ದಾವಣಗೆರೆ, ನ. 9 – ನೀರೇ ಜೀವ, ನೀರೇ ಆಹಾರ. ಇದರಿಂದ ಯಾರೂ ವಂಚಿತರಾಗಬಾರದು ಎಂಬ ಈ ವರ್ಷದ ವಿಶ್ವ ಆಹಾರ ದಿನಾಚರಣೆಯ ಧ್ಯೇಯ ವಾಕ್ಯದೊಂದಿಗೆ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಆಹಾರ ದಿನಾಚರಣೆಯನ್ನು ಆಚರಿಸಲಾಯಿತು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥ ಡಾ. ಟಿ.ಎನ್. ದೇವರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿದಿನ ನಾವುಗಳು ಸೇವಿಸುವ ಆಹಾರದಲ್ಲಿ ಅನೇಕ ಕಲಬೆರೆಕೆಗಳು ಮತ್ತು ಪೀಡೆನಾಶಕ ಅಂಶಗಳು ಸೇರುತ್ತಿರುವುದು ಕ್ಯಾನ್ಸರ್ ಮತ್ತು ಇನ್ನಿತರೆ ರೋಗಗಳಿಗೆ ಪ್ರಮುಖ ಕಾರಣವಾಗಿದೆ. ನಾವು ಪ್ರತಿ ದಿನ ಉತ್ತಮವಾದ ಆಹಾರ ಸೇವನೆ ಮಾಡಬೇಕಾಗಿದ್ದು ಆಹಾರದಿಂದ ಆರೋಗ್ಯ, ಆರೋಗ್ಯದಿಂದ ಆದಾಯ ಎಂಬುದನ್ನು ಮನವರಿಕೆ ಮಾಡಿಕೊಳ್ಳುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಕುರಿತು ಆಹಾರದ ಉತ್ಪಾದನೆ ಹಾಗೂ ನಿರ್ವಹಣೆ ಎಂಬ ವಿಷಯ ಮಂಡನೆ ಮಾಡಿದರು. ಪ್ರತಿ ದಿನ ನಾವು ವಿಷಯುಕ್ತ ಆಹಾರ ಸೇವನೆಗೆ ಕಾರಣವಾಗುವ ಅಂಶಗಳ ಕುರಿತು ಬೆಳಕು ಚಲ್ಲಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ನಟರಾಜ್ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾ ಡುತ್ತಾ, ಮೂಲಭೂತ ಸೌಕರ್ಯಗಳನ್ನು ಬಹಳ ಜಾಗರೂಕತೆಯಿಂದ ಉಪಯೋಗ ಮಾಡುವ ಅವಶ್ಯಕತೆಯಿದ್ದು, ಅವುಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ನೀಡುವ ಮಹತ್ತರ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಕೇಂದ್ರದ ತೋಟಗಾರಿಕೆ ತಜ್ಞ ಎಂ.ಜಿ. ಬಸವನಗೌಡ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ನೀರಿನ ಪ್ರಾಮುಖ್ಯತೆ
ಮತ್ತು ಅದರ ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿ ಮಹಿಳೆ ಶ್ರೀಮತಿ ಸರೋಜ ಎನ್. ಪಾಟೀಲ್ ಸಿರಿಧಾನ್ಯಗಳ ಮೌಲ್ಯವರ್ಧನೆ ಬಗ್ಗೆ ಮತ್ತು ಎಸ್. ಮಂಜುನಾಥ ಶುದ್ಧ ಗಾಣದ ಎಣ್ಣೆಯ ಉದ್ಯಮದ ಬಗ್ಗೆ ಕುರಿತು ವಿದ್ಯಾರ್ಥಿ ಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡರು.
ಡಾ. ಕೆ.ವಿ. ಲೋಲಾಕ್ಷಿ, ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿಗಳಾದ ಡಾ. ಟಿ.ಜಿ. ಅವಿನಾಶ್ ಮಾತನಾಡಿದರು. ವಿಶ್ವ ಆಹಾರ ದಿನಾಚರಣೆಯ ಅಂಗವಾಗಿ ಆಧುನಿಕ ಮಾನವನ ಜೀವನದಲ್ಲಿ ನೀರಿನ ಮಹತ್ವ ಎಂಬ ವಿಷಯ ಕುರಿತು, ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕು. ವಾಣಿ, ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ಸಿಬ್ಬಂದಿಗಳು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರುಗಳು ಭಾಗವಹಿಸಿದ್ದರು.