ದಾನ – ಧರ್ಮದಿಂದಲೇ ನನಗೆ ಶ್ರೇಯಸ್ಸು ಸಿಕ್ಕಿದೆ : ಶಾಸಕ ಎಸ್ಸೆಸ್

ದಾನ – ಧರ್ಮದಿಂದಲೇ ನನಗೆ ಶ್ರೇಯಸ್ಸು ಸಿಕ್ಕಿದೆ : ಶಾಸಕ ಎಸ್ಸೆಸ್

ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಭಾಜನರಾದ ಎಸ್ಸೆಸ್ ಅವರಿಗೆ ಜಿಲ್ಲಾ ಸಹಕಾರ ಬ್ಯಾಂಕುಗಳ ಒಕ್ಕೂಟದಿಂದ ಸನ್ಮಾನ

ದಾವಣಗೆರೆ,ನ.2- `ನಾನು ಮಾಡಿದ ದುಡಿಮೆಯಲ್ಲಿ ಗಳಿಸಿದ ಲಾಭದಲ್ಲಿ ಶೇ. 10 ರಷ್ಟನ್ನು ಸಮಾಜಕ್ಕೆ ಕೊಟ್ಟಿರುವ ದಾನ -ಧರ್ಮದಿಂದಲೇ ನನಗೆ ಶ್ರೇಯಸ್ಸು ಸಿಕ್ಕಿದೆ’ ಎಂದು ಹಿರಿಯ ಶಾಸಕರೂ ಆಗಿರುವ ಬಾಪೂಜಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸಂತೃಪ್ತಿ ವ್ಯಕ್ತಪಡಿಸಿದರು.

ವಿಜಯಪುರದ ಡೀಮ್ಡ್ ವಿಶ್ವವಿದ್ಯಾಲಯ (ಬಿಎಲ್‌ಡಿಇ) ದಿಂದ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಭಾಜನರಾದ ತಮಗೆ ದಾವಣಗೆರೆ ಜಿಲ್ಲಾ ಸಹಕಾರ ಬ್ಯಾಂಕುಗಳ ಒಕ್ಕೂಟದಿಂದ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ನೀಡಿದ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು.

ನಮ್ಮ ದುಡಿಮೆಯಲ್ಲೇ ಕನಿಷ್ಠ ಶೇ .10 ರಷ್ಟು ದಾನ – ಧರ್ಮ ಮಾಡಿದಾಗ ಸಮಾಜಕ್ಕೆ ಕಿಂಚಿತ್ತೂ ಋಣ ತೀರಿಸಲು ಸಾಧ್ಯ. ಅಲ್ಲದೇ, ಈ ಮೂಲಕವೂ ದೇಶದ ಅಭಿವೃದ್ಧಿಗೆ ನಮ್ಮ ಪಾಲು ಮತ್ತು ಸಹಯೋಗ ನೀಡಿದಂತಾಗುತ್ತದೆ ಎಂದು ಎಸ್ಸೆಸ್ ಪ್ರತಿಪಾದಿಸಿದರು.

ದಾನ – ಧರ್ಮದಿಂದ ನಮ್ಮ ಜೀವನದಲ್ಲಿ ಶಾಂತಿ – ನೆಮ್ಮದಿ ಸಿಗುತ್ತದೆ ; ಇದು, ನಮ್ಮ ಭಾರತೀಯ ಸಂಸ್ಕೃತಿ ಕೂಡಾ ಆಗಿದ್ದು, ಇದನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹ ದೇಶದ ಸಂಸ್ಕೃತಿಗೆ ಸಹಕಾರ ನೀಡಬೇಕು ಎಂದು ಅವರು ಕಳಕಳಿ ವ್ಯಕ್ತಪಡಿಸಿದರು.

ಇವತ್ತು ನನಗೆ ಪ್ರಶಸ್ತಿ – ಪುರಸ್ಕಾರಗಳು ಬಂದಿವೆ ಎಂದರೆ ಅದರ ಹಿಂದೆ ದಾನ – ಧರ್ಮದ ಕೊಡುಗೆ ಇದೆ. ಸ್ಥಾನ – ಮಾನ, ಗೌರವಾಧರಗಳು ದೊರೆತಿದ್ದರೆ ಅದಕ್ಕೆ ಇದೇ ಕಾರಣ. ಅತ್ಯುತ್ತಮವಾಗಿ ಆರೋಗ್ಯವಾಗಿದ್ದು, ಆಯಸ್ಸು ವೃದ್ಧಿಸಲು ಅದೇ ಕಾರಣ ಎಂದು ತಮಗೆ ಸಿಕ್ಕಿರುವ ಶ್ರೇಯಸ್ಸಿನ ಗುಟ್ಟನ್ನು ಎಸ್ಸೆಸ್ ಎಳೆ-ಎಳೆಯಾಗಿ ಬಿಡಿಸಿಟ್ಟರು. 

ನನ್ನ ಜೀವನದಲ್ಲಿ ನಾನು ಯಾರನ್ನೂ ವಿರೋಧಿಸಿಲ್ಲ. ನನ್ನನ್ನು ವಿರೋಧಿಸಿದವರನ್ನು ಅತ್ಯಂತ ಪ್ರೀತಿಯಿಂದ ಕಂಡಿದ್ದೇನೆ. ಎಲ್ಲರೂ ನನ್ನವರೇ ಎನ್ನುವ ಭಾವನೆಯಿಂದ ಸ್ಪಂದಿಸಿದ್ದೇನೆ. ಇದೂ ಕೂಡಾ ನನ್ನ ಶ್ರೇಯಸ್ಸಿಗೆ ಕಾರಣ ಎಂದು ಎಸ್ಸೆಸ್ ಹೇಳಿದರು.

ಪ್ರಶಸ್ತಿ  – ಪುರಸ್ಕಾರಗಳು ನಮ್ಮ ಜವಾಬ್ಧಾರಿ ಹೆಚ್ಚಿಸುತ್ತವೆ ಎಂದ ಅವರು, ಸಹಕಾರ ಬ್ಯಾಂಕುಗಳ ಒಕ್ಕೂಟದಿಂದ ಇಂದು ನೀಡಿರುವ ಸನ್ಮಾನಕ್ಕೆ ನನ್ನ ಜವಾಬ್ಧಾರಿ ಹೆಚ್ಚಿಸಿದೆ. ಮತ್ತಷ್ಟು ಸಾಮಾಜಿಕ ಸೇವೆ ಸಲ್ಲಿಸಬೇಕು ಎನ್ನುವ ಪ್ರೇರಣೆ – ಉತ್ಸಾಹ ತಂದಿದೆ ಎಂದು ಶಿವಶಂಕರಪ್ಪ ಪ್ರತಿಕ್ರಿಯಿಸಿದರು.

ಮಾರ್ಗದರ್ಶನ ಬೇಕು : ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ದಾವಣಗೆೆರೆ – ಹರಿಹರ  ಅರ್ಬನ್ ಸಹಕಾರ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಜಿಲ್ಲಾ ಸಹಕಾರ ಬ್ಯಾಂಕುಗಳ ಒಕ್ಕೂಟದ ಗೌರವ ಕಾರ್ಯದರ್ಶಿ ಎನ್.ಎ. ಮುರುಗೇಶ್ ಅವರು, ಎಸ್ಸೆಸ್ ನೂರ್ಕಾಲ ಬಾಳಲಿ, ಅವರ ಮಾರ್ಗದರ್ಶನ ನಮ್ಮೆಲ್ಲರಿಗೆ ಇರಲಿ ಎಂದು ಆಶಿಸಿದರು.

ಇತ್ತೀಚಿನ ದಿನಗಳಲ್ಲಿ ಒಂದು ಸಣ್ಣ ಪ್ರಶಸ್ತಿಗೂ ಅರ್ಜಿ ಹಾಕಿ ಪಡೆಯುವಂತಹ ಪರಿಸ್ಥಿತಿ ಇದೆ. ಆದರೆ, ನಾವು ಮಾಡುವ ಸಾಮಾಜಿಕ ಸೇವೆ ಅರ್ಥಪೂರ್ಣ ಮತ್ತು ಮಾದರಿಯಾಗಿದ್ದಲ್ಲಿ ಉನ್ನತ ಪ್ರಶಸ್ತಿಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎನ್ನುವುದಕ್ಕೆ ಎಸ್ಸೆಸ್ ಉದಾಹರಣೆಯಾಗಿದ್ದಾರೆ ಎಂದು ಹೇಳಿದರು.

ಶತಾಯುಷಿಗಳಾಗಲಿ : ತಮ್ಮ 93ನೇ ಇಳಿ ವಯಸ್ಸಿ ನಲ್ಲೂ ಯುವಕರು ನಾಚುವಂತೆ ಸಮಾಜದ ಕೆಲಸ ಮಾಡುತ್ತಿರುವ ಎಸ್ಸೆಸ್ ಶತಾಯುಷಿಗಳಾಗಲಿ ಎಂದು ಜವಳಿ ಉದ್ಯಮಿಯೂ ಆಗಿರುವ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಹಿರಿಯ ನಿರ್ದೇಶಕ ಬಿ.ಸಿ. ಉಮಾಪತಿ ಭಗವಂತನಲ್ಲಿ ಪ್ರಾರ್ಥಿಸಿದರು.

ಎಸ್ಸೆಸ್ ಅವರೊಂದಿಗೆ ನಾವಿದ್ದೇವೆ ಎನ್ನುವುದೇ ನಮ್ಮ ಪುಣ್ಯ. ಅವರ ಆಯಸ್ಸು ನೂರಾಗಬೇಕು. ಶತಾಯುಷಿಯ ಸಂಭ್ರಮಾಚರಣೆಯನ್ನು ಮಾಡುವಂತಹ ಭಾಗ್ಯ ನಮ್ಮೆಲ್ಲರಿಗೂ ಸಿಗಬೇಕು ಎಂದು ಉಮಾಪತಿ ಆಶಯ ವ್ಯಕ್ತಪಡಿಸಿದರು. 

ಎಸ್ಸೆಸ್ ಸೇವೆಗಳ ಪ್ರತಿಬಿಂಬ : ಹಿರಿಯ ಕೈಗಾರಿಕೋದ್ಯಮಿಯೂ ಆಗಿರುವ ಬಾಪೂಜಿ ಸಹಕಾರಿ ಬ್ಯಾಂಕ್ ಹಿರಿಯ ನಿರ್ದೇಶಕ ಅಥಣಿ ಎಸ್. ವೀರಣ್ಣ ಮಾತನಾಡಿ, ನಾಲ್ಕು ಗೌರವ ಡಾಕ್ಟರೇಟ್ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ ಎಂದರೆ, ಅವು ಎಸ್ಸೆಸ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಅನುಪಮ ಮತ್ತು ಮಾದರಿ – ಅರ್ಥಪೂರ್ಣ  ಹಾಗೂ ಶಾಶ್ವತ ಸೇವೆಗಳ ಪ್ರತಿಬಿಂಬ ಎಂದು ಬಣ್ಣಿಸಿದರು. 

ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಜಿಲ್ಲಾ ಸಹಕಾರ ಬ್ಯಾಂಕುಗಳ ಒಕ್ಕೂಟದ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ಶ್ರೀ ಕನ್ಯಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಆರ್.ಜಿ.ಶ್ರೀನಿವಾಸಮೂರ್ತಿ, ಶ್ರೀ ಅಂಬಾಭವಾನಿ ಅರ್ಬನ್ ಕೋ-ಆರಪೇಟಿವ್ ಬ್ಯಾಂಕ್ ಅಧ್ಯಕ್ಷ ಗೋಪಾಲರಾವ್ ಮಾನೆ,  ಶಿವ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಐಗೂರು ಚಂದ್ರಶೇಖರ್,  ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಅಂದನೂರು ಮುಪ್ಪಣ್ಣ, ನಿರ್ದೇಶಕ ದೇವರಮನೆ ಶಿವಕುಮಾರ್, ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಉಪಾಧ್ಯಕ್ಷರಾದ ಶ್ರೀಮತಿ ಜಯಮ್ಮ ಪರಶುರಾಮಪ್ಪ, ನಿರ್ದೇಶಕರುಗಳಾದ ಎ.ಹೆಚ್. ಕುಬೇಂದ್ರಪ್ಪ, ಕಿರುವಾಡಿ ವಿ. ಸೋಮಶೇಖರ್, ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಬಿ.ಹೆಚ್. ಪರಶುರಾಮಪ್ಪ, ವ್ಯವಸ್ಥಾಪಕ ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!