ಪುಣ್ಯ ಕಾರ್ಯಗಳೇ ನಮಗೆ ರಕ್ಷಾಕವಚ : ನಾಲ್ವಡಿ ಶಾಂತಲಿಂಗ ಶ್ರೀ

ಪುಣ್ಯ ಕಾರ್ಯಗಳೇ ನಮಗೆ ರಕ್ಷಾಕವಚ : ನಾಲ್ವಡಿ ಶಾಂತಲಿಂಗ ಶ್ರೀ

ದಾವಣಗೆರೆ, ಅ.24-  ನಾವು ಮಾಡಿದ ಪುಣ್ಯ ಕಾರ್ಯಗಳೇ ನಮಗೆ ರಕ್ಷಾಕವಚ ಎಂದು ಜಗಳೂರು ಕಣ್ವಕುಪ್ಪೆ ತಪೋಕ್ಷೇತ್ರದ ಶ್ರೀ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ವಿಶ್ವ ಹಿಂದೂ ಪರಿಷದ್, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಆಶ್ರಯದಲ್ಲಿ ಮಂಗಳವಾರ ಸಂಜೆ  ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬನ್ನಿ ಮುಡಿಯುವ ಹಾಗೂ ಅಂಬಛೇದನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಭಗವಂತ ಇದ್ದಾನೋ ಇಲ್ಲವೋ ಎಂಬ ಜಿಜ್ಞಾಸೆ ಇಂದಿನ ಪೀಳಿಗೆಯಲ್ಲಿ ಕಾಡುತ್ತಿದೆ. ಭಗವಂತನ ನಮಗೆ ಏನೂ ಮಾಡಿಲ್ಲ ಎಂದು ಧರ್ಮಾಂತರಗೊಂಡ ಉದಾಹರಣೆಗಳೂ ಇವೆ. ಆದರೆ ಈ ಪಂಚತತ್ವಗಳು, ಪಂಚ ಕರ್ಮೇಂದ್ರಿಯಗಳು, ಪಂಚೇಂದ್ರಿಯಗಳು, ತನ್ಮಾತೃತೆಗಳು ಭಗವಂತನ ಕೊಡುಗೆ ಎಂಬುದನ್ನು ಅರಿಯಬೇಕು ಎಂದರು.

ಸೂರ್ಯ-ಚಂದ್ರರ ಪ್ರಕಾಶತೆಯನ್ನು ಜೀವನದು ದ್ದಕ್ಕೂ ನಾವು ಬಳಸಿಕೊಳ್ಳುತ್ತೇವೆ. ಬದುಕಲು ಅಗತ್ಯವಾಗಿ ಬೇಕಾದ ಗಾಳಿ ಹಾಗೂ ನೀರನ್ನು ಬಳಕೆ ಮಾಡುತ್ತೇವೆ. ಇವೆಲ್ಲವೂ ಭಗ ವಂತನ ಕೊಡುಗೆಯೇ. ಇದನ್ನು ಅರ್ಥೈಸಿಕೊಂಡು ನಡೆದಾಗ ಬದುಕು ಸಾರ್ಥಕವಾಗುತ್ತದೆ. 

ಧಾರ್ಮಿಕ ಭಾವನೆ, ವಿದ್ಯೆ, ಧರ್ಮ ಗುರುಗಳ ಬಗ್ಗೆ ಶ್ರದ್ಧೆ, ಹೆತ್ತವರ ಬಗ್ಗೆ ಗೌರವ, ನಮ್ಮ ಸಂಸ್ಕೃತಿ, ಪರಂಪರೆಯ ಬಗ್ಗೆ ಗೌರವ ಇಟ್ಟುಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಶ್ರೀಗಳು ಕರೆ ನೀಡಿದರು.

ಭಾರತ ವಿಶ್ವ ಗುರುವಾಗಿ ಮೆರೆದ ದೇಶ. ಅದಕ್ಕೆ ಕಾರಣ ಇಲ್ಲಿನ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಪರಂ ಪರೆ ಹಾಗೂ ಅಧ್ಯಾತ್ಮ. ಇಂತಹ ಪರಂಪರೆಯನ್ನು ಅನು ಗ್ರಹಿಸಿದ್ದು, ಇಲ್ಲಿನ ಶರಣರು, ಸಂತರು. ಅವರನ್ನು ಪಡೆದ ನಾವೇ ಭಾಗ್ಯಶಾಲಿಗಳು ಎಂದು ಸ್ವಾಮೀಜಿ ಹೇಳಿದರು.

ಪಂಚ ಕರ್ಮೇಂದ್ರಿಯಗಳು ಹಾಗೂ ಪಂಚ ಜ್ಞಾನೇಂದ್ರಿಯಗಳು ಸೇರಿ ಹತ್ತು ಇಂದ್ರಿಯಗಳನ್ನು ಜಾಗೃತಗೊಳಿಸುವ ಅರ್ಥವೇ ದಶಮಿ ಆಚರಣೆ. ನಮ್ಮ ಇಂದ್ರಿಯಗಳನ್ನು ವ್ರತ, ಆಚರಣೆ, ಯೋಗ, ಧ್ಯಾನದ ಮೂಲಕ ಸರಿಪಡಿಸಿಕೊಳ್ಳಬೇಕು ಎಂಬುದನ್ನು ನಮ್ಮ ಪೂರ್ವಜರು ಹೇಳಿದ್ದಾರೆ ಎಂದರು.

ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಘನರಾಜ್ ಭಟ್ ಕೆದಿಲಾ ಮಾತನಾಡುತ್ತಾ, ಪ್ರಪಂಚದಲ್ಲಿ ಅತಿ ಹೆಚ್ಚು ದಾಳಿಗಳಿಗೆ ಒಳಗಾದದ್ದು  ಭಾರತ ದೇಶ. ಆದಾಗ್ಯೂ ನಮ್ಮ ಸನಾತನ ಧರ್ಮ ಉಳಿದಿದೆ ಎಂದರೆ, ಅದಕ್ಕೆ ಕಾರಣ ಅಣು ರೇಣು ತೃಣಕಾಷ್ಟಗಳಲ್ಲಿ ದೇವರನ್ನು ಕಂಡಿದ್ದೇ ಕಾರಣ ಎಂದರು.

ಬಿದ್ದವನನ್ನು ಉದ್ಧರಿಸುವುದೇ ಧರ್ಮ. ಆದರ ಮೂಲ ಸ್ಥಾನ ಭಾರತದಲ್ಲಿದೆ. ಆದರೆ ಇಡೀ ಪ್ರಪಂಚಕ್ಕೆ ಧರ್ಮದ ಅರ್ಥ ಬೋಧಿಸುವ ಈ ಭಾರತದಲ್ಲಿ ಧಾರ್ಮಿಕ ಭಾಷಣಗಳು ಅಗತ್ಯವೇ ಎಂದು ಪ್ರಶ್ನಿಸುವ ದಿನಗಳು ಬಂದಿವೆ. ನಮ್ಮೊಳಗಿನ ಧರ್ಮ ಪ್ರಜ್ಞೆಯನ್ನು ನೆನಪಿಸಲು ಈ ಧಾರ್ಮಿಕ ಭಾಷಣದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಪಠ್ಯದಲ್ಲಿ ತಿಳಿಸದಿದ್ದರೂ ತಾಯಿಯಲ್ಲಿ ದೇವರನ್ನು ಕಂಡು, ದೇವರಲ್ಲಿ ತಾಯಿ ಕಾಣಲು ಹೊರಟವರು ನಾವು. ಆದರೆ ಪಾಶ್ಚಾತ್ಯ ಸಂಸ್ಕೃತಿ ದಾಳಿಯಿಂದಾಗಿ ಸಂಸ್ಕೃತಿ, ಸಂಸ್ಕಾರಗಳನ್ನು ಕಡೆಗಣಿಸಿದ್ದೇವೆ. ಆತ್ಮದೊಳಗಿನ ಬ್ರಹ್ಮತ್ವ, ದೇವತ್ವ ತೋರಿಸುತ್ತಿದ್ದ ನಮ್ಮ ಗುರುಕುಲ ಶಿಕ್ಷಣ ಪದ್ಧತಿ ಮರೆಯಾಗಿ ಮೆಕಾಲೆಯ ಪಠ್ಯ ಕ್ರಮದಿಂದಾಗಿ ಸಂಸ್ಕೃತಿ, ಸಂಸ್ಕಾರ ನಾಶವಾಗುತ್ತಿದೆ. ಇದು ಮಾತೃ ಸಂಸ್ಕೃತಿಯನ್ನು ಬದಲಾಯಿಸಬೇಕೆಂದು ಹೊರಟ ಬ್ರಿಟೀಷರ ತಂತ್ರವಾಗಿತ್ತು ಎಂದರು.

9 ದಿನಗಳ ಶಕ್ತಿ ದೇವತೆ ಆರಾಧನೆ ಈ ಉತ್ಸವ, ಪ್ರಕೃತಿಯ ಆರಾಧನೆಯೂ ಹೌದು.ಕಷ್ಟ ಬಂದಾಗ ತಾಯಿಯ ಮೊರೆ ಹೋಗಬೇಕೆಂಬುದು ಪುರಾಣ ಕಥೆಗಳಿಂದಲೂ ತಿಳಿದು ಬಂದಿದೆ. ರಾವಣನನ್ನು ಸಂಹರಿಸಲು ರಾಮನಿಗೆ ಸಾಧ್ಯವಾಗದೇ ಇದ್ದಾಗ ರಾಮ ನವರಾತ್ರಿ ಉತ್ಸವ ಆಚರಿಸಿ, ದೇವಿಯ ಸಹಕಾರದಿಂದ ಯಶ ಸಾಧಿಸುತ್ತಾನೆ. ಪಾಂಡವರು ಮತ್ತೆ ಆಯುಧ ಹಿಡಿದದ್ದು ವಿಜಯದಶಮಿಯಂದು. ಅಂತಹ ಮಹತ್ವ ಈ ವಿಜಯದಶಮಿ ಹಬ್ಬಕ್ಕಿದೆ ಎಂದರು.

ಎನ್. ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 9 ದಿನಗಳ ಕಾಲ ಉತ್ಸವ ಯಶಸ್ವಿಯಾಗಿ ನಡೆಸಲು ಶ್ರಮಿಸಿದ ಮಹಿಳೆಯರು, ಯುವಕರು ಹಾಗೂ ನಾಯಕರಿಗೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಕೃತಜ್ಞತೆ ಅರ್ಪಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅಂಬುಛೇದನ ನಡೆಸಿಕೊಟ್ಟರು. ವಕೀಲ ಎಸ್.ಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.  ಕೆ.ಆರ್. ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು. ಸತೀಶ್ ಪೂಜಾರಿ ಸ್ವಾಗತಿಸಿದರು.  ಜಯಣ್ಣ ನಿರೂಪಿಸಿದರು. ಕು.ವರ್ಷಿಣಿ ಪ್ರಾರ್ಥಿಸಿದರು.

error: Content is protected !!