ಎಲ್ಲರ ಒಗ್ಗಟ್ಟಿನಿಂದ ಲೋಕಸಭಾ ಗೆಲುವು ಸಾಧ್ಯ

ಎಲ್ಲರ ಒಗ್ಗಟ್ಟಿನಿಂದ ಲೋಕಸಭಾ ಗೆಲುವು ಸಾಧ್ಯ

ಅಭ್ಯರ್ಥಿ ಆಯ್ಕೆ ಸಮಾಲೋಚನಾ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ

ದಾವಣಗೆರೆ, ನ. 10 – ದಾವಣಗೆರೆ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ  ಕಾಂಗ್ರೆಸ್ ಗೆದ್ದಿದೆ. ಎಲ್ಲರೂ ಒಂದಾಗಿ ಕೆಲಸ ಮಾಡಿದರೆ ಲೋಕಸಭಾ ಚುನಾವಣೆಯಲ್ಲೂ ಗೆಲ್ಲಲು ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗಾಗಿ ನಗರದ ಬಾಪೂಜಿ ಎಂ.ಬಿ.ಎ. ಕಾಲೇಜಿನಲ್ಲಿ ನಡೆಸಲಾದ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಈ ಹಿಂದೆ ದಾವಣಗೆರೆ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ ಆಗಿತ್ತು. ಆದರೆ, ಕಳೆದ 4-5 ಅವಧಿಯಲ್ಲಿ ಬಿಜೆಪಿ ಗೆಲ್ಲುತ್ತಿದೆ. ಈ  ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಡಬೇಕು ಎಂದವರು ಕಿವಿಮಾತು ಹೇಳಿದರು.

ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಐದು ಗ್ಯಾರಂಟಿಗಳ ಭರವಸೆ ನೀಡಿತ್ತು. ನಾಲ್ಕನ್ನು ಈಗಾಗಲೇ ಜಾರಿಗೆ ತರಲಾಗಿದೆ. ಆದರೆ, ಬಿಜೆಪಿ 2014ರಲ್ಲಿ ನೀಡಿದ ಅಚ್ಛೇ ದಿನ್, ಕಪ್ಪು ಹಣ ವಾಪಸ್, ರೈತರ ಆದಾಯ ದ್ವಿಗುಣ, 2 ಕೋಟಿ ಜನರಿಗೆ ಉದ್ಯೋಗ, ಎಲ್ಲರಿಗೂ ವಸತಿ, ಭ್ರಷ್ಟಾಚಾರ ನಿಯಂತ್ರಣ, ಬೆಲೆ ನಿಯಂತ್ರಣ ಸೇರಿದಂತೆ, ಯಾವುದೇ ಭರವಸೆಗಳನ್ನು ಜಾರಿಗೆ ತಂದಿಲ್ಲ ಎಂದು ಟೀಕಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನುದಾನ ಕೊಡದೇ ಹಣದ ಅಡಚಣೆ ಮಾಡುತ್ತಿದೆ. ಒಂದೆಡೆ ಕೇಂದ್ರ ಅನುದಾನ ಕೊಡುತ್ತಿಲ್ಲ, ಮತ್ತೊಂದೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯ ದಿವಾಳಿ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಸಾಕಷ್ಟು ಸಂಪನ್ಮೂಲ ಇದೆ. ಅವರು ದಿವಾಳಿ ಮಾಡಲು ಪ್ರಯತ್ನ ನಡೆಸಿದರೂ, ರಾಜ್ಯ ದಿವಾಳಿ ಆಗದು ಎಂದರು.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ. ಅದೇ ಹುಮ್ಮಸ್ಸಿನಲ್ಲಿ ಲೋಕಸಭಾ ಚುನಾವಣೆಯಲ್ಲೂ ಯಾರೇ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಗೆಲ್ಲಿಸುತ್ತೇವೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಜಗಳೂರು ಶಾಸಕ ದೇವೇಂದ್ರಪ್ಪ ಮಾತನಾಡಿ, ಶೇ.40 ಕಮೀಷನ್ ಪಡೆದ ಬಿಜೆಪಿಗೆ ರಾಜ್ಯದಲ್ಲಿ ಮಂಗಳಾರತಿ ಆಗಿದೆ. ಐದು ಗ್ಯಾರಂಟಿಗಳ ಕಾರಣದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು.

ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿರುವುದನ್ನು ಬಿಜೆಪಿ ಚುನಾವಣೆಗೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ರಾಮ ಮಂದಿರ ಕೇವಲ ಬಿಜೆಪಿಯವರಿಗೆ ಸೇರಿದ್ದಲ್ಲ. ಇಡೀ ದೇಶ ನಿರ್ಮಿಸುವ ಮಂದಿರವಾಗಿದೆ. ಮಂದಿರ ಪ್ರತಿ ಭಾರತೀಯ ಪ್ರಜೆಗೆ ಸಂಬಂಧಿಸಿದ್ದು ಎಂದೂ ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆದ ರೀತಿಯಲ್ಲೇ ಕೇಂದ್ರದಲ್ಲೂ ಭ್ರಷ್ಟ ಮೋದಿ ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಕರೆ ನೀಡಿದರು.

ವೇದಿಕೆಯ ಮೇಲೆ ಕಾಂಗ್ರೆಸ್ ಮುಖಂಡರಾದ ಎಸ್. ರಾಮಪ್ಪ, ಮೋಹನ್ ಕೊಂಡಜ್ಜಿ, ಅಯೂಬ್ ಪೈಲ್ವಾನ್, ದಿನೇಶ್ ಕೆ. ಶೆಟ್ಟಿ, ಮುದೇಗೌಡ್ರ ಗಿರೀಶ್, ಎಸ್. ಮಲ್ಲಿಕಾರ್ಜುನ್, ನಂದಿಗಾವಿ ಶ್ರೀನಿವಾಸ್, ವೀರಭದ್ರಪ್ಪ, ಪಾಲಯ್ಯ, ರೇವಣಸಿದ್ದಪ್ಪ, ಕಲ್ಲೇಶ್‌ರಾಜ್‌ ಪಟೇಲ್, ಮಂಜುನಾಥ್, ರಹೀಂ ಸಾಬ್, ನಿಂಗಪ್ಪ, ನಿಖಿಲ್ ಕೊಂಡಜ್ಜಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!