ದಾವಣಗೆರೆ, ಅ. 24 – ನಗರದ ಹೈಸ್ಕೂಲ್ ಮೈದಾನದಲ್ಲಿರುವ ಟೆನ್ನಿಸ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಅಂತರರಾಷ್ಟ್ರೀಯ ಮಟ್ಟದ ಪುರುಷರ ಟೆನ್ನಿಸ್ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಮತ್ತಿತರೆ ಗಣ್ಯರು ಬಲೂನುಗಳನ್ನು ತೇಲಿ ಬಿಡುವ ಮೂಲಕ ಚಾಲನೆ ನೀಡಿದರು.
ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್ ಹಾಗೂ ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್‌ಗಳ ಸಂಯುಕ್ತಾಶ್ರಯದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ.
ಉದ್ಘಾಟನೆ ನೆರವೇರಿಸಿ ಮಾತನಾಡಿದ ವೆಂಕಟೇಶ್, ದಾವಣಗೆರೆ ನಗರದಲ್ಲಿ ಮೂರನೇ ಬಾರಿಗೆ ಅಂತರರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ. ಇಲ್ಲಿ ಪಂದ್ಯಾವಳಿ ಆಯೋಜಿಸಿರುವುದು ಯುವಕರಿಗೆ ಸ್ಫೂರ್ತಿಯಾಗಲಿದೆ ಎಂದರು.
ಟೆನ್ನಿಸ್ ಪಂದ್ಯವು ಆಕರ್ಷಕ ಹಾಗೂ ಸ್ಫೂರ್ತಿ ತುಂಬುವ ಕ್ರೀಡೆಯಾಗಿದೆ. ಇಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ದೇಶದ ವಿವಿಧ ಭಾಗಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ನಿವೃತ್ತ ಏರ್ ಮಾರ್ಷಲ್ ಹೆಚ್.ಬಿ. ರಾಜಾರಾಮ್, ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು. ಅತ್ಯುತ್ತಮ ಪ್ರದರ್ಶನ ನೀಡುವ ಉತ್ಸಾಹ ಇದ್ದಾಗ, ಇಂದಲ್ಲದಿದ್ದರೂ ಮುಂದಾದರೂ ಅದರ ಫಲ ಸಿಗುತ್ತದೆ ಎಂದು ಹೇಳಿದರು.
ವೇದಿಕೆ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಪಾಲಿಕೆ ಆಯುಕ್ತೆ ರೇಣುಕಾ, ಉದ್ಯಮಿ ಸಮರ್ಥ್ ಶಾಮನೂರು, ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಕೆ.ಪಿ. ಚಂದ್ರಪ್ಪ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಟೆನ್ನಿಸ್ ಒಕ್ಕೂಟದ ಅಧ್ಯಕ್ಷ ಎಸ್.ಎಂ. ಬ್ಯಾಡಗಿ ಸ್ವಾಗತಿಸಿದರು. ನಮ್ರತಾ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರಾದ ಐನಳ್ಳಿ ಜಯದೀಪ್, ರಘು ಅಂಬರ್‌ಕರ್, ಶರತ್ ವಾಲಾವಲ್ಕರ್, ವಿನಯ್, ಹರ್ಷ, ವಿಶಾಲ್ ಸುರ್ವಿ, ಮಂಜುನಾಥ್, ಶರತ್ ರಾಜ್, ಮಂಜುನಾಥ್, ಅಶೋಕ್, ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.