ಯೋಜನೆ ಬಗ್ಗೆ ಮಾಹಿತಿ ನೀಡಿದ ರಾಜ್ಯ ಸಂಚಾಲಕ ಎಸ್.ಎ. ರಾಮದಾಸ್
ದಾವಣಗೆರೆ, ಅ.26- ಪಿಎಂ ವಿಶ್ವಕರ್ಮ ಯೋಜನೆಯಿಂದ ಗ್ರಾಮೀಣ ಮತ್ತು ನಗರ ಪ್ರದೇಶದ 18 ವರ್ಗಗಳ ಕುಶಲಕರ್ಮಿಗಳಿಗೆ ಪ್ರಯೋಜನ ದೊರಕಲಿದ್ದು, ಅರ್ಹರು ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ಪಿಎಂ ಸ್ವನಿಧಿ ಮತ್ತು ಪಿಎಂ ವಿಶ್ವಕರ್ಮ ಯೋಜನೆಯ ರಾಜ್ಯ ಸಂಚಾಲಕ ಎಸ್.ಎ. ರಾಮದಾಸ್ ಮನವಿ ಮಾಡಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಹಾಗೂ ಪಿಎಂ ಸ್ವನಿಧಿ ಯೋಜನೆ ಕುರಿತು ಅವರು ಮಾಹಿತಿ ನೀಡಿದರು.
ದೇಶದಲ್ಲಿನ ಕುಶಲಕರ್ಮಿಗಳ ಅಭ್ಯುದಯಕ್ಕೆ ನೆರವು ಕಲ್ಪಿಸಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಮತ್ತು ಅಸಂಘಟಿತ ವಲಯದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯನ್ನು ಜಾರಿ ಗೊಳಿಸಿದೆ. ಈ ಯೋಜನೆಗಳ ಜಾಗೃತಿಗಾಗಿ ತಾವು ರಾಜ್ಯ ಪ್ರವಾಸ ಮಾಡುತ್ತಿರುವುದಾಗಿ ಹೇಳಿದರು.
ಮುಂದಿನ ಐದು ವರ್ಷಗಳ ಕಾಲ ಅಂದರೆ 2028ರವರೆಗೆ ಈ ಎರಡೂ ಯೋಜನೆಗಳು ಇರಲಿವೆ. ಕೇಂದ್ರ ಸರ್ಕಾರ 13 ಸಾವಿರ ಕೋಟಿ ಹಣವನ್ನು ನೀಡಿದೆ. ರಾಜ್ಯದಲ್ಲಿ 18 ಜಿಲ್ಲೆಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿದ್ದು, ಅದರಲ್ಲಿ ದಾವಣಗೆರೆ ಜಿಲ್ಲೆಯೂ ಒಂದಾಗಿದೆ ಎಂದು ರಾಮದಾಸ್ ಹೇಳಿದರು.
ಫಲಾನುಭವಿಗಳಿಗೆ ನೀಡುವ ಸಾಲ ಸೌಲಭ್ಯಕ್ಕೆ ಕೇಂದ್ರ ಸರ್ಕಾರವು ಶೇ.8ರಷ್ಟು ಬಡ್ಡಿ ಹಣ ಪಾವತಿ ಮಾಡಲಿದೆ. ಈ ಯೋಜನೆಗಳಿಗೆ ರಾಜ್ಯದಲ್ಲಿ 7.36 ಲಕ್ಷ ಜನರು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯ ಕೆ.ಎನ್. ನವೀನ್, ಮಾಜಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿ ಸ್ವಾಮಿ, ಪಾಲಿಕೆ ಉಪಮೇಯರ್ ಯಶೋಧ ಯಗ್ಗಪ್ಪ, ಜಗದೀಶ್, ಲೋಕಿಕೆರೆ ನಾಗರಾಜ್, ಯಶವಂತ ರಾವ್ ಜಾಧವ್, ಕೊಳೇನಹಳ್ಳಿ ಬಿ.ಎಂ. ಸತೀಶ್ ಮತ್ತಿತರರಿದ್ದರು.