ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ
ದಾವಣಗೆರೆ, ಅ. 30- ವಿಶ್ವವಿದ್ಯಾಲಯದ ದೃಶ್ಯ ಕಲಾ ಮಹಾವಿದ್ಯಾಲ ಸ್ಥಾಪನೆಗೊಂಡು ಅರವತ್ತು ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಜನವರಿಯಿಂದ ವರ್ಷವಿಡೀ ಕಲೆಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಹೇಳಿದರು.
ನಗರದ ವಿವಿ ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ವಿಜಯಪುರದ
ಸೋಮಶೇಖರ ಸಾಲಿ ಪ್ರತಿಷ್ಠಾನದ ಸಹಯೋಗದಲ್ಲಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಇಂದು ಹಮ್ಮಿಕೊಂಡಿದ್ದ ಮೂರು ದಿನಗಳ ಸೋಮಶೇಖರ ಸಾಲಿಯವರ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಧ್ಯ ಕರ್ನಾಟಕದ ಏಕೈಕ ದಾವಣಗೆರೆ ವಿವಿ ದೃಶ್ಯಕಲಾ ಮಹಾವಿದ್ಯಾಲಯ ಇದಾಗಿದ್ದು, 60 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಬರುವ ಜನವರಿಯಿಂದ ಡಿಸೆಂಬರ್‌ವರೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ತನ್ಮೂಲಕ ಸುಪ್ತ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಲಾಗುವುದು ಎಂದರು.
ಎಲೆಮರೆ ಕಾಯಿಯಂತೆ ಇರುವ ಕಲಾ ಪ್ರತಿಭೆಗಳನ್ನು ಗುರುತಿಸಿ ವಿಶ್ವವಿದ್ಯಾಲಯದ ಗಮನಕ್ಕೆ ತರುವಂತೆ ಮನವಿ ಮಾಡಿದರು.
ಉತ್ತರ ಕರ್ನಾಟಕದ ಮೂಲದ ಸೋಮಶೇಖರ ಸಾಲಿಯವರು ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದು ವಿಶೇಷ. ಅವರ ಮರಣದ ನಂತರ ಅವರ ಕುಟುಂಬ ವರ್ಗದವರು ಪ್ರತಿಷ್ಠಾನ ಮಾಡಿಕೊಂಡು ಸಾಲಿಯವರ ಕಲೆಯನ್ನು ಪರಿಚಯಿಸುತ್ತಿರುವುದು ಸಂತಸದ ವಿಚಾರ ಎಂದರು.
ಕಲಾ ವಿಮರ್ಶಕ ಡಿ.ಎ. ಉಪಾಧ್ಯ ಮಾತನಾಡಿ, ಸೋಮಶೇಖರ ಸಾಲಿಯವರ ಕಲಾಕೃತಿಗಳು ಸೂಕ್ಷ್ಮ ಸಂವೇದನೆಯನ್ನು ಹೊಂದಿವೆ. ಅವರ ಜೀವನವೇ ಸೃಜಶೀಲವಾಗಿತ್ತು. ಸಾಲಿಯವರ ಕಲಾಕೃತಿಗಳು ಭಾರತೀಯ ಶೈಲಿ ಎಂದು ಹೇಳುವ ವರ್ಗವೂ ಸಹ ಇದೇ. ಆದರೆ ಅದು ಸರಿಯಲ್ಲ. ಕಲಾಕೃತಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವುಗಳು ಬ್ರಿಟಿಷ್ ಅಕಾಡೆಮಿಕ್ ಶೈಲಿಯ ರೀತಿ ಇವೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ಸಾಲಿಯವರ ಕಲಾಕೃತಿಗಳಲ್ಲಿ 24 ರೀತಿಯ ರೇಖೆಗಳೂ ಅದ್ಭುತವಾಗಿ ಅಭಿವ್ಯಕ್ತಗೊಂಡಿವೆ ಎಂದು ಉಪಾಧ್ಯ ವಿಶ್ಲೇಷಿಸಿದರು.
ಪ್ರತಿಷ್ಠಾನದ ವಿದ್ಯಾಧರ ಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂತಹ ಅದ್ಭುತ ಕಲಾಕೃತಿಗಳನ್ನು ರಚಿಸಿದ ನನ್ನ ತಂದೆ ಸೋಮಶೇಖರ ಸಾಲಿಯವರ ಶ್ರಮ ದೊಡ್ಡದು. ನನ್ನ ತಂದೆಯವರು ಕಲೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಇದಕ್ಕೆ ತಾಯಿಯವರ ಬೆಂಬಲ, ಸಹಕಾರ ಕಾರಣ ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ವಿಜಯಪುರದ ಪಿ.ಎಸ್. ಕಡೇಮನಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಭಿಯಂತರ ಶಿವಮೊಗ್ಗದ ಉಮಾಪತಿ ಶರ್ಮಾ, ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಜೈರಾಜ್ ಎಂ. ಚಿಕ್ಕಪಾಟೀಲ್ ಮತ್ತಿತರರು ಭಾಗವಹಿಸಿದ್ದರು.