ಇಂದಿನಿಂದ ನಾಲ್ಕು ದಿನ ಫಲಪುಷ್ಪ ಪ್ರದರ್ಶನ

ಇಂದಿನಿಂದ ನಾಲ್ಕು ದಿನ ಫಲಪುಷ್ಪ ಪ್ರದರ್ಶನ

ಗಾಜಿನ ಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಕಾರಂಜಿ

ದಾವಣಗೆರೆ, ನ. 12 – ನಗರದ ಗಾಜಿನ ಮನೆಯಲ್ಲಿ ನಾಳೆ ಸೋಮವಾರದಿಂದ ನ.16ರ ಗುರುವಾರದವರೆಗೆ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ.ಸಿ. ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಸಂಜೆ 5 ಗಂಟೆಗೆ ಪ್ರದರ್ಶನ ಉದ್ಘಾಟನೆಯಾಗಲಿದೆ. ನಂತರ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ಪ್ರದರ್ಶನ ಇರಲಿದೆ. ವಯಸ್ಕರಿಗೆ 30 ರೂ. ಹಾಗೂ ಮಕ್ಕಳಿಗೆ 10 ರೂ. ಪ್ರವೇಶ ಶುಲ್ಕವಿದೆ ಎಂದು ಹೇಳಿದರು.

ಚಂದ್ರಯಾನ – 3 ರಾಕೆಟ್, ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ಗಳ ಮಾದರಿ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದೆ. ಇದು 25 ಅಡಿ ಎತ್ತರ ಹಾಗೂ 11 ಅಡಿ ಅಗಲವಾಗಿದೆ ಎಂದು ಹೇಳಿದರು.

ಈ ಕಲಾಕೃತಿಗೆ 2 ಲಕ್ಷ ಸೇವಂತಿಗೆ, 50 ಸಾವಿರ ಕೆಂಪು ಗುಲಾಬಿ ಹಾಗೂ 20 ಸಾವಿರ ಆರ್ಕಿಡ್ಸ್ ಮತ್ತಿತರೆ ಹೂವುಗಳನ್ನು ಬಳಸಲಾಗಿದೆ ಎಂದು ತಿಳಿಸಿದರು. ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಭೂಪಟವನ್ನು ಹೂವುಗಳಿಂದ ಅಲಂಕರಿಸಲಾಗುವುದು ಎಂದವರು ಹೇಳಿದರು.

ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಿಂದ ರಾಜ್ಯೋತ್ಸವ ವಿಷಯ ಕೇಂದ್ರೀಕರಿಸಿ ವಿವಿಧ ಚಿತ್ರಕಲೆ, ಶಿಲ್ಪಕಲೆ ಹಾಗೂ ಕೆತ್ತನೆಗಳನ್ನು ಪ್ರದರ್ಶಿಸಲಾಗುವುದು ಎಂದೂ ಅವರು ಹೇಳಿದರು.

16 ಅಡಿ ಎತ್ತರ ಹಾಗೂ 10 ಅಡಿ ಅಗಲದ ಶಿವನಂದಿಯನ್ನು ರೂಪಿಸಲಾಗಿದೆ. ಹೂವುಗಳಿಂದ 7 ಅಡಿ ಎತ್ತರದ ಭಾರತ ಭೂಪಟ ವಿನ್ಯಾಸ, 8 ಅಡಿ ಎತ್ತರದ ಐ.ಸಿ.ಸಿ. ವಿಶ್ವಕಪ್ ಹೂವಿನ ಕಲಾಕೃತಿ ಹಾಗೂ 10 ಅಡಿ ಎತ್ತರದ ಕಾಫಿ ಕಪ್‌ಗಳನ್ನು ರೂಪಿಸಲಾಗಿದೆ. ಈ ಬಾರಿ ಕಲಾಕೃತಿಗಳನ್ನು ರೂಪಿಸಲು ಪ್ರಾಯೋಜಕರು ನೆರವಾಗಿದ್ದಾರೆ. ಇಡೀ ಪ್ರದರ್ಶನಕ್ಕೆ 10 ಲಕ್ಷ ರೂ.ಗಳ ವೆಚ್ಚವಾಗಲಿದೆ ಎಂದು ರಾಘವೇಂದ್ರ ತಿಳಿಸಿದರು.

ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ 46 ವಿಧದ ಹದಿನೈದು ಸಾವಿರಕ್ಕೂ ಹೆಚ್ಚು ವಿವಿಧ ಅಲಂಕಾರಿಕ ಗಿಡಗಳು ಹಾಗೂ ಹೂವಿನ ಗಿಡಗಳ ಕಲಾತ್ಮಕ ವಿನ್ಯಾಸಗಳ ಜೋಡಣೆ ಮಾಡಲಾಗಿದೆ.

ಮಕ್ಕಳಿಗೆ ವಿವಿಧ ಆಟಗಳು ಹಾಗೂ ವಿಶೇಷ ತಿಂಡಿ ತಿನಿಸುಗಳ ಮಳಿಗೆಗಳಿಗೂ ಅವಕಾಶ ಮಾಡಿಕೊಡಲಾಗಿದೆ. ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ. ಸಂಜೆ ಸಂಗೀತ ಕಾರಂಜಿಯ ಪ್ರದರ್ಶನ ಆಯೋಜಿಸಲಾಗುವುದು ಎಂದವರು ತಿಳಿಸಿದರು.

ಸೋಮವಾರದಂದು ಡೊಳ್ಳುಕುಣಿತ, ನಾದಸ್ವರ ಹಾಗೂ ಸುಗಮ ಸಂಗೀತ ಆಯೋಜಿಸಲಾಗಿದೆ. ಮಂಗಳವಾರ ಅನುಶ್ರೀ ಸಂಗೀತ ಶಾಲೆಯ ಮಕ್ಕಳ ಗಾಯನಕ್ಕೆ ಕಲಾವಿದರು ಸ್ಥಳದಲ್ಲೇ ವರ್ಣರಂಜಿತ ಚಿತ್ರ ರಚನೆ ಮಾಡುವ ಕಾರ್ಯಕ್ರಮವಿದೆ ಎಂದು ರಾಘವೇಂದ್ರ ತಿಳಿಸಿದರು.

ಗಾಜಿನ ಮನೆಗೆ ಈಗ ಪ್ರತಿದಿನ 500 ಹಾಗೂ ವಾರಾಂತ್ಯದಲ್ಲಿ ಸಾವಿರ ಜನ ಭೇಟಿ ನೀಡುತ್ತಿದ್ದಾರೆ. ಗಾಜಿನ ಮನೆ ಆವರಣದಲ್ಲಿ ಖಾಲಿ ಇರುವ 1 ಎಕರೆ ಜಾಗವನ್ನು ಅಭಿವೃದ್ಧಿ ಪಡಿಸಿ, ಇನ್ನಷ್ಟು ಆಕರ್ಷಣೀಯಗೊಳಿಸುವ ಉದ್ದೇಶವಿದೆ ಎಂದವರು ಹೇಳಿದರು.

error: Content is protected !!