ಕನ್ನಡ ನಾಡಿನ ಇತಿಹಾಸ, ಕಲೆ-ಸಾಹಿತ್ಯದ ಪರಂಪರೆಯನ್ನು ಜಗಕೆ ಸಾರೋಣ

ಕನ್ನಡ ನಾಡಿನ ಇತಿಹಾಸ, ಕಲೆ-ಸಾಹಿತ್ಯದ ಪರಂಪರೆಯನ್ನು ಜಗಕೆ ಸಾರೋಣ

ರಾಜ್ಯೋತ್ಸವ ಸಂಭ್ರಮದಲ್ಲಿ ಮಿಂದೆದ್ದ ಕುವೆಂಪು ಕನ್ನಡ ಭವನ

ಜಿಲ್ಲಾ ಕಸಾಪದ68ನೇ ರಾಜ್ಯೋತ್ಸವದಲ್ಲಿ ಬಿ. ವಾಮದೇವಪ್ಪ

ದಾವಣಗೆರೆ, ನ. 1 – ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನಗರದ ಕುವೆಂಪು ಕನ್ನಡ ಭವನವು ಇಂದು 68ನೇ ರಾಜ್ಯೋತ್ಸವ ಸಂಭ್ರಮದಲ್ಲಿ ಅಕ್ಷರಶಃ ಮಿಂದೆದ್ದಿತು. 

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಅವರ ಸಾರಥ್ಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಲಯನ್ಸ್ ಕ್ಲಬ್ ವಿದ್ಯಾನಗರ,
ದವನ – ನೂತನ ಪದವಿಪೂರ್ವ ಕಾಲೇಜು, ಸುಶ್ರಾವ್ಯ ಸಂಗೀತ ವಿದ್ಯಾಲಯ, ಬಸಾಪುರದ ಬಸವ ಕಲಾ ಲೋಕದ ಜಂಟಿ ಸಹಭಾಗಿತ್ವದಲ್ಲಿ ಆಯೋಜನೆಗೊಂಡ ರಾಜ್ಯೋತ್ಸವ ಕಾರ್ಯ ಕ್ರಮವು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಕುವೆಂಪು ಕನ್ನಡ ಭವನವು ಕಂಗೊಳಿಸುವಂತೆ ಮಾಡಿತು. 

ಜಿಲ್ಲೆಯ ಸಾರಸ್ವತ ಲೋಕದ ದಿಗ್ಗಜರು, ಕಲಾವಿದರು, ವಿವಿಧ ಸಂಘ-ಸಂಸ್ಥೆಗಳ ಪದಾ ಧಿಕಾರಿಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿ ಗಳು, ಕನ್ನಡಾಭಿಮಾನಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರುಗಳ ಸಮ್ಮುಖದಲ್ಲಿ ಕನ್ನಡಾಂಬೆ ಭುವನೇಶ್ವರಿಯ ಆರಾಧನೆಯೂ ಅರ್ಥಪೂರ್ಣವಾಗಿ ನಡೆಯಿತು. 

ನಾಡ ಧ್ವಜಾರೋಹಣ ಮಾಡಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಅವರು, ಮೈಸೂರು ರಾಜ್ಯವು `ಕರ್ನಾಟಕ’ ರಾಜ್ಯವಾಗಿ ನಾಮಾಂಕಿತವಾಗಿ 50 ವರ್ಷ ತುಂಬಿದ ಸಂಭ್ರಮದಲ್ಲಿ ನಾವಿ ದ್ದೇವೆ. ಕನ್ನಡಿಗರ ಹರ್ಷ ಇಮ್ಮಡಿಯಾಗಿದೆ. ಸರ್ಕಾರವು ವರ್ಷ ಪೂರ್ತಿ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಕನ್ನಡಿಗರ ಸಂಭ್ರಮವನ್ನು ನೂರ್ಮಡಿ ಮಾಡಲು `ಕರ್ನಾಟಕ ಸಂಭ್ರಮ – 50 ಹೆಸರಾಯಿತು ಕರ್ನಾಟಕ – ಉಸಿರಾಗಲಿ ಕರ್ನಾಟಕ’ ಶೀರ್ಷಿಕೆಯ ಅಡಿಯಲ್ಲಿ ವೈವಿಧ್ಯಮಯ ಹಾಗೂ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.  ಕನ್ನಡ ನಾಡಿನ ಇತಿಹಾಸ, ಕಲೆ ಸಂಸ್ಕೃತಿಯ ಹಿರಿಮೆ ಗರಿಮೆಯನ್ನು ಜಗಕೆ ಸಾರುವುದರ ಜೊತೆಗೆ ಯುವ ಜನತೆಗೆ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. 

ಲಯನ್ಸ್ ಕ್ಲಬ್ ವಿದ್ಯಾನಗರ ಅಧ್ಯಕ್ಷ ಲಯನ್ ಸಿ.ಹೆಚ್.ದೇವರಾಜ್ ರಾಷ್ಟ್ರ ಧ್ವಜಾರೋಹಣ ಮಾಡಿದರು. ಸುಶ್ರಾವ್ಯ ಸಂಗೀತ ವಿದ್ಯಾಲಯದ ಅಧ್ಯಕ್ಷರಾದ ಶ್ರೀಮತಿ ಯಶಾ ದಿನೇಶ್ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ತಜ್ಞ ಡಾ. ಎಂ.ಜಿ.ಈಶ್ವರಪ್ಪ ಅವರು ರಾಜ್ಯೋತ್ಸವದ ಅಂಗವಾಗಿ ವಿಶೇಷವಾಗಿ ಅಲಂಕಾರ ಮಾಡಿದ್ದ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. 

ಸುಶ್ರಾವ್ಯ ಸಂಗೀತ ವಿದ್ಯಾಲಯದ ಕಲಾವಿದರು ಹುಯಿಲಗೋಳ ನಾರಾಯಣರಾಯ ವಿರಚಿತ `ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ರಾಷ್ಟ್ರಕವಿ ಕುವೆಂಪು ವಿರಚಿತ `ಎಲ್ಲಾದರೂ ಇರು ಎಂತಾದರೂ ಇರು’, ದ.ರಾ.ಬೇಂದ್ರೆ ವಿರಚಿತ `ಒಂದೇ ಒಂದೇ ಕರ್ನಾಟಕ ಒಂದೇ’, ಸಿದ್ದಯ್ಯ ಪುರಾಣಿಕ ವಿರಚಿತ `ಹೊತ್ತಿತೋ ಹೊತ್ತಿತು ಕನ್ನಡದ ದೀಪ’, ಚೆನ್ನವೀರ ಕಣವಿ ವಿರಚಿತ `ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಗೀತೆಗಳನ್ನು  ಗೀತ ಗಾಯನದ ಮೂಲಕ ಕನ್ನಡಾಂಬೆಗೆ ನುಡಿ ನಮನ ಸಲ್ಲಿಸಿ ರಾಜ್ಯೋತ್ಸವಕ್ಕೆ ಮೆರಗನ್ನು ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಪಡಿಸಿದ್ದ ಕನ್ನಡ ರಥಕ್ಕೆ ದವನ ಕಾಲೇಜಿನ ಗೌರವ ಕಾರ್ಯದರ್ಶಿ ವೀರೇಶ್ ಪಾಟೀಲ್ ಚಾಲನೆ ನೀಡಿದರು. ಬಸಾಪುರದ ಬಸವ ಕಲಾ ಲೋಕದ ಕಲಾವಿದರ ನಂದಿ ಧ್ವಜ – ಸಮಾಳ, ಮಾಗನೂರು ಬಸಪ್ಪ ಶಾಲಾ ವಿದ್ಯಾರ್ಥಿಗಳಿಂದ ವಾದ್ಯ, ಬ್ಯಾಂಡ್ ಹಾಗೂ ದವನ-ನೂತನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿ ಕನ್ನಡ ಧ್ವಜವನ್ನು ಕೈಯ್ಯಲ್ಲಿ ಹಿಡಿದು ಕನ್ನಡಾಂಬೆಗೆ ಜಯವಾಗಲಿ ಎನ್ನುವ ಘೋಷಣೆ ಹಾಕುತ್ತಾ, ಕನ್ನಡ ರಥದ ಮೆರವಣಿಗೆಯಲ್ಲಿ ಭಾಗವಹಿಸಿ, ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಹೊತ್ತ ಕನ್ನಡ ರಥದ ಮೆರವಣಿಗೆಯನ್ನು ಆಕರ್ಷಣೀಯಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಬಸವ ಕಲಾ ಲೋಕದ ಅಧ್ಯಕ್ಷ ಹೆಚ್.ಶಶಿಧರ್, ನೂತನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕೆ.ಟಿ.ಸುಮಿತ್ರ, ಬಾ.ಮ.ಬಸವರಾಜಯ್ಯ, ಕಲಾವಿದ ಮಹಾಲಿಂಗಪ್ಪ, ಶಿವಕುಮಾರ್, ಜಿ.ಆರ್.ಷಣ್ಮುಖಪ್ಪ ಮುಂತಾದವರು ಭಾಗವಹಿಸಿದ್ದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಜಿಗಳಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್.ಎಸ್.ರಾಜು, ರುದ್ರಾಕ್ಷಿ ಬಾಯಿ, ಸತ್ಯಭಾಮ, ಮಲ್ಲಮ್ಮ, ಭೈರವೇಶ್ವರ, ದವನ-ನೂತನ ಪದವಿಪೂರ್ವ ಕಾಲೇಜಿನ ಸಿಬ್ಬಂದಿವರ್ಗ ಮುಂತಾದವರು ಉಪಸ್ಥಿತರಿದ್ದು ರಾಜ್ಯೋತ್ಸವ ಸಂಭ್ರಮವನ್ನು ಹೆಚ್ಚಿಸಿದರು.

error: Content is protected !!