ರಾಜ್ಯೋತ್ಸವದಲ್ಲಿ ಸಚಿವ ಎಸ್ಸೆಸ್ಸೆಂ ಕರೆ
ದಾವಣಗೆರೆ, ನ. 1 – ಭಿನ್ನತೆಗಳನ್ನು ತೊಡೆದು, ಕೀಳರಿಮೆ ಬಿಟ್ಟು ಒಂದಾಗಿ ಭವ್ಯ ಕರ್ನಾಟಕ ನಿರ್ಮಾಣಕ್ಕೆ ಶ್ರಮಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕರೆ ನೀಡಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣವಾಗಿ 50 ವರ್ಷ ತುಂಬಿದ ಈ ಸಂದರ್ಭದಲ್ಲಿ ನಮ್ಮ ಭವ್ಯ ಇತಿಹಾಸ, ಪರಂ ಪರೆ, ಶ್ರೇಷ್ಠ ಸಂಸ್ಕೃತಿಯನ್ನು ಸ್ಮರಿಸಬೇಕಿದೆ. ನಾಡಿನ ಅಪೂರ್ವ ಸಂಸ್ಕೃತಿ ಮತ್ತು ಭವ್ಯ ಪರಂ ಪರೆಯನ್ನು ಎತ್ತಿ ಹಿಡಿಯಬೇಕಿದೆ ಎಂದರು.
ಮುಖ್ಯಮಂತ್ರಿಗಳ ಆಶಯದಂತೆ ವರ್ಷ ಪೂರ್ತಿ ಹಲವಾರು ಕನ್ನಡ ಪರ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಕನ್ನಡಿಗರದು ಸುಮಾರು ಎರಡೂವರೆ ಸಾವಿರ ವರ್ಷಗಳ ಭವ್ಯ ಇತಿಹಾಸ. ಮಹಾ ಭಾರತದ ಭೀಷ್ಮ ಪರ್ವದಲ್ಲಿ ಕರ್ನಾಟಕ ಎಂಬ ಪದ ಬಳಸಲಾಗಿದೆ ಎಂದು ಸಚಿವರು ತಿಳಿಸಿದರು.
ವಿಶ್ವ ಕನ್ನಡ ಸಮ್ಮೇಳನ ಸದ್ಯಕ್ಕಿಲ್ಲ
ರಾಜ್ಯ ಕಾಂಗ್ರೆಸ್ ಸರ್ಕಾರ ಉರುಳಿಸುವುದಾಗಿ `ಬೆಳಗಾವಿ ಗ್ಯಾಂಗ್’ ಹೇಳುತ್ತಿರುವುದು ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲರ ಹೋರಿ ಮತ್ತು ನರಿಯ ಕಥೆಯನ್ನು ನೆನಪಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.
ಸರ್ಕಾರ ಬೀಳಲಿದೆ ಎಂದು ಶಾಸಕ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ ಸಚಿವರು, ಮತ್ತೆ ಮತ್ತೆ ಜೆ.ಹೆಚ್. ಪಟೇಲ್ ಕಥೆ ಹೇಳಿಸಬೇಡಿ ಎಂದು ಚಟಾಕಿ ಹಾರಿಸಿದರು.
ಈ ವರ್ಷ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಸಾಧ್ಯವಾಗದು ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಡಿಸೆಂಬರ್ ನಂತರ ಈ ಬಗ್ಗೆ ಚರ್ಚಿಸಲಾಗುವುದು. ಮುಂದಿನ ಬಜೆಟ್ನಲ್ಲಿ ಈ ವಿಷಯದ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ನಗರದ ಗಾಜಿನ ಮನೆಯನ್ನು ಅಭಿವೃದ್ಧಿ ಪಡಿಸಲಾಗುವುದು ಹಾಗೂ ಸೌಂದರ್ಯೀಕರಣ ಗೊಳಿಸಲಾಗುವುದು. ಅಲ್ಲಿನ ಕಾರಂಜಿ ಕಾಮಗಾರಿಗೆ `ಬಿಲ್ ಪೇಮೆಂಟ್ ಆಗಿದೆ, ಫೌಂಟೇನ್ ಆಗಿಲ್ಲ’. ಈ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗು ವುದು. ಪ್ರಸಕ್ತ ರೈತರ ಬೆಳೆಗೆ ನೀರು ಒದಗಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಜನಸಮುದಾಯದ ಪರಿಶ್ರಮ ಮತ್ತು ತ್ಯಾಗದಿಂದ ನವೆಂಬರ್ 1, 1956ರಲ್ಲಿ ಕನ್ನಡನಾಡು ಏಕೀಕರಣಗೊಂಡು ಮೈಸೂರು ರಾಜ್ಯವಾಯಿತು. ನವೆಂಬರ್ 1, 1973ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಕನಸಿನ ಫಲವಾಗಿ ಕರ್ನಾಟಕ ಎಂಬ ಹೆಸರು ಪಡೆಯಿತು ಎಂದು ಮಲ್ಲಿಕಾರ್ಜುನ್ ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಸಮಾದೇಷ್ಟ ಸೋಮಶೇಖರ್ ಅವರ ನೇತೃತ್ವದಲ್ಲಿ 14 ತಂಡಗಳಿಂದ ಪಥಸಂಚಲನ ನಡೆಸ ಲಾಯಿತು. ಕನ್ನಡದಲ್ಲಿ ಪಥಸಂಚಲನ ಆದೇಶ ನೀಡಲಾಯಿತು.
ಗೋಲ್ಡನ್ ಪಬ್ಲಿಕ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಬಾಪೂಜಿ ಸಿಬಿಎಸ್ಇ ಸ್ಕೂಲ್ ಹಾಗೂ ಸೇಂಟ್ ಜಾನ್ಸ್ ಶಾಲಾ ಮಕ್ಕಳು ಸಾಂಸ್ಕೃತಿಕ ಪ್ರದರ್ಶನ ನೆರವೇರಿಸಿದರು.
ಇದೇ ವೇಳೆ ನಾಡು – ನುಡಿಗಾಗಿ ಸೇವೆ ಸಲ್ಲಿಸಿದ 50 ಜನರಿಗೆ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ನಡೆಯುವ ವೇಳೆಯೇ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರದರ್ಶನವನ್ನೂ ಆರಂಭಿಸಲಾಯಿತು. ಇದರಿಂದಾಗಿ ಕಾರ್ಯಕ್ರಮದ ಅಚ್ಚುಕಟ್ಟುತನಕ್ಕೆ ಭಂಗವಾಯಿತು. ಕಿರಿದಾದ ವೇದಿಕೆಯಲ್ಲಿ 50ಕ್ಕೂ ಹೆಚ್ಚು ಜನರನ್ನು ಸನ್ಮಾನಿಸುವಾಗ ಗಜಿಬಿಜಿ ವಾತಾವರಣವೂ ಕಂಡು ಬಂದಿತು.
ವೇದಿಕೆಯ ಮೇಲೆ ಶಾಸಕ ಕೆ.ಎಸ್. ಬಸವಂತಪ್ಪ, ಮೇಯರ್ ವಿನಾಯಕ ಪೈಲ್ವಾನ್, ಐ.ಜಿ.ಪಿ. ಕೆ. ತ್ಯಾಗರಾಜನ್, ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್, ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದ ಆವರಣದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಾಯಿತು. ಕಲಾ ತಂಡಗಳೊಂದಿಗೆ ಮೆರವಣಿಗೆಯು ಜಿಲ್ಲಾ ಕ್ರೀಡಾಂಗಣ ತಲುಪಿತು.