ಮಲೇಬೆನ್ನೂರು, ನ.8- ದೇವರಬೆಳಕೆರೆ ಪಿಕಪ್ ಡ್ಯಾಂನಲ್ಲಿ ಜಲಸಸ್ಯರಾಶಿ ಹೆಚ್ಚಾಗುತ್ತಿದ್ದು, ಡ್ಯಾಂನ ಹೆಚ್ಚುವರಿ ನೀರು ಹೊರಹೋಗದ ಕಾರಣ, ಹಿನ್ನೀರಿನಲ್ಲಿ ನೂರಾರು ಎಕರೆ ಭತ್ತದ ಬೆಳೆ ಜಲಾವೃತ್ತಗೊಂಡಿದೆ.
ಅಲ್ಲದೇ, ಹಿನ್ನೀರಿನಲ್ಲಿ ಸಂಕ್ಲೀಪುರ-ಮುಕ್ತೇನಹಳ್ಳಿ ಸಂಪರ್ಕ ರಸ್ತೆ ಮುಳುಗಡೆಯಾಗಿದ್ದು, ವಾಹನಗಳ ಸಂಚಾರ ಬಂದ್ ಆಗಿದೆ. ಮಳೆಯಿಂದಾಗಿ ದೇವರಬೆಳಕೆರೆ ಪಿಕಪ್ ಡ್ಯಾಂಗೆ ಮೇಲ್ಭಾಗದಿಂದ ಹರಿದು ಬರುತ್ತಿರುವ ನೀರಿನಲ್ಲಿ ಜಲಸಸ್ಯರಾಶಿ ಕೂಡಾ ಬಂದು, ಡ್ಯಾಂನ ಗೇಟ್ ಬಳಿ ನಿಂತಿದೆ.
ಸ್ವಯಂ ಚಾಲಿತ ಗೇಟ್ ಮೂಲಕ ಡ್ಯಾಂನ ಹೆಚ್ಚುವರಿ ನೀರು ಹೊರಹೋಗಲು ಜಲಸಸ್ಯರಾಶಿ ಅಡ್ಡಲಾಗಿ ನಿಂತಿದೆ. ಇದರಿಂದಾಗಿ ಡ್ಯಾಂನ ನೀರಿನ ಮಟ್ಟ ಹೆಚ್ಚಾಗಿ, ಹಿನ್ನೀರಿನಲ್ಲಿ ಗುಳದಹಳ್ಳಿ, ಸಂಕ್ಲೀಪುರ, ದೇವರಬೆಳಕೆರೆ, ಬೂದಿಹಾಳ್, ಮುದಹದಡಿ ಸೇರಿದಂತೆ ಇನ್ನಿತರ ಹಳ್ಳಿಗಳ ರೈತರ ಬೆಳೆಗಳು ಮುಳುಗಡೆಯಾಗಿದ್ದು, ರೈತರು ಬೆಳೆ ಹಾನಿಯಾಗುವ ಆತಂಕದಲ್ಲಿದ್ದಾರೆ.
ಭತ್ತದ ಬೆಳೆ ಕಾಳುಕಟ್ಟುವ ಹಂತದಲ್ಲಿದ್ದು, ಈ ಸಮಯದಲ್ಲಿ ಹಿನ್ನೀರಿನಲ್ಲಿ ಬೆಳೆ ಮುಳುಗಿರುವುದರಿಂದ ಬೆಳೆ ಹಾನಿಯಾಗು ವುದು ನಿಶ್ಚಿತ ಎಂದು ರೈತರಾದ ಸಂಕ್ಲೀಪುರದ ನಾಗೇಂದ್ರಪ್ಪ, ಚಂದ್ರಶೇಖರಯ್ಯ ಸೇರಿದಂತೆ ಇನ್ನೂ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.
ಜಲಸಸ್ಯರಾಶಿ ಬಂದು ನಿಂತಿದ್ದರೂ ಅದನ್ನು ತೆರವು ಗೊಳಿಸುವ ಕೆಲಸವನ್ನು ನೀರಾವರಿ ಇಲಾಖೆಯ ಇಂಜಿನಿಯರ್‌ಗಳು ಮಾಡುತ್ತಿಲ್ಲ ಎಂದು ರೈತರು ದೂರಿದ್ದಾರೆ.
ಡ್ಯಾಂಗೆ ಅಳವಡಿಸಿರುವ ಸ್ವಯಂ ಚಾಲಿತ ಕ್ರೇಸ್ಟ್ ಗೇಟ್‌ಗಳನ್ನು ತೆಗೆದು, ಮಾನವ ಚಾಲಿತ ಗೇಟ್‌ಗಳನ್ನು ಹಾಕುವಂತೆ ಕಳೆದ 2 ವರ್ಷಗಳಿಂದಲೂ ಒತ್ತಾಯಿಸಿದ್ದೇವೆ. ಅದಕ್ಕಾಗಿ ನೀರಾವರಿ ನಿಗಮದಿಂದ ಅನುದಾನ ಬಿಡುಗಡೆಯಾಗಿದ್ದರೂ ಇನ್ನೂ ಕೆಲಸ ಆರಂಭಿಸಿಲ್ಲ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.
ನೀರು ಬಂದ್ ಮಾಡಿ : ಉತ್ತಮ ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯದಿಂದ ನಾಲೆಗೆ ಹರಿಸುತ್ತಿರುವ ನೀರನ್ನು 3-4 ದಿನ ಬಂದ್ ಮಾಡುವಂತೆ ಈ ಭಾಗದ ರೈತರು ಒತ್ತಾಯಿಸಿದ್ದಾರೆ. ಕಾಲುವೆಗಳಲ್ಲಿ ನೀರು ಬಳಕೆಯಾಗದೇ ಹಳ್ಳಗಳನ್ನು ಸೇರುತ್ತಿದೆ. ನೀರನ್ನು ವ್ಯರ್ಥ ಮಾಡುವ ಬದಲು ಈ ಉಳಿತಾಯ ಮಾಡಿ, ಮುಂದೆ ಬಳಸಿಕೊಳ್ಳಬಹುದೆಂದು ರೈತರು ತಿಳಿಸಿದ್ದಾರೆ.