ಆರ್.ಜಿ. ಕಾಲೇಜು ಪದವಿ ದಿನಾಚರಣೆ ಕಾರ್ಯಕ್ರಮ
ದಾವಣಗೆರೆ, ಅ. 30 – ಯುವ ಪದವೀಧರರು ಅವಕಾಶಗಳನ್ನು ಬಳಸಿಕೊಳ್ಳುವ ಜೊತೆಗೆ, ತಮ್ಮ ಪೋಷಕರು, ಸಮಾಜ ಹಾಗೂ ತಾವು ಅಧ್ಯಯನ ಮಾಡಿದ ಕಾಲೇಜಿಗೆ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಬಿ.ಡಿ. ಕುಂಬಾರ್ ಕಿವಿಮಾತು ಹೇಳಿದರು.
ನಗರದ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದ ಆರ್.ಜಿ. ಇನ್ಸ್ಟಿಟ್ಯೂಷನ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ನ 2020ರ ತಂಡದ ಪದವಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವ ಪದವೀಧರರಿಗೆ ಸಾಕಷ್ಟು ಅವಕಾಶಗಳಿವೆ. ಉನ್ನತ ಶಿಕ್ಷಣ, ಪಿ.ಹೆಚ್.ಡಿ., ಸ್ವಯಂ ಉದ್ಯೋಗ ಸೇರಿದಂತೆ ಹಲವಾರು ವಲಯಗಳು ಲಭ್ಯವಿವೆ. ಉದ್ಯಮಗಳನ್ನು ಆರಂಭಿಸುವುದರಿಂದ ಹಿಡಿದು ರಾಜಕೀಯಕ್ಕೆ ತೆರಳುವವರೆಗೆ ಎಲ್ಲ ಅವಕಾಶಗಳ ಬಗ್ಗೆ ಅರಿವು ಹೊಂದಬೇಕು ಎಂದವರು ಹೇಳಿದರು.
ದೊಡ್ಡ ಕನಸುಗಳನ್ನು ಕಾಣುವ ಮೂಲಕ ದೊಡ್ಡ ಸಾಧನೆಯ ಗುರಿ ಹೊಂದಬೇಕು. ಸಣ್ಣ ಗುರಿಗಳಿಂದ ಸಾಧನೆ ಮಾಡಲು ಸಾಧ್ಯವಾಗದು ಎಂದೂ ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಆರ್.ಜಿ. ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಪಿ.ಎಸ್. ಶಿವಪ್ರಕಾಶ್, ಕಾಲೇಜು ಈ ಬಾರಿ 9 ರಾಂಕ್ಗಳನ್ನು ಗಳಿಸಿದೆ. ಕಾಲೇಜಿನ ಮೂವರು ಸಿ.ಎ. ಉತ್ತೀರ್ಣರಾಗಿದ್ದಾರೆ ಎಂದು ಹೇಳಿದರು.
ಆರ್.ಜಿ. ಕಾಲೇಜಿನ ಅಧ್ಯಕ್ಷೆ ಶ್ವೇತ ಆರ್. ಗಾಂಧಿ ಅವರು ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲೆ ಜಿ.ಕೆ. ಗೀತಾ ವಾರ್ಷಿಕ ವರದಿ ಓದಿದರು.
ಕಾರ್ಯಕ್ರಮದಲ್ಲಿ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಅಧ್ಯಾಪಕ ವಿನಾಯಕ ಕೆ. ಭಂಡಾರಿ, ಬೂಸನೂರು ಶಾಲೆಯ ಸ್ಥಾಪಕ ಶಿವಯೋಗಿ, ಬೂಸನೂರು ಶಾಲೆಯ ಪ್ರಾಂಶುಪಾಲೆ ಅರ್ಚನಾ ಮತ್ತಿತರರು ಉಪಸ್ಥಿತರಿದ್ದರು.
ಕೆ. ಈಶ್ವರ ಪ್ರಸಾದ್ ಸ್ವಾಗತಿಸಿದರು. ಎಲ್.ಎಂ. ಶರಣ ಕುಮಾರ್ ಹಾಗೂ ಆರ್. ಪವಿತ್ರ ನಿರೂಪಿಸಿದರು. ಹೆಚ್. ಪ್ರವೀಣ್ ಕುಮಾರ್ ವಂದಿಸಿದರು.