ಶಿಕ್ಷಕರ ಉತ್ತಮ ಅಭ್ಯಾಸಗಳಿಂದ ಮಕ್ಕಳ ಸಮಗ್ರ ಬೆಳವಣಿಗೆ

ಶಿಕ್ಷಕರ ಉತ್ತಮ ಅಭ್ಯಾಸಗಳಿಂದ ಮಕ್ಕಳ ಸಮಗ್ರ ಬೆಳವಣಿಗೆ

ಕ್ರೈಸ್ಟ್ ವಿ.ವಿ. ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ. ಗ್ರೇಟಾ ಡಿಸೋಜ

ದಾವಣಗೆರೆ, ನ. 7 – ಮಕ್ಕಳ ಸಮಗ್ರ ಬೆಳವಣಿಗೆಯಾಗಬೇಕಾದರೆ ಶಿಕ್ಷಕರು ಸಕಾರಾತ್ಮಕ ಚಿಂತನೆ ಹೊಂದಬೇಕು ಹಾಗೂ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ. ಗ್ರೇಟಾ ಡಿಸೋಜ ಹೇಳಿದರು.

ಬೆಂಗಳೂರಿನ ಕ್ರೈಸ್ಟ್ ವಿಶ್ವ ವಿದ್ಯಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಎ.ವಿ. ಕಮಲಮ್ಮ ಮಹಿಳಾ ಕಾಲೇಜು ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತುಗಳ ಸಂಯುಕ್ತಾಶ್ರಯದಲ್ಲಿ ನಗರದ ಎ.ವಿ.ಕೆ. ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ `ನಾಯಕತ್ವ ಮತ್ತು ಮಾರ್ಗದರ್ಶನ ಆಧಾರಿತ ಶಿಕ್ಷಕರ ವೃತ್ತಿ ಬೆಳವಣಿಗೆ ಕಾರ್ಯಕ್ರಮ’ದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಆಜೀವ ಕಲಿಕೆ, ಪರಿಣಾಮಕಾರಿ ಸಂವಹನ, ಸಹಯೋಗ ಹಾಗೂ ಸಮಯ ನಿರ್ವಹಣೆಯ ಅಭ್ಯಾಸಗಳನ್ನು ಶಿಕ್ಷಕರು ರೂಢಿಸಿಕೊಂಡಾಗ ಶಿಕ್ಷಣದ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.

ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕರಲ್ಲಿ ಸಕಾರಾತ್ಮಕ ಚಿಂತನೆಗಳು ಇರಬೇಕು. ಶಿಕ್ಷಣದ ರೂಪಾಂತರ ಹಾಗೂ ಬೆಳವಣಿಗೆಗೆ ಶಿಕ್ಷಕರು ಕಾರಣೀಭೂತರಾ ಗಬೇಕು ಎಂದವರು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎ.ವಿ.ಕೆ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕಮಲಾ ಸೊಪ್ಪಿನ್, ಮಾನವ ಸಂಪನ್ಮೂಲವೇ ದೇಶದ ನಿಜವಾದ ಶಕ್ತಿಯಾಗಿದೆ. ಅಂತಹ ಶಕ್ತಿ ರೂಪುಗೊಳ್ಳುವುದು ಶಾಲಾ ಕೊಠಡಿಗಳಲ್ಲಿ ಎಂದು ತಿಳಿಸಿದರು.

ದೇಶದ ಬೆಳವಣಿಗೆಗಾಗಿ ಶಿಕ್ಷಣದ ಮಾರ್ಗ ಸುಧಾರಿಸಬೇಕಿದೆ. ದೇಶದ ಸುಸ್ಥಿರ ಅಭಿವೃದ್ಧಿಗೆ ಶಿಕ್ಷಕರು ಕಾರಣೀಭೂತರಾಗಬೇಕಿದೆ ಎಂದವರು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರವಿಕುಮಾರ್ ಕಗತೂರು, ಜಿಲ್ಲೆಯ 120 ಶಿಕ್ಷಕರು ಈ ಕಾರ್ಯಕ್ರಮದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಶಿಕ್ಷಕರ ಉತ್ತಮ ಕಾರ್ಯನಿರ್ವಹಣೆಗಾಗಿ ನಿಯಮಿತವಾಗಿ ಕಾರ್ಯಾಗಾರಗಳ ಅಗತ್ಯತೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದ ವೇದಿಕೆ ಮೇಲೆ ಎ.ವಿ.ಕೆ. ಕಾಲೇಜಿನ ಐ.ಕ್ಯೂ.ಎ.ಸಿ. ಪ್ರೊ. ಆರ್.ಆರ್. ಶಿವಕುಮಾರ್, ವಿಜ್ಞಾನ ಪರಿಷತ್ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ, ಜಿಲ್ಲಾ ಸಮಿತಿ ಸದಸ್ಯ ಕೆ. ಸಿದ್ದೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!