ಬರ ನಿರ್ವಹಣೆಗೆ ಖಾಸಗಿ ಬೋರ್‌ ಸಜ್ಜಾಗಿರಲಿ

ಬರ ನಿರ್ವಹಣೆಗೆ ಖಾಸಗಿ ಬೋರ್‌ ಸಜ್ಜಾಗಿರಲಿ

ಬೆಳೆ ವಿಮೆ ಪರಿಹಾರ ಎಲ್ಲ ರೈತರಿಗೂ ಸಿಗಲಿ : ದಿಶಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ

ದಾವಣಗೆರೆ, ಅ. 31 – ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಗತ್ಯಕ್ಕಾಗಿ ಖಾಸಗಿ ಬೋರ್‌ಗಳನ್ನೂ ಸಜ್ಜಾಗಿರಿಸಬೇಕು. ಬೆಳೆ ವಿಮೆ ಮಾಡಿಸಿಕೊಂಡ ಎಲ್ಲ ರೈತರಿಗೂ ಪರಿಹಾರ ಸಿಗಬೇಕು ಎಂದು ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ನಡೆದ ದಾವಣಗೆರೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಸೂಳೆಕೆರೆಯಲ್ಲಿ ಈಗಾಗಲೇ ನೀರು ಕಡಿಮೆಯಾಗಿದೆ. ಈ ಕೆರೆಯಿಂದ 80 ಗ್ರಾಮಗಳಿಗಷ್ಟೇ ಅಲ್ಲದೇ ಚಿತ್ರದುರ್ಗ, ಜಗಳೂರು, ಹೊಳಲ್ಕೆರೆಗಳಿಗೂ ನೀರು ಪೂರೈಕೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ನೀರು ಸಮರ್ಪಕವಾಗಿರುವಂತೆ ನೋಡಿಕೊಳ್ಳಿ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಜಿ.ಎಂ. ಸಿದ್ದೇಶ್ವರ ಸೂಚನೆ ನೀಡಿದರು.

ಬೇಸಿಗೆಯ ಒಳಗೆ ಬಹು ಗ್ರಾಮ ಕುಡಿ ಯುವ ನೀರಿನ ಯೋಜನೆಗಳ ಕಾಮಗಾರಿ ಗಳನ್ನು ಪೂರ್ಣಗೊಳಿಸಬೇಕು. ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ಜನರನ್ನು ಎದುರಿಸಬೇ ಕಾಗುತ್ತದೆ ಎಂದು ಸಿದ್ದೇಶ್ವರ ಹೇಳಿದರು.

155 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ಖಾಸಗಿ ಬೋರ್‌ಗಳನ್ನೂ ಸಿದ್ಧವಾಗಿಟ್ಟುಕೊಳ್ಳಬೇಕು. ಈ ಬಗ್ಗೆ ತಹಶೀಲ್ದಾರ್ ಹಾಗೂ ಪಿ.ಡಿ.ಒ.ಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದರು.

ಜಿಲ್ಲೆಯಲ್ಲಿ 47,247 ರೈತರು ಫಸಲು ವಿಮೆ ಪಡೆದಿದ್ದಾರೆ. ಜಿಲ್ಲೆಯ ಎಲ್ಲ ರೈತರೂ ನಷ್ಟಕ್ಕೆ ಗುರಿಯಾಗಿದ್ದಾರೆ. ವಿಮೆ ಪಡೆದ ಎಲ್ಲರಿಗೂ ಪರಿಹಾರ ಸಿಗಬೇಕು. ವಿಮಾ ಕಂಪನಿಗಳ ಜೊತೆ ಅಧಿಕಾರಿಗಳು ಶಾಮೀಲಾಗಿ ತಪ್ಪು ವರದಿ ನೀಡುವಂತಾಗಬಾರದು ಎಂದು ಸಂಸದ ಸಿದ್ದೇಶ್ವರ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವೆಂಕಟೇಶ್, 99 ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ನಡೆಲಾಗಿದೆ. ಶೇ.97.5ರಷ್ಟು ಪ್ರದೇಶದಲ್ಲಿ ಶೇ.50ಕ್ಕೂ ಹೆಚ್ಚು ಬೆಳೆ ನಾಶವಾಗಿದೆ. ಶೇ.85ರಷ್ಟು ಪ್ರದೇಶದಲ್ಲಿ ಶೇ.90ಕ್ಕೂ ಹೆಚ್ಚು ನಷ್ಟವಾಗಿದೆ. ಈ ಬಾರಿ ಆದಷ್ಟು ಬೇಗ ಪರಿಹಾರ ಬಿಡುಗಡೆ ಮಾಡಲು ಕೋರಲಾಗಿದೆ ಎಂದರು.

ಪ್ರಧಾನ ಮಂತ್ರಿ ನಗರ ವಸತಿ ಯೋಜನೆ ಯಡಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ 996 ವಸತಿ ರಹಿತರಿಗೆ ಪಾಲಿಕೆಯಿಂದ ನಿವೇಶನ ಹಾಗೂ ಹಕ್ಕುಪತ್ರ ವಿತರಣೆ ವಿಳಂಬ ವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಸಿದ್ದೇಶ್ವರ, ವಾರದಲ್ಲೇ ಈ ಬಗ್ಗೆ ವರದಿ ನೀಡಬೇಕು ಎಂದು ತಾಕೀತು ಮಾಡಿದರು.

ಪ್ರಧಾನ ಮಂತ್ರಿ ಗ್ರಾಮೀಣ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುವ ಹಣದ ಕಂತುಗಳನ್ನು ಕಡಿಮೆ ಮಾಡಿರುವ ಬಗ್ಗೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.

ಈ ಹಿಂದೆ ಫಲಾನುಭವಿಗಳಿಗೆ ಸಬ್ಸಿಡಿಯನ್ನು ನಾಲ್ಕು ಕಂತುಗಳಲ್ಲಿ ಹಣ ನೀಡಲಾಗುತ್ತಿತ್ತು. ಈಗ ಮೂರಕ್ಕೆ ಇಳಿಸಲಾಗಿದೆ. ಅದರಲ್ಲೂ 2-3 ಕಂತಿನ ಹಣವನ್ನು ಒಂದೇ ಬಾರಿಗೆ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಇಟ್ನಾಳ್ ತಿಳಿಸಿದರು.

ಸಭೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಹಾಗೂ ದಿಶಾ ಸಮಿತಿ ಸದಸ್ಯರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

 

error: Content is protected !!