮಹಿಳೆಯ ಕೈಯಲ್ಲಿ ಸಾಯುವ ಶಾಪ ಪಡೆದನು. ಆದ್ದರಿಂದ ಭಗವಾನ್ ಶ್ರೀ ಕೃಷ್ಣನು ತನ್ನ ಹೆಂಡತಿ ಸತ್ಯಭಾಮೆಯ ಸಹಾಯದಿಂದ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ನರಕಾಸುರನನ್ನು ಕೊಂದು 16 ಸಾವಿರ ಗೋಪಿಕೆಯರನ್ನು ಸೆರೆಯಿಂದ ರಕ್ಷಿಸಿದನು. ಈ ಕಾರಣಕ್ಕಾಗಿ ನರಕ ಚತುರ್ದಶಿಯನ್ನು ನರಕಾಸುರನ ವಿರುದ್ಧ ಶ್ರೀಕೃಷ್ಣನ ವಿಜಯದ ದಿನವೆಂದು ಆಚರಿಸಲಾಗುತ್ತದೆ ಎಂಬ ಪ್ರತೀತಿ ಇದೆ.

error: Content is protected !!