ದಾವಣಗೆರೆ, ನ. 8 – ಮುಂಗಾರು ಕೊರತೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಪ್ರಮಾಣ ಕುಸಿತ ಮುಂದುವರೆದಿದೆ. ಕಳೆದ ಅಕ್ಟೋಬರ್‌ನಲ್ಲಿ ಅಂತರ್ಜಲ ಮಟ್ಟ 9.64 ಮೀಟರ್‌ಗಳ ಹಂತಕ್ಕೆ ಕುಸಿದಿದೆ. ಅದಕ್ಕೂ ಮುಂಚೆ ಸೆಪ್ಟೆಂಬರ್‌ನಲ್ಲಿ ಅಂತರ್ಜಲ ಮಟ್ಟ 8.90 ಮೀಟರ್ ಆಗಿತ್ತು.
2022ರ ಅಕ್ಟೋಬರ್‌ನಲ್ಲಿ ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟದ 2.95 ಮೀಟರ್ ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಂತ ರ್ಜಲ ಮಟ್ಟ 6.69 ಮೀಟರ್‌ಗಳಷ್ಟು ಕಡಿಮೆ ಯಾಗಿದೆ ಎಂದು ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ ಆರ್. ಬಸವರಾಜ್ ತಿಳಿಸಿ ದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ದಾವಣಗೆರೆ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ 10.10 ಮೀಟರ್‌ಗಳವರೆಗೆ ಕುಸಿದಿದೆ. ಹರಿಹರದಲ್ಲಿ 5.21 ಮೀಟರ್, ಚನ್ನಗಿರಿಯಲ್ಲಿ 8.38 ಮೀಟರ್, ಹೊನ್ನಾಳಿಯಲ್ಲಿ 3.64 ಮೀಟರ್, ನ್ಯಾಮತಿ 11.85 ಮೀಟರ್ ಹಾಗೂ ಜಗಳೂರಿನಲ್ಲಿ 18.75 ಮೀಟರ್ ಹಂತಕ್ಕೆ ಅಂತರ್ಜಲ ಕುಸಿದಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು. ಅಲ್ಲದೇ, ಅಕ್ಟೋಬರ್ – ನವೆಂಬರ್ ತಿಂಗಳವರೆಗೂ ಮಳೆ ಸುರಿದಿತ್ತು. ಹೀಗಾಗಿ ಅಂತರ್ಜಲದ ಮೇಲಿನ ಅವಲಂಬನೆ ಕಡಿಮೆಯಾಗಿತ್ತು. ಇದು ಅಂತರ್ಜಲ ಮಟ್ಟ ಹೆಚ್ಚಾಗಲು ಕಾರಣವಾಗಿತ್ತು ಎಂದವರು ಹೇಳಿದ್ದಾರೆ.
ಈ ವರ್ಷ ಆಗಸ್ಟ್ ನಂತರದಲ್ಲಿ ಮಳೆ ತೀರಾ ಕಡಿಮೆಯಾಗಿದೆ. ಇದರಿಂದಾಗಿ ಅಂತರ್ಜಲ ಬಳಕೆ ಹೆಚ್ಚಾಗಿ, ನೀರಿನ ಮಟ್ಟ ಕುಸಿದಿದೆ ಎಂದವರು ತಿಳಿಸಿದ್ದಾರೆ.
ಆದರೆ, ಜಿಲ್ಲೆಯ ಯಾವುದೇ ಭಾಗದಲ್ಲಿ ತೀವ್ರ ಮಟ್ಟಕ್ಕೆ ಅಂತರ್ಜಲ ಕುಸಿದಿರುವುದು ಕಂಡು ಬಂದಿಲ್ಲ. ಬೇಸಿಗೆಯಲ್ಲಿ ಅಗತ್ಯವಾಗುವಷ್ಟು ಅಂತರ್ಜಲ ಲಭ್ಯವಾಗುವ ಆಶಾಭಾವನೆ ಇದೆ ಎಂದವರು ಹೇಳಿದ್ದಾರೆ.
ಐದು ವರ್ಷಗಳ ಹಿಂದೆ 2018ರಲ್ಲಿ ಜಿಲ್ಲೆಯಲ್ಲಿ ವಾರ್ಷಿಕ ಅಂತರ್ಜಲ ಮಟ್ಟ 10.69 ಮೀಟರ್‌ಗಳವರೆಗೂ ಕುಸಿದಿದ್ದು ಕಂಡು ಬಂದಿತ್ತು. ನಂತರದ ವರ್ಷಗಳಲ್ಲಿ ಉತ್ತಮ ಮಳೆಯಾದ ಕಾರಣ, 2022ರ ಇಡೀ ವರ್ಷದಲ್ಲಿ ಜಿಲ್ಲೆಯಲ್ಲಿ ವಾರ್ಷಿಕ ಅಂತರ್ಜಲ ಮಟ್ಟ 5.43 ಮೀಟರ್‌ಗಳವರೆಗೆ ತಲುಪಿತ್ತು.