ದಾವಣಗೆರೆ, ಅ.29- ಬರಲಿರುವ ಲೋಕಸಭೆ ಚುನಾವಣೆಯಲ್ಲಿ ದಾವಣಗೆೆರೆ ಕ್ಷೇತ್ರಕ್ಕೆ ಪಕ್ಷದ ಮೂಲ ಮತ್ತು ಪಕ್ಷ ನಿಷ್ಠೆ ಹೊಂದಿರುವ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿಯ ಹಿರಿಯ ಮತ್ತು ಕಿರಿಯ ಸಮಾನ ಮನಸ್ಕರ ಸಭೆಯಲ್ಲಿ ಪಕ್ಷದ ವರಿಷ್ಠರನ್ನು ಆಗ್ರಹ ಪಡಿಸಲಾಯಿತು.
ನಗರದ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಇಂದು ಬೆಳಿಗ್ಗೆ ನಡೆದ ಈ ಸಭೆಯಲ್ಲಿ, ಪಕ್ಷದ ಟಿಕೆಟ್ ಅನ್ನು ಯಾರಿಗೇ ಕೊಟ್ಟರೂ ಅವರ ಗೆಲುವಿಗೆ ಶ್ರಮಿಸುತ್ತೇವೆ. ಆದರೆ, ಟಿಕೆಟ್ ಪಡೆದಿರುವ ವ್ಯಕ್ತಿ ಮೂಲ ಬಿಜೆಪಿ ಮತ್ತು ನಿಷ್ಠಾವಂತ ಕಾರ್ಯಕರ್ತರಾಗಿರಬೇಕು ಎಂಬ ಧ್ಯೇಯ ವಾಕ್ಯ ಈ ಸಭೆಯದ್ದಾಗಿದೆ ಎಂದು ಕಾರ್ಯಕರ್ತರು ಹೇಳಿದರು.
ಸಭೆಯಲ್ಲಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡರುಗಳಾದ ಹೆಚ್.ಎಸ್. ಲಿಂಗರಾಜು, ಕೃಷ್ಣಮೂರ್ತಿ ಪವಾರ್ ಸೇರಿದಂತೆ ಹಲವರು, ಪಕ್ಷದ ಟಿಕೆಟ್ ಪಡೆದು ಗೆದ್ದವರು, ಪಕ್ಷಕ್ಕಾಗಿ ತ್ಯಾಗ ಮಾಡಿ ದವರು ಮತ್ತು ದುಡಿದವರನ್ನು ಮೂಲೆ ಗುಂಪಾಗಿ ಮಾಡಿದ್ದಾರೆ ಎಂದು ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಸುಮಾರು ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಿದ್ದಲ್ಲದೇ, ಜೈಲಿಗೂ ಹೋಗಿ ಬಂದಿದ್ದಾರೆ. ಇಂತಹವರನ್ನು ಬದಿಗೊತ್ತಿ ನಿನ್ನೆ – ಮೊನ್ನೆ ಬಂದವರಿಗೆ ಮತ್ತು ಪಕ್ಷದ ತತ್ವ – ಸಿದ್ಧಾಂತ ಗೊತ್ತಿಲ್ಲದವರಿಗೆ ಮಣೆ ಹಾಕಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಮತ್ತು ಮಾಜಿ ಸಚಿವ ಎಂ.ಪಿ. ರೇಣುಕಾ ಚಾರ್ಯ ಇಬ್ಬರೂ ಪಕ್ಷಕ್ಕೆ ಹಾನಿಯನ್ನುಂಟು ಮಾಡುವಂತಹ ಹೇಳಿಕೆಗಳನ್ನು ನೀಡುತ್ತಿ ದ್ದಾರೆ. ಇವರ ವೈಯಕ್ತಿಕ ಹೇಳಿಕೆಗಳೇ ಪಕ್ಷಕ್ಕೆ ಕೆಟ್ಟ ಹೆಸರು ಬರುವಂತಾಗುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ವ್ಯಕ್ತಿ ನಿಷ್ಠೆಗಿಂತ ಪಕ್ಷ ನಿಷ್ಠೆ ಮುಖ್ಯ. ಈ ನಿಟ್ಟಿನಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ಕಡೆಗಣಿಸಿದ ಪರಿಣಾಮ, ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ
ಸೋಲು ಕಾಣಬೇಕಾಯಿತು. ಇದೇ
ಪರಿಸ್ಥಿತಿ ಮುಂದುವರೆದಲ್ಲಿ ಲೋಕಸಭಾ ಚುನಾವಣೆಯಲ್ಲೂ ಸೋಲು ಮರುಕಳಿಸುವುದು ಕಟ್ಟಿಟ್ಟ ಬುತ್ತಿ ಎಂದು ಅವರು ಪಕ್ಷದ ವರಿಷ್ಠರನ್ನು ಎಚ್ಚರಿಸಿದರು.
ಪಕ್ಷ ಮತ್ತು ದೇಶವನ್ನು ಮುನ್ನಡೆಸುವಲ್ಲಿ ನರೇಂದ್ರ ಮೋದಿಯವರ ಶ್ರಮ ಅಪಾರ. ಅವರು ಮತ್ತೆ ಪ್ರಧಾನ ಮಂತ್ರಿಯಾಗಬೇಕು. ಈ ದಿಸೆಯಲ್ಲಿ ಮತ್ತೊಮ್ಮೆ ಬಿಜೆಪಿ, ಮಗದೊಮ್ಮೆ ನಮೋ ಪ್ರಧಾನಿಯಾಗಲು ಕಂಕಣಬದ್ಧರಾಗಿ ದುಡಿಯುತ್ತೇವೆ ಎಂದು ಅವರು ಪಣ ತೊಟ್ಟರು.
ಕೆ.ಎನ್. ಓಂಕಾರಪ್ಪ, ಪಿ.ಎಸ್. ಜಯಣ್ಣ, ಶ್ರೀಮತಿ ಸರೋಜ ದೀಕ್ಷಿತ್, ಆರ್. ಪ್ರತಾಪ್, ಗೋಪಾಲರಾವ್ ಸಾವಂತ್, ಗುಬ್ಬಿ ಬಸವರಾಜ್, ಮಟ್ಟಿಕಲ್ ಪ್ರದೀಪ್, ಬಾಳೆಕಾಯಿ ಉಮಾಪತಿ, ವಕೀಲ ರಾಘವೇಂದ್ರ, ನಿಂಗರಾಜ್ ಹಾವನೂರು, ಚಂದ್ರಪ್ಪ ಹಾಲೇಕಲ್ಲು, ಮೂರ್ತಿ, ಸಂತೋಷ್, ರಾಮಚಂದ್ರ, ಹನುಮಂತಪ್ಪ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.