ಹೆದ್ದಾರಿಯಲ್ಲಿ ಶ್ರೀಗಳ ಇಷ್ಟಲಿಂಗ ಪೂಜೆ

ಹೆದ್ದಾರಿಯಲ್ಲಿ ಶ್ರೀಗಳ ಇಷ್ಟಲಿಂಗ ಪೂಜೆ

ದಾವಣಗೆರೆ, ನ.10- ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರ 2ಎ ಮೀಸಲಾತಿ ಕಲ್ಪಿಸಬೇಕು ಹಾಗೂ ಲಿಂಗಾಯತ ಉಪ ಸಮಾಜಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಶಿಫಾ ರಸ್ಸು ಮಾಡುವಂತೆ ಆಗ್ರಹಿಸಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ವಿನೂತನ ಪ್ರತಿಭಟನೆ ನಡೆಸಿದರು.

ಪಂಚಮಸಾಲಿ ಸಮಾಜದ ಸಾವಿ ರಾರು ಭಕ್ತರೊಂದಿಗೆ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದ ಸ್ವಾಮೀಜಿ, ಶೀಘ್ರವೇ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಕಳೆದ ಮೂರು ವರ್ಷಗಳಿಂದ ಮೀಸಲಾತಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ನಮ್ಮ ಹೋರಾಟದ ಫಲವಾಗಿ ಕಳೆದ ವರ್ಷ ಸರ್ಕಾರ 2ಡಿ ಮೀಸಲಾತಿ ಘೋಷಿಸಿತ್ತು. ಆದರೆ ಅದೂ ಸಹ ಸರ್ವೋಚ್ಛ ನ್ಯಾಯಾಲಯದ ಅಂಗಳದಲ್ಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಮ್ಮ ಸಮಾಜಕ್ಕೆ 2 ಎ ಮೀಸಲಾತಿ ಕಲ್ಪಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳು ಬೆಳಗಾವಿ ಅಧಿವೇಶನ ಆರಂಭವಾಗುವ ಮುಂಚೆಯೇ ಸಮಾಜಕ್ಕೆ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದರೆ ಡಿಸೆಂಬರ್ 4ರಂದು ಬೆಳಗಾವಿಯಲ್ಲಿ ನಡೆಯಲಿರುವ ಸುವರ್ಣ ವಿಧಾನಸೌಧದ ಅಧಿವೇಶನದ ಒಳಗಡೆಯೇ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಗಳೂ ಆಗಿರುವ ಮಾಜಿ ಶಾಸಕ  ಹೆಚ್.ಎಸ್. ಶಿವಶಂಕರ್ ಮಾತನಾಡಿ, ಕಳೆದ ಹತ್ತು ದಿನಗಳಿಂದ ಶ್ರೀಗಳೊಂದಿಗೆ ಜಿಲ್ಲಾದ್ಯಂತ ಸಂಚರಿಸಿ, ಹೋರಾಟಕ್ಕೆ ಸಜ್ಜುಗೊಂಡಿದ್ದೇವೆ ಎಂದರು.

ಈ ಹಿಂದೆ ನಡೆದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಉಸ್ತುವಾರಿ ಸಚಿವರೇ ಆಗಮಿಸಿ, ಹಕ್ಕೊತ್ತಾಯ ಪತ್ರ ಸ್ವೀಕರಿಸಿದ್ದಾರೆ. ದಾವಣಗೆರೆ ಜಿಲ್ಲಾ ಸಚಿವರು ಬ್ಯುಸಿಯಾಗಿರುವ ಕಾರಣದಿಂದ ಆಗಮಿಸಿಲ್ಲ. ಅರಣ್ಯ ಸಚಿವರು, ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅವರೇ ಆಗಮಿಸಿ ಹಕ್ಕುಪತ್ರ ಸ್ವೀಕರಿಸಿದ್ದಾರೆ. ಅವರ ಆಗಮನದಿಂದಾಗಿ ನಮ್ಮ ಹೋರಾಟದ ಶಕ್ಕಿ ಇಮ್ಮಡಿಯಾಗಿದೆ ಎಂದರು.

ಹಿಂದಿನ ಸರ್ಕಾರ ಸಮಾಜಕ್ಕೆ 2ಡಿ ಕೊಟ್ಟು ನಮ್ಮ ಹೋರಾಟಕ್ಕೆ ಕೊಡಲಿ ಪೆಟ್ಟು ನೀಡಿತ್ತು ಎಂದ ಶಿವಶಂಕರ್, ಸಚಿವ ಈಶ್ವರ ಖಂಡ್ರೆ ಅವರು ಆದಷ್ಟು ಶೀಘ್ರ ಮಂತ್ರಿ ಮಂಡಲದಲ್ಲಿ ಚರ್ಚಿಸಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ಕೃಷಿ ಲಾಭದಾಯಕ ವೃತ್ತಿಯಾಗಿದ್ದರೆ, ಇಷ್ಟೊಂದು ಮೀಸಲಾತಿ ಹೋರಾಟಗಳು ನಡೆಯುತ್ತಿರಲಿಲ್ಲ. ಶಕ್ತಿಯೇ ಇಲ್ಲದವರು ಶಕ್ತಿ ಮೂಲಕ ಮೀಸಲಾತಿ ಪಡೆಯಬೇಕು ಎಂಬುದು ವಿಪರ್ಯಾಸ ಎಂದು ಹೇಳಿದರು.

ಚುನಾವಣಾ ಆಯೋಗದಂತೆ ಮೀಸಲಾತಿಗೆ ಸಂಬಂಧಿಸಿದಂತೆ ಒಂದು ಆಯೋಗ ಇರಬೇಕು. ಸರ್ಕಾರ ಕಾಲಕಾಲಕ್ಕೆ ಆರ್ಥಿಕ ಸಮೀಕ್ಷೆ ಮಾಡಿ ಯಾರನ್ನು ಸೇರಿಸಬೇಕು ಎಂಬುದನ್ನು ಸ್ವಯಂ ಪ್ರೇರಿತವಾಗಿ ನಿರ್ಧಾರ ತೆಗೆದುಕೊಳ್ಳುವಂತಾಗಬೇಕು. ಜನ ಬಲದ ಮೇಲೆ ಮೀಸಲಾತಿ ಅಲ್ಲ. ಸರ್ಕಾರದ ವಿವೇಚನೆಯಿಂದ ಮೀಸಲಾತಿ ಸಿಗುವಂತಾಗಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಆಯೋಗದ ರಚನೆಯಾಗಬೇಕು ಎಂದು ಹೇಳಿದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಜ್ಯ ಯುವ ಘಟಕದ ಅಧ್ಯಕ್ಷ ಬಿ.ಜೆ. ಅಜಯ್ ಕುಮಾರ್ ಮಾತನಾಡಿ, ಪ್ರತಿ ದಿನ ಇಪ್ಪತ್ತೈದಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ 2ಎ ಮೀಸಲಾತಿಯ ಅಗತ್ಯತೆ ಏನು ಎಂಬುದರ ಬಗ್ಗೆ ಸಮಾಜ ಬಾಂಧವರಲ್ಲಿ ಮನದಟ್ಟು ಮಾಡಿ ಇಂದು ಹೋರಾಟ ನಡೆಸಲಾಗುತ್ತಿದೆ. ತಾಯಿ ಋಣ, ಭೂಮಿ ಋಣ ಹಾಗೂ ಸಮಾಜದ ಋಣ ತೀರಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಹುಚ್ಚಪ್ಪ ಮಾಸ್ತರ್ ಮಾತನಾಡಿ, ಎಲ್ಲರನ್ನೂ ಒಗ್ಗೂಡಿಸುವ ಮಹಾನ್ ಶಕ್ತಿ ಇಷ್ಟಲಿಂಗ ಪೂಜೆಗಿದೆ. ಇದು ವಿಶ್ವಕ್ಕೇ ಮಾದರಿಯಾಗಿದೆ. ಅಂತಹ ಇಷ್ಟಲಿಂಗ ಪೂಜೆ ಮೂಲಕ ಶ್ರೀಗಳು ಸಮಾಜವನ್ನು ಸಂಘಟಿಸ ಹೊರಟಿರುವುದು ಶ್ಲ್ಯಾಘನೀಯ ಎಂದರು.

ರಟ್ಟಿಹಳ್ಳಿ ತಾಲ್ಲೂಕು ಅಧ್ಯಕ್ಷ ಪರಮೇಶ್ವರಪ್ಪ ಮಾತನಾಡಿ, ಸರ್ಕಾರ ಸಮಾಜಕ್ಕೆ 2ಎ ಮೀಸಲಾತಿ ನೀಡದೇ ಇದ್ದರೆ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಜಿಲ್ಲಾಧ್ಯಕ್ಷ ಅಶೋಕ್ ಗೋಪನಾಳ್, ಜಿಲ್ಲಾ ಯುವ ಅಧ್ಯಕ್ಷ ಮಂಜುನಾಥ ಪೈಲ್ವಾನ್, ಚಿಂದೋಡಿ ಚಂದ್ರಧರ್, ದೀಟೂರು ಚಂದ್ರಶೇಖರ್, ಅಣಜಿ ಚಂದ್ರಶೇಖರ್, ಅಭಿ ಕಾಟನ್‌ ಬಕ್ಕೇಶ್, ಓಂಕಾರಪ್ಪ, ರವಿರಾಜ್ ಸೊನ್ನದ್, ಭರತ್, ಧನಂಜಯ ನಾಗರಸನಹಳ್ಳಿ, ಲಿಂಗಪ್ಪ ಕಿರೋಜಿ, ಮಿಟ್ಲಕಟ್ಟೆ ಚಂದ್ರಪ್ಪ, ಅಬ್ಲೂರಪ್ಪ ಗಂಗನಹರಸಿ, ಬಿ. ಕಲ್ಲೇಶಪ್ಪ ದೀಟೂರು, ಕರೇಗೌಡ್ರು ಗಂಗನಹರಸಿ, ಹಾಲೇಶಪ್ಪ ದೇವರಬೆಳಕೇರಿ, ಜಿಗಳಿ ಗಂಗಾಧರ್, ಸಿರಿಗೆರೆ ಪರಮೇಶ್ವರಗೌಡ್ರು, ಮುದ್ದೇರ ಹನುಮಂತಪ್ಪ, ತಾಪಂ ಮಾಜಿ ಸದಸ್ಯ ಜಿ.ಎಸ್. ಕೊಟ್ರೇಶ್, ಬೇವಿನಹಳ್ಳಿ ಅಂಗಡಿ ಬಸೆಟ್ಟೆಪ್ಪ, ಮಲೇಬೆನ್ನೂರು ಕರಿಬಸಪ್ಪ ಹೊಸಳ್ಳಿ, ಅಂಗಡಿ ಮಲ್ಲಿಕಾರ್ಜುನ, ಅಡಕಿ ಕುಮಾರ್, ಶಂಕ್ರಪ್ಪ ಅಮರಾವತಿ, ಕುಣೆಬೆಳಕೆರೆ ಮುರುಗೇಶ್, ಮಂಜುನಾಥ್,  ದೀಟೂರು ಮಲ್ಲಿಕಾರ್ಜುನ್, ಬಿ.ಕೆ. ರುದ್ರೇಶ್, ಕೊಟ್ರೇಶ್, ಬಿ.ಎಸ್. ಕೊಟ್ರೇಶ್, ದೇವರಬೆಳಕೇರೆ ಬಸವರಾಜ್, ಕಂಚಿಕೆರೆ ಶಂಕರ್, ಗುತ್ತೂರು ಚಂದ್ರಪ್ಪ, ಮಿಟ್ಟಲಕಟ್ಟಿ ರುದ್ರೇಶ್,  ಬಸವರಾಜ್ ಬನ್ನಿಕೋಡು, ಮಹೇಶ್ , ಲೋಕೇಶ್ ಬೇವಿನಹಳ್ಳಿ, ಲತಾ ಕೊಟ್ರೇಶ್, ಉಮಾ, ರಾಗಿಣಿ, ಕವಿತಾ ಇತರರು ಪ್ರತಿಭಟನೆಯಲ್ಲಿದ್ದರು.

error: Content is protected !!