ಮರಾಠ ಸಮಾಜದಲ್ಲಿನ ಒಗ್ಗಟ್ಟಿನ ಕೊರತೆ ನಿವಾರಣೆಗೆ ಯತ್ನ

ಮರಾಠ ಸಮಾಜದಲ್ಲಿನ ಒಗ್ಗಟ್ಟಿನ ಕೊರತೆ ನಿವಾರಣೆಗೆ ಯತ್ನ

ಅಭಿನಂದನಾ ಸಮಾರಂಭದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್

ದಾವಣಗೆರೆ, ನ. 4- ರಾಜ್ಯದಲ್ಲಿರುವ ಮರಾಠ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಇದ್ದು, ಪಕ್ಷಾತೀತವಾಗಿ ಸರಿಪಡಿಸಿಕೊಂಡು ಸದೃಢ ಸಮಾಜ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ನಗರದ ಶ್ರೀ ಅಂಬಾ ಭವಾನಿ ಕಲ್ಯಾಣ ಮಂಟಪದಲ್ಲಿ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದಿಂದ ನಿನ್ನೆ ತಮಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮರಾಠರೆಂದರೆ ಮುಸ್ಲಿಂ ರಾಜರು ಎಂದು ಬಿಂಬಿಸಲಾಗುತ್ತಿದೆ. ಆದರೆ ಮರಾಠರೆಂದರೆ ಮುಸ್ಲಿಂರಲ್ಲ. ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಲ್ಲ ಎಂದರು.

ಶಿವಾಜಿ ಮಹಾರಾಜ ಮೊಗಲರ ವಿರುದ್ಧ ಯುದ್ಧ ಮಾಡಿದ್ದರೂ ಸಹ ಮುಸ್ಲಿಂ ವಿರೋಧಿಯಲ್ಲ. ಅವರ 33 ಅಂಗರಕ್ಷಕರ ಪೈಕಿ 13 ಜನ ಅಂಗರಕ್ಷಕರು ಮುಸ್ಲಿಮರೇ ಆಗಿದ್ದರು. 

ಸತಾರ, ಕೊಲ್ಲಾಪುರ ಮುಂತಾದ ಕಡೆಗಳಲ್ಲಿ ನಡೆದ ಯುದ್ದಗಳಲ್ಲಿ 60 ಸಾವಿರ ಮುಸ್ಲಿಮರು ಶಿವಾಜಿ ಮಹಾರಾಜರಿಗೆ ಬೆನ್ನೆಲುಬಾಗಿ ನಿಂತಿದ್ದರು. ಈ ವಿಚಾರವನ್ನು ಇತಿಹಾಸದಿಂದ ಮಾತ್ರ  ತಿಳಿಯಲು ಸಾಧ್ಯ ಎಂದು ಹೇಳಿದರು.

ಶಿವಾಜಿ ಹಿಂದೂ ರಾಷ್ಟ್ರ ನಿರ್ಮಾಣ ಮಾಡಿದ ಅಪರೂಪದ ವ್ಯಕ್ತಿ. ಅವರನ್ನು ಯಾರು ಪೂಜಿಸುತ್ತಾರೆ ಎಂದ ಅವರು, ನಾವೇ ಪೂಜಿಸಬೇಕು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಲಂಡನ್‌ಗೆ ಉನ್ನತ ವ್ಯಾಸಂಗಕ್ಕಾಗಿ ಕಳುಹಿಸಿದವರು ಮರಾಠ ಸಮಾಜದ ಶಾಹು ಮಹಾರಾಜರು. ಸಂವಿಧಾನ ರಚನೆಯಲ್ಲಿ ಮರಾಠರ ಕೊಡುಗೆ ಅಪಾರವಾಗಿದೆ ಎಂದರು.

ನಾನು ಮರಾಠ ಸಮಾಜಕ್ಕೆ ಸೇರಿದವನಾಗಿದ್ದರೂ ಸಹ ಸರ್ವ ಸಮಾಜಗಳ ಬೆಂಬಲ, ಸಹಕಾರದೊಂದಿಗೆ ಶಾಸಕನಾಗಿ, ಸಚಿವನಾಗಲು ಸಾಧ್ಯವಾಯಿತು. ಎಲ್ಲಾ ಸಮಾಜದವರ ಪ್ರೀತಿ, ವಿಶ್ವಾಸ ನನ್ನ ಮೇಲೆ ಇದೆ. ನಾವು ಮರಾಠ ಸಮಾಜದವರಾಗಿದ್ದರೂ ಸಹ, ನಾವು ಅಪ್ಪಟ ಕನ್ನಡಿಗರು, ಕರ್ನಾಟಕದವರೇ ಆಗಿದ್ದೇವೆ. ಇಲ್ಲಿನ ನೆಲ, ಜಲ ನಮ್ಮದೇ ಕೊನೆ ಉಸಿರು ಇರುವವರೆಗೂ ಕರ್ನಾಟಕದಲ್ಲೇ ಜೀವಿಸುವವರು ನಾವುಗಳು ಎಂದು ಹೇಳಿದರು.

ಪ್ರಸ್ತುತ ರಾಜಕೀಯ ವ್ಯವಸ್ಥೆ ಹದಗೆಟ್ಟು ಹೋಗಿದೆ. ಸಮಾಜ ಸಂಘಟನೆಗೆ ಮುಂದಾಗಬೇಕಿದೆ. ನಾನೂ ಸಹ ಸಮಾಜ ಕಟ್ಟುವ ಕೆಲ ಸಕ್ಕೆ ಪ್ರಾಮಾಣಿಕವಾಗಿ ದುಡಿಯುತ್ತೇನೆ. ನಾವು ಛತ್ರಪತಿ ವಂಶಸ್ಥರು ಸಮಾಜವನ್ನು ಉಳಿಸಿ, ಬೆಳೆಸುವ ಹೊಣೆ ನಮ್ಮದಾಗಿದೆ ಎಂದರು.

ಸಮಾಜದ ಮಕ್ಕಳು ಓದಿನಲ್ಲಿ ಆಸಕ್ತಿ ತೋರಬೇಕಾಗಿದೆ. ಐಎಎಸ್. ಐಪಿಎಸ್ ತರಬೇತಿ ಕೊಡಿಸುವ ಪ್ರಯತ್ನ ನಮ್ಮದು. ಇದಕ್ಕೆ ಸಮಾಜದ ಪೋಷಕರು ಚಿಂತನೆ ನಡೆಸಬೇಕೆಂದು ಸಲಹೆ ನೀಡಿದರು.

ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಎಲ್ಲಾ ಸಮಾಜದವರ ಪ್ರೀತಿ, ವಿಶ್ವಾಸ ಗಳಿಸಿದರೆ ಏನೆಲ್ಲಾ ಸಾಧನೆ ಮಾಡಲು ಸಾಧ್ಯವಿದೆ ಎನ್ನುವುದಕ್ಕೆ ತಾಜಾ ಉದಾಹರಣೆ ಸಚಿವ ಸಂತೋಷ್ ಲಾಡ್ ಅವರೇ ಸಾಕ್ಷಿ. ಸರ್ವ ಸಮಾಜದವರ ಬೆಂಬಲ ಇರುವ ಕಾರಣ ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ ಸೇವೆ ಮಾಡಲು ಸಾಧ್ಯವಾಗಿದೆ ಎಂದರು.

ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ. ಮಾಲತೇಶರಾವ್ ಜಾಧವ್‌ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘದ  ಗೌರವಾಧ್ಯಕ್ಷ ಯಶವಂತರಾವ್‌  ಜಾಧವ್, ಶ್ರೀ ಅಂಬಾ ಭವಾನಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ. ಗೋಪಾಲರಾವ್ ಮಾನೆ, ಪಾಲಿಕೆ ಸದಸ್ಯ ರಾಕೇಶ್ ರಾವ್ ಜಾಧವ್, ಮಾಜಿ ಉಪ ಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ಗೌರಬಾಯಿ, ಜಿ. ಯಲ್ಲಪ್ಪ ಡಂಬಳೆ, ವಕೀಲರಾದ ನಿಟುವಳ್ಳಿ ನಾಗರಾಜ್, ಮುಖಂಡರಾದ ಎಂ.ಟಿ. ಸುಭಾಶ್ಚಂದ್ರ, ನಂದಿಗಾವಿ ಶ್ರೀನಿವಾಸ್, ನಿಖಿಲ್ ಕೊಂಡಜ್ಜಿ, ನಾಯಕ ಸಮಾಜದ ಅಧ್ಯಕ್ಷ ವೀರಣ್ಣ ಮತ್ತಿತರರು ಉಪಸ್ಥಿತರಿದ್ದರು.

ವಿಠೋಬರಾವ್ ಪ್ರಾರ್ಥಿಸಿದರು. ಹನುಮಂತರಾವ್ ಸುರ್ವೆ ಸ್ವಾಗತಿಸಿದರು.

error: Content is protected !!