ದಾವಣಗೆರೆ ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಬೃಹತ್ ಮೆರವಣಿಗೆ ನಡೆಯಿತು
ದಾವಣಗೆರೆ, ಅ. 29- ಹಿಂದುಳಿದ ಜನಾಂಗದವರೇ ರಾಮಾಯಣ-ಮಹಾಭಾರತದಂತಹ ಮಹಾಕಾವ್ಯ ಬರೆದವರು. ಇಂತಹ ಮಹಾಕಾವ್ಯಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ಮಾಡಲಾಗಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.
ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನ ಹಾಗೂ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ 11 ದಿನಗಳ ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವವನ್ನು ಸಸಿಗೆ ನೀರೆರೆ ಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಧರ್ಮ ಎಂದರೆ ತ್ಯಾಗ. ತ್ಯಾಗದ ಮೂಲಕವೇ ಧರ್ಮ ಸ್ಥಾಪನೆಯಾಗುತ್ತದೆ ಎಂದು ವಾಲ್ಮೀಕಿ ಋಷಿಗಳು ಹೇಳಿದ್ದಾರೆ. ರಾಮಾಯಣದಲ್ಲಿ ಅಣ್ಣ-ತಮ್ಮಂದಿರ ತ್ಯಾಗವಿದ್ದರೆ, ಮಹಾಭಾರತದಲ್ಲಿ ಅಣ್ಣ-ತಮ್ಮಂದಿರಲ್ಲಿ ಜಗಳವಿತ್ತು. ಈ ಎರಡು ವ್ಯತ್ಯಸಗಳಿರುವ ಮಹಾಕಾವ್ಯ ಬರೆದವರೇ ಹಿಂದುಳಿದ ಜನಾಂಗದವರು ಎಂದರು.
ವಾಲ್ಮೀಕಿ ಮತ್ತು ವ್ಯಾಸ ಮುನಿಗಳು ತಮ್ಮ ಮಹಾನ್ ಗ್ರಂಥಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಐದು ಸಾವಿರ ವರ್ಷಗಳ ಹಿಂದೆಯೇ ಧಾರ್ಮಿಕ ಸಂವಿಧಾನ ಬರೆ ದಿದ್ದಾರೆ. ಅಂಥವರ ಜಯಂತಿ ಆಚರಣೆ ಮಾಡು ವುದು ಎಲ್ಲರ ಸೌಭಾಗ್ಯವೇ ಸರಿ ಎಂದು ಹೇಳಿದರು.
11 ದಿನಗಳ ಕಾಲ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಆಚರಿಸುತ್ತಿರುವುದು ಸ್ವಾಗತಾರ್ಹ. ಇಂತಹ ಕಾರ್ಯಕ್ರಮಳಿಗೆ ಶ್ರೀಮಠದ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.
ಹಿಂದಿನ ವರ್ಷಕ್ಕಿಂತ ಈ ಬಾರಿ ವಾಲ್ಮೀಕಿ ಜಯಂತ್ಯುತ್ಸವ ವಿಜೃಂಭಣೆಯಿಂದ ಜರುಗಿದೆ. ಮುಂಬರುವ ದಿನಗಳಲ್ಲಿ ಜಯಂತ್ಯುತ್ಸವ ಇನ್ನೂ ವಿಶಾಲ ರೂಪ ಪಡೆಯಲಿದೆ ಎಂದರು.
ಕ್ಷೀಣಿಸುತ್ತಿರುವ ಜಾನಪದ ಕಲೆ ಮತ್ತು ಕಲಾ ವಿದರನ್ನು ಪೋಷಿಸುವ ಪ್ರಯತ್ನವನ್ನು ಜಯಂತಿ ಮೂಲಕ ಮಾಡುತ್ತಿರುವುದು ಸಂತಸದ ವಿಚಾರ ವಾಗಿದೆ. ದಾವಣಗೆೆರೆಯ ಕಾರ್ಯಕ್ರಮ ಇಡೀ ನಾಡಿಗೆ ಮಾದರಿಯಾಗಲಿ ಎಂದು ಹೇಳಿದರು.
ಬೆಂಗಳೂರಿನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರತ್ಯೇಕ ಪರಿಶಿಷ್ಟ ಪಂಗಡದ ಸಚಿವಾಲಯ ರಚನೆ ಮಾಡುವುದಾಗಿ ಘೋಷಣೆ ಮಾಡಿರುವ ರಾಜ್ಯ ಸರ್ಕಾರಕ್ಕೆ ಸಮಸ್ತ ನಾಯಕ ಸಮಾಜದ ಪರ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಸಮಾಜದ ಮುಖಂಡರೂ, ರೈತ ನಾಯಕರಾದ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಪಂಜಾಬ್ನಲ್ಲಿ ಜಾರಿಗೊಂಡಿರುವ `ವಾಲ್ಮೀಕಿ ಪ್ರೋಟೆಕ್ಷನ್ ಆಕ್ಟ್’ ರಾಜ್ಯದಲ್ಲಿ ಜಾರಿಗೆ ತರುವಂತೆ ಕಳೆದ ವರ್ಷವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಇದೂವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಶಾಸಕ ಬಸವಂತಪ್ಪ ಅವರು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುವಂತೆ ಮನವಿ ಮಾಡಿದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಬೆಳಗಾವಿಯಲ್ಲಿ ನಡೆಯಲಿರುವ `ವಾಲ್ಮೀಕಿ ಪ್ರೋಟೆಕ್ಷನ್ ಆಕ್ಟ್’ ಬಗ್ಗೆ ಧ್ವನಿ ಎತ್ತುವುದಾಗಿ ತಿಳಿಸಿದರು.
ವಾಲ್ಮೀಕಿ ಸಮಾಜ ಸಹೋದರ ಸಮಾಜವಾಗಿದ್ದು, ಸಮಾಜ ನನ್ನನ್ನು ಯಾವತ್ತು ಬೆಂಬಲಿಸುತ್ತಾ ಬಂದಿದೆ ಎಂದು ಹೇಳಿದರು.
ಸಮಾಜದ ಮುಖಂಡ ಹೊದಿಗೆರೆ ರಮೇಶ್ ಅವರು, ಚನ್ನಗಿರಿಯಲ್ಲಿ ವಾಲ್ಮೀಕಿ ಮೂರ್ತಿ ತೆರವು ವಿಚಾರದ ಬಗ್ಗೆ ಪ್ರಸ್ತಾಪಿಸಿ, ಈ ವಿಚಾರ ಸ್ಥಳಿಯ ಪುರಸಭೆಯಲ್ಲಿ ಒಪ್ಪಿಗೆ ಪಡೆದು, ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದೆ. ಮೂವತ್ತು ದಿನಗಳ ನೋಟೀಸ್ ಅವಧಿಯಲ್ಲಿದ್ದು, ಈ ಕಾರ್ಯ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಚನ್ನಗಿರಿಯಲ್ಲಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಆಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಎಸ್.ಎಂ.ಪಿ. ತಿಪ್ಪೇಸ್ವಾಮಿ, ಹೂವಿನಮಡು ನಾಗರಾಜ್, ಇಟಗಿ ಹನುಮಂತ, ಗುಮ್ಮನೂರು ಬಸವರಾಜ್, ಎಲೋದಹಳ್ಳಿ ರವಿ, ಆಲೂರು ಪರಶುರಾಮ್, ಕರಿಯಪ್ಪ ನಾಯಕ, ಮಹಾನಗರ ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್, ಗಣೇಶ್ ಹುಲ್ಮನಿ ಮತ್ತಿತರರಿದ್ದರು.
`ಸರಿಗಮಪ’ ಗಾಯನ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದ ಶ್ವೇತಾ ಅವರನ್ನು ಸನ್ಮಾನಿಸಲಾಯಿತು.